ನಾಳೆ ಕೋಲ್ಕತಾದಲ್ಲಿ ಐಪಿಎಲ್ ಉದ್ಘಾಟನೆ | ಕೆಕೆಆರ್-ಆರ್‌ಸಿಬಿ ಪಂದ್ಯಕ್ಕೆ ಮಳೆ ಭೀತಿ

Update: 2025-03-21 20:50 IST
RCB AND KKR

 ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕೋಲ್ಕತಾ ನೈಟ್ ರೈಡರ್ಸ್ | X

  • whatsapp icon

ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಈಡನ್‌ಗಾರ್ಡನ್ಸ್‌ನಲ್ಲಿ ಶನಿವಾರ ನಿಗದಿಯಾಗಿರುವ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಪ್ರತಿಷ್ಠಿತ ಮೈದಾನದಲ್ಲಿ ಚಾಲನೆ ನೀಡಲು ಯೋಜಿಸಲಾಗಿದೆ. ಆದರೆ, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಎಲ್ಲವೂ ನೀರಸವಾಗಿ ಪರಿಣಮಿಸಬಹುದು.

ಈ ಬಾರಿಯು ಐಪಿಎಲ್ ಟೂರ್ನಿಯು ಮಾ.22ರಿಂದ ಕೋಲ್ಕತಾದಲ್ಲಿ ಆರಂಭವಾಗಿ ಮೇ 25ರಂದು ಕೋಲ್ಕತಾದಲ್ಲಿಯೇ ಕೊನೆಯಾಗಲಿದೆ. ಮೇ 18ರ ತನಕ ಲೀಗ್ ಹಂತದ ಪಂದ್ಯ ನಡೆಯಲಿದ್ದು, ಮೇ 20ರಂದು ಮೊದಲ ಕ್ವಾಲಿಫೈಯರ್, ಮೇ 21ರಂದು ಎಲಿಮಿನೇಟರ್ ಸುತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಮೇ 23ರಂದು ಕ್ವಾಲಿಫೈಯರ್-2 ಕೋಲ್ಕತಾದಲ್ಲಿ ನಿಗದಿಯಾಗಿದೆ.

ಒಟ್ಟು 10 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, 13 ನಗರಗಳಲ್ಲಿ 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಪಂದ್ಯ 3:30 ಹಾಗೂ ರಾತ್ರಿ ಪಂದ್ಯ 7:30ಕ್ಕೆ ಆರಂಭವಾಗಲಿದೆ.

ಈಡನ್ ಗಾರ್ಡನ್ಸ್ ಸ್ಟೇಡಿಯಮ್ ಸುತ್ತಮುತ್ತ ಭಾರೀ ಮೋಡ ಕವಿದಿದ್ದು, ಗುರುವಾರ ಮುನ್ನಚ್ಚರಿಕೆಯ ಕ್ರಮವಾಗಿ ಮೈದಾನದ ಸಿಬ್ಬಂದಿ ಆಡುವ ಪ್ರದೇಶದಲ್ಲಿ ಹೊದಿಕೆಗಳನ್ನು ಹಾಸಿದ್ದಾರೆ.

ಸ್ಟಾರ್ ಸಿಂಗರ್‌ಗಳಾದ ಶ್ರೇಯಾ ಘೋಷಾಲ್ ಹಾಗೂ ಕರಣ್ ಅವರಲ್ಲದೆ ಬಾಲಿವುಡ್ ನಟಿ ದಿಶಾ ಪಟಾನಿ ಉದ್ಘಾಟನಾ ಪಂದ್ಯಕ್ಕಿಂತ ಮೊದಲು ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದಾರೆ.

ಆದರೆ ಎಲ್ಲದ್ದಕ್ಕೂ ಮಳೆ ಭೀತಿ ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಈ ಪ್ರದೇಶದಲ್ಲಿ ‘ಆರೆಂಜ್ ಅಲರ್ಟ್‌‘ಘೋಷಿಸಿದೆ. ಶನಿವಾರದ ತನಕ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಹಗುರ ಹಾಗೂ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.

ಉದ್ಘಾಟನಾ ಪಂದ್ಯಕ್ಕೂ ಮುನ್ನ ಕೋಲ್ಕತಾದಲ್ಲಿ ಸ್ವಲ್ಪ ಹೊತ್ತು ಮಳೆಯಾಗಿದ್ದು, ಕೆಕೆಆರ್ ತಂಡದ ಅಭ್ಯಾಸ ಪಂದ್ಯವು ಕೇವಲ ಒಂದು ಇನಿಂಗ್ಸ್ ನಂತರ ರದ್ದಾಗಿದೆ. ಬುಧವಾರ ಹಾಗೂ ಗುರುವಾರ ನಗರದಲ್ಲಿ ಲಘು ಮಳೆಯಾಗಿದೆ. ಆದರೆ ಎರಡೂ ತಂಡಗಳು ತಮ್ಮ ಅಭ್ಯಾಸವನ್ನು ಪೂರ್ಣಗೊಳಿಸಿದ್ದವು.

ಐಪಿಎಲ್‌ನ ಉದ್ಘಾಟನಾ ದಿನವಾದ ಮಾರ್ಚ್ 22ರಂದು ಮಳೆ ಸುರಿಯುವ ಭೀತಿ ಇದೆ. ಶುಕ್ರವಾರ(ಪಂದ್ಯದ ಮುನ್ನಾದಿನ)ಹಾಗೂ ಶನಿವಾರ ಗರಿಷ್ಠ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಪಂದ್ಯವು ರಾತ್ರಿ 7:30ಕ್ಕೆ ನಿಗದಿಯಾಗಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಟಾಸ್‌ಗೆ ಮೊದಲು ಉದ್ಘಾಟನಾ ಸಮಾರಂಭವನ್ನು ಕೂಡ ಯೋಜಿಸಲಾಗಿದೆ.

ಐಪಿಎಲ್‌ನ ಲೀಗ್ ಹಂತದಲ್ಲಿ ಹೆಚ್ಚುವರಿ ಒಂದು ಗಂಟೆ ಸಮಯ ವಿಸ್ತರಣೆಗೆ ಅವಕಾಶ ಇದೆ. ಅಂದರೆ ಐದು ಓವರ್‌ಗಳ ಪಂದ್ಯವನ್ನು ಮಧ್ಯರಾತ್ರಿಯೊಳಗೆ ಮುಗಿಸಬೇಕು.

ಫಲಿತಾಂಶ ಬಾರದಿದ್ದರೆ, ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳುತ್ತವೆ. ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದ ನಂತರ ಕೆಕೆಆರ್ ಮಾರ್ಚ್ 26ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ಮಾರ್ಚ್ 28ರಂದು ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

►ಅಂಕಿ-ಅಂಶ, ಸಂಭಾವ್ಯ ಇಲೆವೆನ್ ಕುರಿತ ಮಾಹಿತಿ

ಕೋಲ್ಕತಾ ನೈಟ್ ರೈಡರ್ಸ್:

ನಾಯಕ: ಅಜಿಂಕ್ಯ ರಹಾನೆ

ಕೋಚ್: ಚಂದ್ರಕಾಂತ್ ಪಂಡಿತ್

ತವರು ಮೈದಾನ: ಈಡನ್ ಗಾರ್ಡನ್ಸ್, ಕೋಲ್ಕತಾ

ಶ್ರೇಷ್ಠ ಸಾಧನೆ: ಚಾಂಪಿಯನ್ಸ್(2012, 2014, 2024)

ಹಿಂದಿನ ಆವೃತ್ತಿ: ವಿನ್ನರ್

►ಪವರ್ ಪ್ಲೇ ಬೌಂಡರಿ ಪರ್ಸಂಟೇಜ್

ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಕೆಕೆಆರ್‌ನ ಪವರ್ ಪ್ಲೇ ಬೌಂಡರಿ ಪರ್ಸಂಟೇಜ್(26.1) ಪ್ರಮುಖ ಅಂಶವಾಗಿತ್ತು. ಫಿಲ್ ಸಾಲ್ಟ್ ಹಾಗೂ ಸುನೀಲ್ ನರೇನ್ ಅವರ ಸ್ಫೋಟಕ ಆರಂಭವು ಕೆಕೆಆರ್‌ನ ಪ್ರಶಸ್ತಿಗೆಲುವಿನ ಅಭಿಯಾನಕ್ಕೆ ಉತ್ತೇಜನ ನೀಡಿತ್ತು. ಈ ಋತುವಿನಲ್ಲಿ ಸಾಲ್ಟ್ ಬದಲಿಗೆ ಕ್ವಿಂಟನ್ ಡಿಕಾಕ್ ಆಡುತ್ತಿದ್ದಾರೆ. ಅದೇ ರೀತಿಯ ಆಕ್ರಮಣಕಾರಿ ಆಟ ಆಡುವ ಗುರಿ ಹೊಂದಿದ್ದಾರೆ. ಡಿಕಾಕ್ ಹಾಗೂ ನರೇನ್ ಪವರ್‌ಪ್ಲೇನಲ್ಲಿ ಪ್ರತೀ 4 ಎಸೆತಗಳಿಗೆ ಬೌಂಡರಿ ಗಳಿಸುವ ವಿಶ್ವಾಸದಲ್ಲಿದ್ದಾರೆ.

►ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಜಾದೂ

ಕೆಕೆಆರ್ ತಂಡವು ಇಬ್ಬರು ಪಂದ್ಯ ಗೆಲ್ಲಿಸಬಲ್ಲ ಸ್ಪಿನ್ನರ್‌ಗಳಾದ ಸುನೀಲ್ ನರೇನ್ ಹಾಗೂ ವರುಣ್ ಚಕ್ರವರ್ತಿಯವರನ್ನು ತನ್ನಲ್ಲೇ ಉಳಿಸಿಕೊಂಡಿದ್ದಲ್ಲದೆ, ಮೊಯಿನ್ ಅಲಿ ಅವರನ್ನು ಸೇರಿಸಿಕೊಂಡು ಸ್ಪಿನ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಈ ಮೂವರು ಮಧ್ಯಮ ಓವರ್‌ನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಗುರಿ ಇಟ್ಟುಕೊಂಡಿದ್ದಾರೆ. ಈ ಹಂತದಲ್ಲಿ ನರೇನ್ ಹಾಗೂ ವರುಣ್ 43 ಇನಿಂಗ್ಸ್ಸ್‌ಗಳಲ್ಲಿ ಒಟ್ಟು 55 ವಿಕೆಟ್‌ಗಳನ್ನು ಪಡೆದಿದ್ದಾರೆ.

►ಡೆತ್ ಓವರ್ ಆತಂಕ

ಕೆಕೆಆರ್ ತಂಡವು ಕಳೆದ 2 ವರ್ಷಗಳಲ್ಲಿ ಕೊನೆಯ 4 ಓವರ್‌ಗಳಲ್ಲಿ ಪರದಾಟ ನಡೆಸಿದೆ. ತಂಡದಲ್ಲಿ ಉತ್ತಮ ಡೆತ್ ಬೌಲರ್ ಕೊರತೆ ಇದೆ. ಹರ್ಷಿತ್ ರಾಣಾ, ಆಂಡ್ರೆ ರಸೆಲ್ ಹಾಗೂ ಅನ್ರಿಚ್ ನೋಟ್ಜೆ ದುಬಾರಿ ಬೌಲರ್ ಎನಿಸಿಕೊಂಡಿದ್ದು, 34 ಪಂದ್ಯಗಳಲ್ಲಿ 88 ಬೌಂಡರಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಈ ಮೂವರು ನಿರಂತರವಾಗಿ ವಿಕೆಟ್ ಕಬಳಿಸಿದ್ದು ಡೆತ್ ಓವರ್‌ನಲ್ಲಿ 25.80ರ ಸರಾಸರಿಯಲ್ಲಿ ಪ್ರತಿ 14 ಎಸೆತಗಳಲ್ಲಿ ವಿಕೆಟ್ ಪಡೆದಿದ್ದಾರೆ.

ಪವರ್‌ಪ್ಲೇನಲ್ಲಿನ ಆಕ್ರಮಣಕಾರಿ ಪ್ರದರ್ಶನ ಹಾಗೂ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಮೂಲಕ ರನ್ ನಿಯಂತ್ರಣ ಹಾಗೂ ಅನುಭವಿ ಫಿನಿಶರ್‌ಗಳನ್ನು ಅವಲಂಬಿಸಿರುವ ಕೆಕೆಆರ್ ತಂಡವು ಪ್ರಶಸ್ತಿ ಉಳಿಸಿಕೊಂಡು 4ನೇ ಐಪಿಎಲ್ ಟ್ರೋಫಿ ಗೆಲ್ಲಲಿದೆಯೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಇದೆ.

►ಆಡುವ 11ರ ಬಳಗ(ಸಂಭಾವ್ಯ)

ಅಗ್ರ ಸರದಿ: 1.ಕ್ವಿಂಟನ್ ಡಿಕಾಕ್, 2. ಸುನೀಲ್ ನರೇನ್, 3. ಎ.ರಘುವಂಶಿ.

ಮಧ್ಯಮ ಸರದಿ-ಆಲ್‌ರೌಂಡರ್‌ಗಳು

4. ಅಜಿಂಕ್ಯ ರಹಾನೆ, 5. ವೆಂಕಟೇಶ್ ಅಯ್ಯರ್, 6. ರಿಂಕು ಸಿಂಗ್, 7. ಆಂಡ್ರೆ ರಸೆಲ್, 8. ರಮಣ್‌ದೀಪ್ ಸಿಂಗ್

►ಬೌಲರ್‌ಗಳು

9. ಹರ್ಷಿತ್ ರಾಣಾ, 10. ವರುಣ್ ಚಕ್ರವರ್ತಿ, 11. ಅನ್ರಿಚ್ ನೋಟ್ಜೆ

ಇಂಪ್ಯಾಕ್ಟ್ ಪ್ಲೇಯರ್: ಮಯಾಂಕ್ ಮರ್ಕಂಡೆ/ವೈಭವ್ ಅರೋರ.

► ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸ್ಫೋಟಕ ಮಧ್ಯಮ ಕ್ರಮಾಂಕ ಹಾಗೂ ಶಿಸ್ತಿನ ಬೌಲಿಂಗ್ ವಿಭಾಗವನ್ನು ಒಳಗೊಂಡ ಸಮತೋಲಿತ ತಂಡದೊಂದಿಗೆ ಆರ್‌ಸಿಬಿ 2025ರ ಋತುವನ್ನು ಪ್ರವೇಶಿಸುತ್ತಿದೆ. ಬೆಂಗಳೂರು ತಂಡ ಅಂತಿಮವಾಗಿ ತನ್ನ ಪ್ರಶಸ್ತಿ ಬರವನ್ನು ನೀಗಿಸಿ ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಗೆಲ್ಲಬಹುದೇ? ಎಂಬ ಕಾತರ ಎಲ್ಲ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿದೆ.

ನಾಯಕ: ರಜತ್ ಪಾಟಿದಾರ್

ಕೋಚ್: ಆ್ಯಂಡಿ ಫ್ಲವರ್

ತವರು ಮೈದಾನ: ಎಂ.ಚಿನ್ನಸ್ವಾಮಿ ಸ್ಟೇಡಿಯಮ್

ಶ್ರೇಷ್ಠ ಸಾಧನೆ: ರನ್ನರ್ಸ್ ಅಪ್(2009, 2011,2016)

2024ರ ಸಾಧನೆ: 4ನೇ ಸ್ಥಾನ

►ಪವರ್ ಪ್ಲೇನಲ್ಲಿ ಮೂವರು ಉತ್ತಮ ಬೌಲರ್‌ಗಳು

ಆರ್‌ಸಿಬಿ ತಂಡವು ಪವರ್‌ಪ್ಲೇನಲ್ಲಿ ಭುವನೇಶ್ವರ ಕುಮಾರ್, ಕೃನಾಲ್ ಪಾಂಡ್ಯ ಹಾಗೂ ಜೋಶ್ ಹೇಝಲ್‌ವುಡ್ ಅವರಂತಹ ಅತ್ಯಂತ ಮಿತವ್ಯಯಿ ಬೌಲರ್‌ಗಳನ್ನು ಹೊಂದಿದೆ. ಈ ಮೂವರು ಮೊದಲ 6 ಓವರ್‌ಗಳಲ್ಲಿ 46.6 ರಷ್ಟು ಡಾಟ್‌ಬಾಲ್ ಶೇಕಡಾಂಶವನ್ನು ಕಾಯ್ದುಕೊಂಡಿದ್ದಾರೆ. ಈ ಹಂತದಲ್ಲಿ ಇಬ್ಬರು ವೇಗಿಗಳು ಒಟ್ಟು 19 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕೃನಾಲ್ ಕೇವಲ 2 ವಿಕೆಟ್ ಪಡೆದಿದ್ದಾರೆ.

►ಡೆತ್ ಓವರ್‌ನಲ್ಲಿ ಮಧ್ಯಮ ಸರದಿಯ ಉತ್ತಮ ಸ್ಟ್ರೈಕ್‌ರೇಟ್

ಆರ್‌ಸಿಬಿ ಮಧ್ಯಮ ಸರದಿಯು ಈ ವರ್ಷ ಡೆತ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ನ ಭರವಸೆ ಮೂಡಿಸಿದೆ. ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ 16 ಹಾಗೂ 20 ಓವರ್‌ಗಳ ಮಧ್ಯೆ ಪ್ರತೀ ಓವರ್‌ ಗೆ 11.30ರಂತೆ ರನ್ ಗಳಿಸಿದ್ದಾರೆ. ಹಿಂದಿನ 42 ಇನಿಂಗ್ಸ್‌ಗಳಲ್ಲಿ ಈ ಮೂವರು ಆಟಗಾರರು ಡೆತ್ ಓವರ್‌ನಲ್ಲಿ 105 ಬೌಂಡರಿಗಳನ್ನು ಬಾರಿಸಿದ್ದಾರೆ.

►ಆಡುವ 11ರ ಬಳಗ(ಸಂಭಾವ್ಯ)

ಅಗ್ರ ಸರದಿ: 1.ಫಿಲ್ ಸಾಲ್ಟ್, 2. ದೇವದತ್ತ ಪಡಿಕ್ಕಲ್, 3. ವಿರಾಟ್ ಕೊಹ್ಲಿ

ಮಧ್ಯಮ ಸರದಿ, ಆಲ್‌ರೌಂಡರ್‌ಗಳು: 4. ರಜತ್ ಪಾಟಿದಾರ್(ನಾಯಕ), 5. ಲಿಯಾಮ್ ಲಿವಿಂಗ್‌ಸ್ಟೋನ್, 6. ಜಿತೇಶ್ ಶರ್ಮಾ, 7. ಟಿಮ್ ಡೇವಿಡ್, 8.ಕೃನಾಲ್ ಪಾಂಡ್ಯ

ಬೌಲರ್‌ಗಳು: 9. ಭುವನೇಶ್ವರ ಕುಮಾರ್, 10. ಜೋಶ್ ಹೇಝಲ್‌ವುಡ್, 11. ಯಶ್ ದಯಾಳ್.

ಇಂಪ್ಯಾಕ್ಟ್ ಪ್ಲೇಯರ್: ರಸಿಕ್ ಸಲಾಮ್/ಸುಯಶ್ ಶರ್ಮಾ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News