ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಕುರಿತು ಹೇಳಿಕೆ ; ಕಾಮಿಡಿಯನ್ ಕುನಾಲ್ ಕಾಮ್ರಾ ಕಾರ್ಯಕ್ರಮ ನೀಡಿದ್ದ ಸ್ಟುಡಿಯೊ ಧ್ವಂಸ

Update: 2025-03-24 06:40 IST
ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಕುರಿತು ಹೇಳಿಕೆ ; ಕಾಮಿಡಿಯನ್ ಕುನಾಲ್ ಕಾಮ್ರಾ ಕಾರ್ಯಕ್ರಮ ನೀಡಿದ್ದ ಸ್ಟುಡಿಯೊ ಧ್ವಂಸ

PC: screengrab/x.com/zoo_bear

  • whatsapp icon

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು 'ಗದ್ದರ್' (ದ್ರೋಹಿ) ಎಂದು ಕರೆದಿರುವ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಕಾರ್ಯಕ್ರಮ ನೀಡಿರುವ ಸ್ಟುಡಿಯೊನಲ್ಲಿ ದಾಂಧಲೆ ನಡೆಸಿದ ಶಿವಸೇನೆ ಕಾರ್ಯಕರ್ತರು, ಅದನ್ನು ಧ್ವಂಸ ಮಾಡಿದ್ದಾರೆ. ಕುನಾಲ್ ಅವರನ್ನು ಬಂಧಿಸುವಂತೆ ಶಿವಸೇನೆ ಒತ್ತಾಯಿಸಿದೆ.

ಇತ್ತೀಚೆಗೆ ನಡೆದ 'ನಯಾ ಭಾರತ್' ಎಂಬ ಕಾರ್ಯಕ್ರಮದಲ್ಲಿ ಸಮಕಾಲೀನ ರಾಜಕೀಯವನ್ನು ಚರ್ಚಿಸುವ ಸಂದರ್ಭದಲ್ಲಿ, ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಕುನಾಲ್ ಕಾಮ್ರಾ ಶಿಂಧೆ ಅವರನ್ನು 'ದ್ರೋಹಿ' ಎಂದು ಟೀಕಿಸಿದ್ದರು.

ಕುನಾಲ್ ಕಾಮ್ರಾ ಸ್ವತಃ ಹಂಚಿಕೊಂಡ ಕಾರ್ಯಕ್ರಮದ ಕ್ಲಿಪ್‌ನಲ್ಲಿ, "ಥಾಣೆಯ ನಾಯಕ" ಎಂದು ಉಲ್ಲೇಖಿಸಿ ದಿಲ್ ತೋ ಪಾಗಲ್ ಹೈ ಹಾಡನ್ನು ಅಣಕಿಸುವ ಹಾಡನ್ನು ಹಾಡಿದ್ದರು. ಕಾಮ್ರಾ ಶಿಂಧೆ ಅವರ ಹೆಸರನ್ನು ಸ್ಪಷ್ಟವಾಗಿ ಎಲ್ಲೂ ಉಲ್ಲೇಖಿಸರಲಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನಾ ವಕ್ತಾರ ಕೃಷ್ಣ ಹೆಗ್ಡೆ, ಕುನಾಲ್ ಕಾಮ್ರಾ ಹೇಳಿಕೆಯು ಯಾವೊಬ್ಬ 'ಶಿವ ಸೈನಿಕ'ನಿಗೂ ಇಷ್ಟವಾಗಿಲ್ಲ. ಅವರಿಗೆ 'ಶಿವಸೇನಾ ಶೈಲಿಯ ಚಿಕಿತ್ಸೆ' ನೀಡಲಾಗುವುದು ಎಂದು ಹೇಳಿದ್ದಾರೆ.

"ಈಗಾಗಲೇ ಕುನಾಲ್ ಕಾಮ್ರಾ ಅವರನ್ನು ವಿಮಾನಯಾನ ಸಂಸ್ಥೆಯೊಂದು ಪ್ರಯಾಣಿಸುವುದರಿಂದ ನಿಷೇಧ ಹೇರಿದೆ. ಇನ್ನೊಬ್ಬರನ್ನು ನಿಂದಿಸುವುದು, ಆ ಮೂಲಕ ಅಸಭ್ಯತೆಯನ್ನು ಮೆರೆಯುವ ಅವರ ಪರಿಪಾಠ ಹೆಚ್ಚಿದೆ. ಪೊಲೀಸರು ಈ ರೀತಿಯ ಅಪರಾಧಗಳನ್ನು ಮಾಡುತ್ತಲೇ ಇರುವ ಅಪರಾಧಿಗಳ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳಬೇಕು" ಎಂದು ಅವರು ಆಗ್ರಹಿಸಿದ್ದಾರೆ.

ರವಿವಾರ ತಡರಾತ್ರಿ ಶಿವಸೇನಾ ಕಾರ್ಯಕರ್ತರು ಮುಂಬೈನ ಖಾರ್ ಪ್ರದೇಶದಲ್ಲಿ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಹೋಟೆಲ್ ನಲ್ಲಿದ್ದ ಸ್ಟೂಡಿಯೊವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮ ಚಿತ್ರೀಕರಣಗೊಂಡ ಖಾರ್ ಪ್ರದೇಶದ ಹೋಟೆಲ್ ಯುನಿಕಾಂಟಿನೆಂಟಲ್ ನಲ್ಲಿದ್ದ ಸ್ಟುಡಿಯೊ ವನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿ, ಕುನಾಲ್ ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು "ಕುನಾಲ್ ಕಾ ಕಮಲ್" ಎಂಬ ವೀಡಿಯೊವನ್ನು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಿವಸೇನೆ ಸಂಸದ ನರೇಶ್ ಮಸ್ಕೆ ಅವರು ದೇಶಾದ್ಯಂತ ಸೇನಾ ಕಾರ್ಯಕರ್ತರು ಕಾಮ್ರಾ ಅವರು ಎಲ್ಲೇ ಇದ್ದರು ಅವರನ್ನು ಬೆನ್ನಟ್ಟಿ ಹಿಡಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. "ನೀವು ಭಾರತದಿಂದ ಪಲಾಯನ ಮಾಡುವುದಷ್ಟೇ ನಿಮ್ಮ ಮುಂದಿನ ಆಯ್ಕೆ" ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಶಿವಸೇನೆ (ಯುಬಿಟಿ) ನಾಯಕ ಮತ್ತು ಶಾಸಕ ಆದಿತ್ಯ ಠಾಕ್ರೆ ಕುನಾಲ್ರಾ ಕಾಮ್ರಾ ಅವರ ಸ್ಟೂಡಿಯೋ ಮೇಲಿನ ದಾಳಿಯನ್ನು ಹೇಡಿಗಳ ಕೃತ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಮಿಂಧೆಯ (ಶಿಂಧೆ) ಹೇಡಿಗಳ ಗ್ಯಾಂಗ್ ಹಾಸ್ಯ ಪ್ರದರ್ಶನ ವೇದಿಕೆಯ ಮೇಲೆ ದಾಳಿ ಮಾಡಿದೆ. ಅಲ್ಲಿ ಕಾಮಿಡಿಯನ್ @kunalkamra88 ಅವರು ಏಕನಾಥ್ ಮಿಂಧೆ ಅವರ ಕುರಿತ ಹಾಡನ್ನು ಬಿಡುಗಡೆ ಮಾಡಿದ್ದರು. ಆ ಹಾಡು ಶೇ. 100 ರಷ್ಟು ನಿಜ. ಅಸುರಕ್ಷಿತ ಹೇಡಿ ಮಾತ್ರ ಈ ರೀತಿಯ ಹಾಡಿಗೆ ಪ್ರತಿಕ್ರಿಯಿಸುತ್ತಾನೆ", ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಆದಿತ್ಯ ಠಾಕ್ರೆ ಅವರು ಶಿಂಧೆ ಅವರನ್ನು ಉಲ್ಲೇಖಿಸುವಾಗ ಯಾವಾಗಲೂ ಮರಾಠಿ ಪದ "ಮಿಂಧೆ" ಎಂದು ಬಳಸುತ್ತಾರೆ. ಇನ್ನೊಬ್ಬರ ಮುಂದೆ ಮಣಿಯಲು ಸಿದ್ಧವಾಗಿರುವ ಎಂದು ಇದರ ಅರ್ಥ.

"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲವೇ? ಏಕನಾಥ್ ಮಿಂಧೆ ಅವರಿಂದ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸುವ ಮತ್ತೊಂದು ಪ್ರಯತ್ನ" ಎಂದು ಠಾಕ್ರೆ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News