ಉತ್ತರ ಪ್ರದೇಶ ಸರಕಾರವನ್ನು ಟೀಕಿಸಿದ ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್!

Update: 2025-03-24 10:29 IST
ಉತ್ತರ ಪ್ರದೇಶ ಸರಕಾರವನ್ನು ಟೀಕಿಸಿದ ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್!
  • whatsapp icon

ಲಕ್ನೋ: ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರವನ್ನು ಟೀಕಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂಬ ಆರೋಪದ ಮೇಲೆ ಲೋನಿ ಶಾಸಕ ನಂದ ಕಿಶೋರ್ ಗುರ್ಜರ್ ಅವರಿಗೆ ಬಿಜೆಪಿ ರವಿವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ರಾಜ್ಯವು ಇದುವರೆಗೆ ಕಂಡಿರದ ಅತ್ಯಂತ ಭ್ರಷ್ಟ ಸರ್ಕಾರವನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗುರ್ಜರ್ ಆರೋಪಿಸಿದ್ದರು.

ಲೋನಿ ವಿಧಾನಸಭಾ ಕ್ಷೇತ್ರವು ಗಾಝಿಯಾಬಾದ್ ಜಿಲ್ಲೆಯಲ್ಲಿದೆ.

ಪಕ್ಷದ ರಾಜ್ಯ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರು ಹೊರಡಿಸಿದ ನೋಟಿಸ್‌ನಲ್ಲಿ, "ನೀವು ಕೆಲವು ಸಮಯದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರವನ್ನು ಟೀಕಿಸುತ್ತಿದ್ದೀರಿ. ನಿಮ್ಮ ಹೇಳಿಕೆಗಳು ಮತ್ತು ಕಾರ್ಯಗಳು ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ. ಇದನ್ನು ಅಶಿಸ್ತು ಎಂದು ಪರಿಗಣಿಸಲಾಗಿದೆ", ಎಂದು ಹೇಳಲಾಗಿದೆ.

"ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆಯಂತೆ, ಈ ಪತ್ರವನ್ನು ಸ್ವೀಕರಿಸಿದ ಏಳು ದಿನಗಳಲ್ಲಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ವಿವರಣೆ ನೀಡಲು ನಿಮಗೆ ತಿಳಿಸಲಾಗಿದೆ" ಎಂದು ನೋಟಿಸ್‌ ನಲ್ಲಿ ಹೇಳಲಾಗಿದೆ.

ಶುಕ್ರವಾರ ಗುರ್ಜರ್ ನೇತೃತ್ವದ ಕಲಶ ಯಾತ್ರೆಗೆ ಪೊಲೀಸರು ಅನುಮತಿಯಿಲ್ಲ ಎಂದು ತಡೆದ ನಂತರ ಅವರು ಈ ಆರೋಪಗಳನ್ನು ಮಾಡಿದ್ದರು. ಪೊಲೀಸರಿಗೆ ಮುಂಚಿತವಾಗಿ ಕಾರ್ಯಕ್ರಮದ ಮಾಹಿತಿ ನೀಡಿರುವುದಾಗಿ ಶಾಸಕ ಗುರ್ಜರ್ ಹೇಳಿದ್ದಾರೆ. ಈ ವಿಚಾರವಾಗಿ ಶಾಸಕರ ಬೆಂಬಲಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಅಯೋಧ್ಯೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಶಾಸಕ ಗುರ್ಜರ್ ಆರೋಪಿಸಿದ್ದರು. ಯಾತ್ರೆ ತಡೆಯುವಾಗ ಉಂಟಾದ ಘರ್ಷಣೆಯ ವೇಳೆ ಪೊಲೀಸರು ತಮ್ಮ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಗುರ್ಜರ್ ಆಕ್ರೋಶ ವ್ಯಕ್ತಪಡಿಸಿದ್ದರು.

ಸರ್ಕಾರದ ವಿರುದ್ಧ ಆರೋಪಿಸುವ ವೇಳೆ, ಮುಖ್ಯ ಕಾರ್ಯದರ್ಶಿ ವಿಶ್ವದ ಅತ್ಯಂತ ಭ್ರಷ್ಟ ಅಧಿಕಾರಿ. ಅಧಿಕಾರಿಗಳು ಅಯೋಧ್ಯೆಯಲ್ಲಿ ಭೂಮಿಯನ್ನು ಲೂಟಿ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ಸಿಎಂ ಅವರನ್ನು ಮಾಟಮಂತ್ರದ ಮೂಲಕ ನಿಯಂತ್ರಿಸುತ್ತಿದ್ದಾರೆ ಎಂದು ಶಾಸಕ ಗುರ್ಜರ್ ಆರೋಪಿಸಿದ್ದರು.

ಆಡಳಿತ ಪಕ್ಷದ ಶಾಸಕರೇ, ತಮ್ಮ ಸರ್ಕಾರದ ಮೇಲೆ ನೇರ ಆರೋಪ ಮಾಡಿರುವುದು ವಿಪಕ್ಷಗಳಿಗೆ ಅಸ್ತ್ರವಾಗಿತ್ತು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆದಿತ್ಯನಾಥ್ ಸರ್ಕಾರದ ಮೇಲೆ ನೇರ ದಾಳಿ ಮಾಡಿದ್ದರು. "ಅನ್ಯಾಯ ಮತ್ತು ಭ್ರಷ್ಟಾಚಾರ ಎಲ್ಲೆಡೆ ಹೇಗೆ ಹರಡಿದೆ ಎಂಬುದರ ಕುರಿತು ಬಿಜೆಪಿ ಸದಸ್ಯರೇ ಸ್ವತಃ ರಹಸ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಈಗ ಅವರು ತಮ್ಮ ವರದಿಗಳನ್ನೂ ಬದಲಾಯಿಸುತ್ತಾರೆಯೇ?" ಎಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News