ಚೀನಾದ ಐದು ಸರಕುಗಳ ಮೇಲೆ ಡಂಪಿಂಗ್ ವಿರೋಧಿ ಸುಂಕ ವಿಧಿಸಿದ ಭಾರತ

PC: x.com/IndiaTechInfra
ಹೊಸದಿಲ್ಲಿ: ವ್ಯಾಕ್ಯೂಮ್ ಫ್ಲಾಸ್ಕ್, ಅಲ್ಯೂಮೀನಿಯಂ ಫಾಯಿಲ್ ಸೇರಿದಂತೆ ಭಾರತಕ್ಕೆ ಚೀನಾದಿಂದ ಆಮದಾಗುವ ಐದು ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಡಂಪಿಂಗ್ ವಿರೋಧಿ ಸುಂಕ ವಿಧಿಸಿದೆ. ಸ್ಥಳೀಯ ಉದ್ದಿಮೆಗಳನ್ನು ನ್ಯಾಯಸಮ್ಮತವಲ್ಲದ ಕಡಿಮೆ ಬೆಲೆಯ ಆಮದಿನಿಂದ ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಂಡಿದೆ.
ಸಾಫ್ಟ್ ಫ್ಯಾರೇಟ್ ಕೋರ್, ವ್ಯಾಕ್ಯೂಮ್ ಫ್ಲಾಸ್ಕ್ ಗಳು, ಅಲ್ಯೂಮಿನಿಯಂ ಫಾಯಿಲ್, ಟ್ರೈಕ್ಲೋರೊ ಐಸೊಸಿನರಿಕ್ ಆ್ಯಸಿಡ್ ಮತ್ತು ಪಾಲಿ ವಿನೈಲ್ ಕ್ಲೋರೈಟ್ ಪೇಸ್ಟ್ ರೆಸಿನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಪ್ರಕಟಿಸಿದೆ.
ಕೇಂದ್ರದ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಅಧಿಸೂಚನೆ ಪ್ರಕಾರ, ಈ ಐದು ಉತ್ಪನ್ನಗಳ ಮೇಲೆ ಐದು ವರ್ಷಗಳ ಕಾಲ ಈ ಸುಂಕ ಅನ್ವಯವಾಗಲಿದೆ. ತಾತ್ಕಾಲಿಕವಾಗಿ ಪ್ರತಿ ಟನ್ ಅಲ್ಯೂಮಿನಿಯಂ ಫಾಯಿಲ್ ಗೆ ಮುಂದಿನ ಆರು ತಿಂಗಳ ಕಾಲ 873 ಡಾಲರ್ ಡಂಪಿಂಗ್ ವಿರೋಧಿ ಸುಂಕ ವಿಧಿಸಲಾಗುತ್ತಿದೆ.
ನೀರು ಸಂಸ್ಕರಣೆಗೆ ಬಳಸುವ ಟ್ರೈಕ್ಲೋರೊ ಐಸೊಸಿನರಿಕ್ ಆಮ್ಲಕ್ಕೆ ಪ್ರತಿ ಟನ್ ಗೆ 276ರಿಂದ 986 ಡಾಲರ್ ಸುಂಕು ವಿಧಿಸಲಿದೆ. ಈ ಎರಡು ಉತ್ಪನ್ನಗಳನ್ನು ಚೀನ ಮತ್ತು ಜಪಾನ್ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಎಲೆಕ್ಟ್ರಿಕಲ್ ವಾಹನ, ಚಾರ್ಜರ್ ಮತ್ತು ಟೆಲಿಕಾಂ ಉತ್ಪನ್ನಗಳಲ್ಲಿ ಬಳಸುವ ಸಾಫ್ಟ್ ಫ್ಯಾರೆಟ್ ಕೋರ್ಗಳಿಗೆ ಶೇಕಡ 35ರಷ್ಟು ಸುಂಕ ವಿಧಿಸಲಾಗುವುದು. ಅಂತೆಯೇ ವ್ಯಾಕ್ಯೂಮ್ ಇನ್ಸುಲೇಟೆಡ್ ಫ್ಲಾಸ್ಕ್ಗಳ ಮೇಲೆ ಪ್ರತಿ ಟನ್ಗೆ 1732 ಡಾಲರ್ ಸುಂಕ ಹೇರಲು ಉದ್ದೇಶಿಲಾಗಿದೆ. ಪ್ರತಿ ಟನ್ ಪಿವಿಸಿ ಪೇಸ್ಟ್ ರೆಸಿನ್ ಗೆ 89 ಟನ್ನಿಂದ 707 ಡಾಲರ್ ಸುಂಕ ವಿಧಿಸಲಾಗುತ್ತಿದೆ. ಇವುಗಳನ್ನು ಚೀನಾ, ಕೊರಿಯಾ, ಮಲೇಷ್ಯಾ, ನಾರ್ವೆ, ತೈವಾನ್ ಮತ್ತು ಥಾಯ್ಲೆಂಡ್ ನಿಂದ ಆಮದು ಮಾಡಲಾಗುತ್ತಿದ್ದು, ಐದು ವರ್ಷಗಳ ಕಾಲ ಇದು ಅನ್ವಯವಾಗಲಿದೆ.