ಶಿಂಧೆ ವಿರುದ್ಧ ಟೀಕೆ; ಕಾಮಿಡಿಯನ್ ಕುನಾಲ್ ಕಾಮ್ರಾಗೆ ಸೇನಾ ಸಂಸದ ಎಚ್ಚರಿಕೆ

Update: 2025-03-24 07:30 IST
ಶಿಂಧೆ ವಿರುದ್ಧ ಟೀಕೆ; ಕಾಮಿಡಿಯನ್ ಕುನಾಲ್ ಕಾಮ್ರಾಗೆ ಸೇನಾ ಸಂಸದ ಎಚ್ಚರಿಕೆ

ಏಕನಾಥ್ ಶಿಂಧೆ |ಕುನಾಲ್ ಕಾಮ್ರಾ PC: x.com/VoxShadabKhan

  • whatsapp icon

ಹೊಸದಿಲ್ಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮೇಲೆ ಮುಂಬೈನಲ್ಲಿ ನಡೆದ ಕಾಮಿಡಿ ಶೋ ವೇಳೆ ಟೀಕಾಪ್ರಹಾರ ನಡೆಸಿದ ಬೆನ್ನಲ್ಲೇ ಕಾಮಿಡಿಯನ್ ಕುನಾಲ್ ಕಾಮ್ರಾಗೆ ಸೇನಾ ಸಂಸದ ಸರೇಶ್ ಮಾಸ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಶಿವಸೇನೆ ಕಾರ್ಯಕರ್ತರು, ಶಿಂಧೆಯವರನ್ನು ಟೀಕಿಸಿದ ಕಾರ್ಯಕ್ರಮ ಆಯೋಜಿಸಿದ್ದ ಹೆಬಿಟೆಟ್ ಕಾಮಿಡಿ ಕ್ಲಬ್ ಧ್ವಂಸಗೊಳಿಸಿದ್ದಾರೆ.

ಮುಂಬೈನ ಹೆಬಿಟೆಟ್ ಕಾಮಿಡಿ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಮ್ರಾ ಮಹಾರಾಷ್ಟ್ರದ ರಾಜಕೀಯ ವಿಭಜನೆಯನ್ನು ಅಣಕಿಸಿದ್ದರು. ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೊ ತುಣುಕಿನಲ್ಲಿ, ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದ ಶಿಂಧೆಯನ್ನು ಕಟುವಾಗಿ ಟೀಕಿಸಿರುವುದು ಕಂಡುಬರುತ್ತಿದೆ.

"ಶಿವಸೇನೆ ಮೊದಲು ಬಿಜೆಪಿಯಿಂದ ಹೊರಬಂತು. ಬಳಿಕ ಶಿವ ಸೇನೆ ಶಿವಸೇನೆಯಿಂದಲೇ ಬೇರ್ಪಟ್ಟಿತು. ಎನ್ ಸಿಪಿ, ಎನ್ ಸಿಪಿಯಿಂದ ಹೊರಬಂತು. ಒಬ್ಬ ಮತದಾರರಿಗೆ ಒಂಬತ್ತು ಬಟನ್ ಗಳನ್ನು ನೀಡಿದರು. ಪ್ರತಿಯೊಬ್ಬರಿಗೂ ಗೊಂದಲ ಉಂಟಾಯಿತು" ಎಂದು ಕಾಮ್ರಾ ಹೇಳಿದ್ದರು.

ಶಿಂಧೆಯವರ ರಾಜಕೀಯ ಕಾರ್ಯಕ್ಷೇತ್ರ ಥಾಣೆ ಬಗ್ಗೆಗೆ ಪ್ಯಾರಡಿ ಹಾಡು ಹಾಡಿದ್ದ ಕಾಮ್ರಾ, ಶಿಂಧೆಯವರ ಹೆಸರು ಉಲ್ಲೇಖಿಸಿದೇ ಗದ್ದರ್ ಎಂದಿದ್ದರು. ಕಾಮ್ರಾ ಅಪ್ಲೋಡ್ ಮಾಡಿರುವ ವಿಡಿಯೊ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, 3.60 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಈ ವಿಡಿಯೊ ಪೋಸ್ಟ್ ಆದ ಬೆನ್ನಲ್ಲೇ 59 ಸೆಕೆಂಡ್ ಗಳ ವಿಡಿಯೊ ಹಂಚಿಕೊಂಡಿರುವ ನರೇಶ್ ಮಾಸ್ಕೆ, "ಏಕನಾಥ್ ಶಿಂಧೆಯವರನ್ನು ಟ್ರೋಲ್ ಮಾಡಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಾಡಿಗೆಗೆ ಪಡೆದ ಕಲಾವಿದ" ಎಂದು ಕಾಮ್ರಾ ಅವರನ್ನು ಟೀಕಿಸಿದ್ದಾರೆ.

"ಕಾಮ್ರಾ ಬಾಡಿಗೆ ಕಲಾವಿದ; ನಮ್ಮ ನಾಯಕನ ವಿರುದ್ಧ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲ; ಕುನಾಲ್ ಕಾಮ್ರಾ ಭಾರತದ ಎಲ್ಲೂ ಮುಕ್ತವಾಗಿ ಚಲಿಸುವಂತಿಲ್ಲ. ಶಿವಸೇನೆ ಸೈನಿಕರು ಅವರಿಗೆ ಜಾಗ ತೋರಿಸುತ್ತಾರೆ. ಸಂಜಯ್ ರಾವುತ್ ಮತ್ತು ಯುಬಿಟಿ ಶಿವಸೇನೆಗೆ ನಮ್ಮ ನಾಯಕರನ್ನು ಟೀಕಿಸುವ ಮುಖಂಡರು ಮತ್ತು ಕಾರ್ಯಕರ್ತರೇ ಇಲ್ಲದಿರುವ ಬಗ್ಗೆ ನಮಗೆ ಅನುಕಂಪವಿದೆ. ಆದ್ದರಿಂದ ಅವರು ಕುನಾಲ್ ನಂಥವರನ್ನು ಈ ಕಾರ್ಯಕ್ಕೆ ಬಾಡಿಗೆಗೆ ಪಡೆದಿದ್ದಾರೆ" ಎಂದು ಎಎನ್ಐ ಜತೆ ಮಾತನಾಡಿದ ಅವರು ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News