ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಬಾಲ್ಯವಿವಾಹ ಪ್ರಕರಣಗಳಲ್ಲಿ ಸಕಾರಾತ್ಮಕ ಇಳಿಕೆ: ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೈದರಾಬಾದ್: ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಗರ್ಭಧಾರಣೆ ಪ್ರಕರಣಗಳಲ್ಲಿ ಸಕಾರಾತ್ಮಕ ಇಳಿಕೆ ಪ್ರವೃತ್ತಿ ಕಂಡು ಬಂದಿದೆ. Young Lives ಅಧ್ಯಯನ ಸಂಸ್ಥೆ ನಡೆಸಿರುವ ಏಳನೆಯ ಸುತ್ತಿನ ಭೌಗೋಳಿಕ ಅಧ್ಯಯನದ ಪ್ರಕಾರ, 2023-24ನೇ ಸಾಲಿನಲ್ಲಿ ಭಾರತದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಗರ್ಭಧಾರಣೆ ಪ್ರಕರಣಗಳಲ್ಲಿ ಸಕಾರಾತ್ಮಕ ಇಳಿಕೆ ಪ್ರವೃತ್ತಿ ಕಂಡು ಬಂದಿದೆ ಎಂದು ಹೇಳಲಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದ 21 ಸೂಕ್ಷ್ಮ ಪ್ರದೇಶಗಳಲ್ಲಿ ಎರಡು ಸಮೂಹದ 3,000 ಮಕ್ಕಳನ್ನು (ಅವರೀಗ ಯುವಕರು) ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಕಿರಿಯ ಸಮೂಹ 2001-02ರ ನಡುವೆ ಜನಿಸಿದ್ದರೆ, (2002ರಲ್ಲಿ ಅಧ್ಯಯನ ಪ್ರಾರಂಭಗೊಂಡಾಗ, ಆ ಸಮೂಹಕ್ಕೆ ಒಂದು ವರ್ಷವಾಗಿತ್ತು) ಹಿರಿಯ ಸಮೂಹವು 1994-95ರ (ಆಗ ಅವರಿಗೆ ಎಂಟು ವರ್ಷವಾಗಿತ್ತು) ನಡುವೆ ಜನಿಸಿತ್ತು. ಈ ಎರಡು ಸಮೂಹಗಳನ್ನು ಅಧ್ಯಯನಕ್ಕೆ ಒಳಪಡಿಸಿದ ನಂತರ, Young Lives ನ ಅಧ್ಯಯನ ವರದಿ ಬಿಡುಗಡೆಗೊಂಡಿದೆ.
ಈ ಎರಡು ತಲೆಮಾರಿನ ನಡುವೆ ಗಮನಾರ್ಹ ಸುಧಾರಣೆಯಾಗಿರುವುದನ್ನು ಈ ಅಧ್ಯಯನ ವರದಿಯ ಪ್ರಮುಖ ಶೋಧನೆಗಳಲ್ಲಿ ಪತ್ತೆ ಹಚ್ಚಲಾಗಿದೆ. ಈ ಶೋಧನೆಯ ಪ್ರಕಾರ, ಹಿರಿಯ ಸಮೂಹದಲ್ಲಿ ಶೇ. 25ರಷ್ಟಿದ್ದ ಬಾಲ್ಯ ವಿವಾಹಗಳು, (ಕಾನೂನಾತ್ಮಕ ವಯಸ್ಸಿಗಿಂತ ಮುಂಚೆ ವಿವಾಹವಾಗುವುದು) ಏಳು ವರ್ಷಗಳ ನಂತರ, ಶೇ. 13ಕ್ಕಿಳಿದಿರುವ ಪತ್ತೆಯಾಗಿದೆ.
ಇದೇ ವೇಳೆ ಹಿರಿಯ ಸಮೂಹ ಹಾಗೂ ಕಿರಿಯ ಸಮೂಹಗಳ ನಡುವಿನ ಬಾಲ ಗರ್ಭಧಾರಣೆ ಪ್ರಮಾಣವು ಶೇ. 27ರಿಂದ ಶೇ. 18ಕ್ಕೆ ಇಳಿಕೆಯಾಗಿದೆ.