ಪ್ರಧಾನಿ ಮೋದಿ ವಿದೇಶ ಪ್ರವಾಸಗಳ ವೆಚ್ಚ 258 ಕೋಟಿ ರೂ.

ಪ್ರಧಾನಿ ನರೇಂದ್ರ ಮೋದಿ | PC : PTI
ಹೊಸದಿಲ್ಲಿ: 2022 ಮೇ ತಿಂಗಳಿಂದ 2024 ಡಿಸೆಂಬರ್ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ 38 ವಿದೇಶ ಪ್ರವಾಸಗಳಿಗೆ ಕೇಂದ್ರ ಸರಕಾರ 258.9 ಕೋಟಿ ರೂ. ವೆಚ್ಚ ಮಾಡಿದೆ.
ಈ ಅವಧಿಯಲ್ಲಿ ಮೋದಿ ಅವರ ಅತ್ಯಧಿಕ ವೆಚ್ಚದ ಪ್ರವಾಸವೆಂದರೆ, 2023 ಜೂನ್‌ನ ಅಮೆರಿಕ ಪ್ರವಾಸ. ಈ ಪ್ರವಾಸಕ್ಕೆ 22 ಕೋಟಿ ರೂ.ಗೂ ಅಧಿಕ ವೆಚ್ಚವಾಗಿದೆ ಎಂದು ಸರಕಾರ ಗುರುವಾರ ರಾಜ್ಯ ಸಭೆಗೆ ತಿಳಿಸಿದೆ.
ಪ್ರಧಾನಿ ಅವರ 2024 ಸೆಪ್ಟಂಬರ್‌ನ ಅಮೆರಿಕ ಭೇಟಿಗೆ 15 ಕೋಟಿ ರೂ.ಗೂ ಅಧಿಕ ವೆಚ್ಚವಾಗಿದೆ.
ಈ ವೆಚ್ಚ ಪ್ರಧಾನಿ ಅವರ ನಿಯೋಗದ ವಾಸ್ತವ್ಯ, ಪ್ರಯಾಣ, ಭದ್ರತೆ, ಜೊತೆಗೆ ತೆಗೆದುಕೊಂಡು ಹೋದ ವಸ್ತು, ಸ್ಥಳದ ಶುಲ್ಕ ಹಾಗೂ ಇತರ ಶುಲ್ಕಗಳು ಸೇರಿವೆ.
2022ರಲ್ಲಿ ಮೋದಿ ಅವರು ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್, ನೇಪಾಳ, ಯುಎಇ, ಜಪಾನ್, ಉಝ್ಭೇಕಿಸ್ತಾನ ಹಾಗೂ ಇಂಡೋನೇಶ್ಯಾಕ್ಕೆ ಭೇಟಿ ನೀಡಿದ್ದರು. 2023ರಲ್ಲಿ ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ, ಜಪಾನ್, ಅಮೆರಿಕ, ಯುಎಇ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಇಂಡೋನೇಶ್ಯಾ ಹಾಗೂ ಗ್ರೀಸ್‌ಗೆ ಭೇಟಿ ನೀಡಿದ್ದರು.
2024ರಲ್ಲಿ ಪ್ರಧಾನಿ ಅವರು ಯುಎಇ, ಭೂತಾನ್, ಕತಾರ್, ಇಟಲಿ, ಆಸ್ಟ್ರೇಲಿಯಾ, ರಶ್ಯ, ಪೋಲ್ಯಾಂಡ್, ಉಕ್ರೈನ್, ಬ್ರೂನಿ ದಾರುಸ್ಸಲೇಂ, ಅಮೆರಿಕ, ಸಿಂಗಪುರ, ಲಾವೋಸ್, ಬ್ರೆಝಿಲ್, ಗಯಾನ ಹಾಗೂ ಕುವೈತ್‌ಗೆ ಭೇಟಿ ನೀಡಿದ್ದರು.
ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರಾ ಮಾರ್ಗೆರಿಟಾ ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ಈ ದತ್ತಾಂಶಗಳನ್ನು ನೀಡಿದರು.