ಉತ್ತರ ಪ್ರದೇಶ | ವಿಮೆ ಪತ್ರಗಳನ್ನು ಪಡೆಯಲು ಬೀಗರ ಮನೆಗೆ ತೆರಳಿದ್ದ ವ್ಯಕ್ತಿಯ ಹತ್ಯೆ: ಆರೋಪಿಗಳ ಬಂಧನ

Update: 2025-03-21 20:36 IST
dead body

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಮಥುರಾ: ತಮ್ಮ ಅಳಿಯ ನಿಧನರಾದ ನಂತರ, ಅವರ ವಿಮೆ ಪತ್ರಗಳನ್ನು ಸಂಗ್ರಹಿಸಲು ಬೀಗರ ಮನೆಗೆ ತೆರಳಿದ್ದ 52 ವರ್ಷದ ವ್ಯಕ್ತಿಯೊಬ್ಬರನ್ನು ಅವರ ಪುತ್ರಿಯ ಮೈದುನ ಹಾಗೂ ಅತ್ತೆ ಸೇರಿಕೊಂಡು ಹತ್ಯೆಗೈದಿರುವ ಘಟನೆ ಗುರುವಾರ ಛಾತಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು, ಅವರನ್ನೆಲ್ಲ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಪುತ್ರಿಯ ಪತಿ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಒಂದು ತಿಂಗಳ ನಂತರ, ಚಂದ್ರಪಾಲ್ ಎಂಬುವವರು ಗುರುವಾರ ಛಾತಾದಲ್ಲಿರುವ ತಮ್ಮ ಬೀಗರ ಮನೆಗೆ ತೆರಳಿದ್ದರು. ಅಲ್ಲಿ ಅವರು ಆಕೆಯ ಪತಿಯ ವಿಮಾ ದಾಖಲೆಗಳನ್ನು ಕೇಳಿದಾಗ, ಅವರು ಹಾಗೂ ಅವರ ಅಳಿಯನ ಕುಟುಂಬದ ಸದಸ್ಯರೊಂದಿಗೆ ವಾಗ್ವಾದ ನಡೆದಿದೆ ಎಂದು ಠಾಣಾಧಿಕಾರಿ ವಿನೋದ್ ಬಾಬು ಮಿಶ್ರಾ ತಿಳಿಸಿದ್ದಾರೆ.

ಚಂದ್ರಪಾಲ್ ಅವರ ಪುತ್ರಿಯು ತಮ್ಮ ಪತಿಯ ವಿಮಾ ದಾಖಲೆಗಳನ್ನು ಅವರಿಗೆ ಹಸ್ತಾಂತರಿಸುವುದಕ್ಕೂ ಮುನ್ನ, ಆಕೆಯ ಮೈದುನ ಸುನೀಲ್ ಹಾಗೂ ಅತ್ತೆ ಕಮಲೇಶ್ ಕುಮಾರಿ ಚಂದ್ರಪಾಲ್ ರೊಂದಿಗೆ ಘರ್ಷಣೆ ನಡೆಸಿದ್ದು, ಅವರನ್ನು ಮೌಖಿಕವಾಗಿ ನಿಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

“ಅವರ ವರ್ತನೆಯನ್ನು ಚಂದ್ರಪಾಲ್ ಪ್ರತಿಭಟಿಸಿದಾಗ, ಅವರಿಬ್ಬರೂ ಚೂಪಾದ ಕುಡುಗೋಲಿನಿಂದ ಚಂದ್ರಪಾಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ತೀವ್ರ ರಕ್ತಸ್ರಾವಕ್ಕೊಳಗಾಗಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು” ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ, ಚಂದ್ರಪಾಲ್ ಅವರ ಪುತ್ರಿ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News