ನಾಗ್ಪುರ ಹಿಂಸಾಚಾರ: ಬಜರಂಗ ದಳ, ವಿಎಚ್‌ಪಿ ಕಾರ್ಯಕರ್ತರು ಸೇರಿ 78 ಮಂದಿಯ ಬಂಧನ

Update: 2025-03-20 08:20 IST
ನಾಗ್ಪುರ ಹಿಂಸಾಚಾರ: ಬಜರಂಗ ದಳ, ವಿಎಚ್‌ಪಿ ಕಾರ್ಯಕರ್ತರು ಸೇರಿ 78 ಮಂದಿಯ ಬಂಧನ

PC: x.com/OpIndia_com

  • whatsapp icon

ನಾಗ್ಪುರ: ಸೋಮವಾರ ರಾತ್ರಿ ನಡೆದ ಹಿಂಸಾಚಾರದ ಬಳಿಕ ನಾಗ್ಪುರ ನಗರದ ಬಹುತೇಕ ಕಡೆಗಳಲ್ಲಿ ಬುಧವಾರ ಕೂಡಾ ಕರ್ಫ್ಯೂ ಮುಂದುವರಿದಿದ್ದು, ಪೊಲೀಸ್ ಬ್ಯಾರಿಕೇಡ್ ಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ನ ಎಂಟು ಮಂದಿ ಸೇರಿದಂತೆ ಒಟ್ಟು 78 ಮಂದಿಯನ್ನು ಗಲಭೆ ಸಂಬಂಧ ಪೊಲೀಸರು ಬಂಧಿಸಿದ್ದಾರೆ.

ಈ ಗಲಭೆಯ ರೂವಾರಿ ಫಹೀಮ್ ಖಾನ್ (38) ಎಂದು ಪೊಲೀಸರು ಗುರುತಿಸಿದ್ದು, ನಗರದಲ್ಲಿ ಆತನ ಮನೆಯ ಮೇಲೆ ನಸುಕಿನಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ. ಸೈಕಲ್ ರಿಪೇರಿ ಶಾಪ್ ಮಾಲೀಕ ಹಾಗೂ ಬುರ್ಖಾ ಮಾರಾಟಗಾರ ಫಹೀಮ್ 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಿ 1000 ಮತಗಳನ್ನು ಪಡೆದಿದ್ದ.

ಮೊಘಲ್ ದೊರೆಯ ಸಮಾಧಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಔರಂಗಜೇಬನ ಪ್ರತಿಕೃತಿ ಮತ್ತು ಧಾರ್ಮಿಕ ಚಾದರ್ ದಹಿಸಿದ ಬಜರಂಗದಳ ಮತ್ತು ವಿಎಚ್ಪಿ ಸದಸ್ಯ ವಿರುದ್ಧ ದೂರು ನೀಡಲು ಈತನ ನೇತೃತ್ವದ ಗುಂಪು ಗಣೇಶಪೇಟೆ ಪೊಲೀಸ್ ಠಾಣೆಗೆ ತೆರಳಿತ್ತು.

ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆಪಾದಿಸುವ ಹಾಗೂ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಟೀಕಿಸುವ ವಿಡಿಯೊವನ್ನು ಠಾಣೆಯಿಂದ ಹೊರಬಂದ ತಕ್ಷಣ ಫಹೀಮ್ ಚಿತ್ರೀಕರಿಸಿದ್ದ. ಎರಡೂ ವಿಡಿಯೊಗಳು ವೈರಲ್ ಆಗಿದ್ದು, ಇದು ಆರೆಸ್ಸೆಸ್ ಪ್ರಧಾನ ಕಚೇರಿ ಇರುವ ಪ್ರದೇಶದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಅಂದರೆ ನಾಗ್ಪುರದ ಮಹಲ್ ಪ್ರದೇಶದಲ್ಲಿ ಗಲಭೆಗೆ ಕಾರಣವಾಯಿತು ಎನ್ನುವುದು ಪೊಲೀಸರ ಅಭಿಮತ.

ಗಣೇಶಪೇಟೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಬಂಧಿಸುವ ಮುನ್ನ ಬಜರಂಗದಳ ಮತ್ತು ವಿಎಚ್ ಪಿಗೆ ಸೇರಿದ ಎಂಟು ಮಂದಿ ಆರೋಪಿಗಳು ಶರಣಾಗಿದ್ದಾರೆ. ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಉಳಿದ 27 ಮಂದಿ ಬಂಧನದಲ್ಲಿದ್ದಾರೆ.

ವಿವಿಧೆಡೆ ನಡೆದ ಹಿಂಸಾಚಾರದಲ್ಲಿ 1200ಕ್ಕೂ ಹೆಚ್ಚು ಮಂದಿ ಷಾಮೀಲಾಗಿದ್ದಾರೆ ಎಂದು ಪೊಲೀಸರು ಹೇಳಿದ್ದು, 1500ಕ್ಕೂ ಹೆಚ್ಚು ಕಣ್ಗಾವಲು ಕ್ಯಾಮೆರಾಗಳು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಮಾಡುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಗಲಭೆ ನಡೆದ ಕೇಂದ್ರ ನಾಗ್ಪುರ ಪ್ರದೇಶದ 70 ಕ್ಯಾಮೆರಾಗಳು ಕೂಡಾ ನಿಷ್ಕ್ರಿಯವಾಗಿದ್ದವು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News