ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಎನ್ಐಟಿ ಪ್ರೊಫೆಸರ್ ಬಂಧನ

PC: x.com/ndtv
ಗುವಾಹತಿ: ಅಸ್ಸಾಂನ ಸಿಲ್ಚರ್ ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಯ ಸಹಾಯಕ ಪ್ರೊಫೆಸರ್ ಒಬ್ಬರನ್ನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಡಾ.ಕೋಟೇಶ್ವರ ರಾಜು ಧೇನುಗೊಂಡ ಅವರನ್ನು ಸಂಸ್ಥೆ ಅಮಾನತುಗೊಸಿದ್ದು, ಅವರನ್ನು ಎನ್ಐಟಿ ಕ್ಯಾಂಪಸ್‌ನಿ ದ ಬಂಧಿಸಲಾಗಿದೆ ಎಂದು ಕಚಾರ್ ಎಸ್ಪಿ ನುಮಲ್ ಮಹತ್ತಾ ಹೇಳಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬದವರು ನೀಡಿದ ಪ್ರತ್ಯೇಕ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
"ಆರಂಭದಲ್ಲಿ ಅವರು ಅಡಗಿಕೊಳ್ಳುವ ಪ್ರಯತ್ನ ಮಾಡಿ, ಮನೆಯ ಬಾಗಿಲಿಗೆ ಹೊರಗಿನಿಂದ ಬೀಗ ಜಡಿದಿದ್ದರು. ಆದರೆ ಅವರ ಮೊಬೈಲ್ ಫೋನ್ ಲೊಕೇಶನ್ ಆಧಾರದಲ್ಲಿ ಪತ್ತೆ ಮಾಡಿ ಸಂಜೆ 5.30ರ ಸುಮಾರಿಗೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಮಾಡಲಾದ ಆರೋಪಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ" ಎಂದು ವಿವರಿಸಿದ್ದಾರೆ.
ಬಿಟೆಕ್ ವಿದ್ಯಾರ್ಥಿನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಧೇನುಗೊಂಡ ಅವರನ್ನು ಎನ್ಐಟಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿತ್ತು. ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿನಿ ಆಹೋರಾತ್ರಿ ಧರಣಿ ನಡೆಸಿದ್ದರು.
ವಿದ್ಯಾರ್ಥಿನಿಯನ್ನು ಚೇಂಬರ್ ಗೆ ಕರೆಸಿಕೊಂಡು ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಕಡಿಮೆ ಅಂಕ ಬಂದ ಬಗ್ಗೆ ಚರ್ಚಿಸುವ ಸಲುವಾಗಿ ಚೇಂಬರ್ ಗೆ ಕರೆಸಿಕೊಂಡು ವಿದ್ಯಾರ್ಥಿನಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾಗಿ ಲಿಖಿತ ದೂರಿನಲ್ಲಿ ವಿವರಿಸಲಾಗಿದೆ.
"ನನ್ನನ್ನು ಪಕ್ಕದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಏಕೆ ಕಡಿಮೆ ಅಂಕ ಬಂದಿದೆ ಎಂದು ಪ್ರಶ್ನಿಸಿದರು. ನನ್ನ ಕೈ ಹಿಡಿದುಕೊಂಡು ಬೆರಳುಗಳನ್ನು ಸ್ಪರ್ಶಿಸಿದರು. ಕ್ರಮೇಣ ನನ್ನ ನಿತಂಬ ಹಿಡಿದುಕೊಂಡರು. ನಂತರ ನನ್ನ ಎದುರು ಕಂಪ್ಯೂಟರ್ನಲ್ಲಿ ಅಶ್ಲೀಲ ಹಾಡುಗಳನ್ನು ಪ್ಲೇ ಮಾಡಿದರು. ಹೊಟ್ಟೆಯನ್ನು ಸ್ಪರ್ಶಿಸಿ ಉಜ್ಜಿದರು. ನಾನು ಅಳಲು ಆರಂಭಿಸಿದರೂ ನಿಲ್ಲಿಸಲಿಲ್ಲ. ಆರಾಮವಾಗಿ ಇದ್ದುಕೊಂಡು ಕಾಲು ಚಾಚುವಂತೆ ಸೂಚಿಸಿದರು. ಹಿಂದಿನಿಂದ ನನ್ನ ಕತ್ತು ಹಿಡಿದುಕೊಂಡು ಪಕ್ಕಕ್ಕೆ ಸೆಳೆದುಕೊಂಡರು" ಎಂದು ಸಂಸ್ಥೆಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದ್ದು, ಈ ಪತ್ರ ವೈರಲ್ ಆಗಿದೆ.
ಹೊರಗೆ ಕಾಯುತ್ತಿದ್ದ ಸ್ನೇಹಿತೆ ಕರೆ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಗಿ ವಿದ್ಯಾರ್ಥಿನಿ ಹೇಳಿದ್ದಾರೆ. ಘಟನೆ ನಡೆದಿದೆ ಎನ್ನಲಾದ ಕೊಠಡಿಗೆ ಬೀಗ ಜಡಿಯಲಾಗಿದ್ದು, ಸಂತ್ರಸ್ತೆಗೆ ಎಲ್ಲ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ರಿಜಿಸ್ಟ್ರಾರ್ ಅಶೀಮ್ ರಾಯ್ ಹೇಳಿದ್ದಾರೆ.