ಔರಂಗಜೇಬ್ ಅವರ ಸಮಾಧಿ ಕೆಡವುವಂತೆ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ

Photo | indiatoday
ಮುಂಬೈ : ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಖುಲ್ದಾಬಾದ್‌ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಸಮಾಧಿಯನ್ನು ಕೆಡವುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಕೇತನ್ ತಿರೋಡ್ಕರ್ ಎಂಬಾತ ಈ ಕುರಿತು ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದು, ಔರಂಗಜೇಬ್ ಅವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಿಂದ ತೆಗೆದುಹಾಕಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್ಐ) ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ. ಕೆಲವು ಪುರಾತನ ಸ್ಮಾರಕಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆ ಎಂದು ಗೊತ್ತುಪಡಿಸುವ ASI ಕಾಯಿದೆ-1958ರ ವಿಭಾಗ 3ರೊಂದಿಗೆ ಈ ಸ್ಥಳವು ಹೊಂದಿಕೆಯಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಔರಂಗಜೇಬ್ ಅವರ ಸಮಾಧಿಯು 14ನೇ ಶತಮಾನದ ಸಂತ ಶೇಖ್ ಝೈನುದ್ದೀನ್ ಅವರ ದರ್ಗಾದ ಸಂಕೀರ್ಣದಲ್ಲಿದೆ. ಇದರ ಸಮೀಪದಲ್ಲಿ ಅಸಫ್ ಝಾ ಮತ್ತು ಅವರ ಪುತ್ರ ನಾಸಿರ್ ಜಂಗ್ ಅವರ ಸಮಾಧಿಗಳಿವೆ. ಈ ಸಮಾಧಿಗಳನ್ನು ಕೂಡ ಕೆಡವುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಇದಕ್ಕೂ ಮೊದಲು ಔರಂಗಜೇಬ್ ಅವರ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಸಂದರ್ಭ ಧರ್ಮ ಗ್ರಂಥವನ್ನು ದಹಿಸಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಾಗ್ಪುರದ ಮಹಲ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ಸಂಭವಿಸಿತ್ತು.