ಅಮೆರಿಕ: ಗುಜರಾತ್ ಮೂಲದ ತಂದೆ, ಪುತ್ರಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿ

ಪ್ರದೀಪ್ ಪಟೇಲ್ ಹಾಗೂ ಅವರ ಪುತ್ರಿ ಊರ್ಮಿ
ವರ್ಜೀನಿಯಾ: ಅಮೆರಿಕದ ವರ್ಜೀನಿಯಾದಲ್ಲಿನ ಡಿಪಾರ್ಟ್ ಮೆಂಟಲ್ ಸ್ಟೋರ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದ ಭಾರತೀಯ ಮೂಲದ 56 ವರ್ಷದ ತಂದೆ ಹಾಗೂ 24 ವರ್ಷದ ಅವರ ಪುತ್ರಿಯನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ಗುರುವಾರ ಅಕೊಮ್ಯಾಕ್ ಕೌಂಟಿಯಲ್ಲಿರುವ ಅಂಗಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ಈ ಘಟನೆ ನಡೆದಿದೆ.
ಮೃತರನ್ನು ಗುಜರಾತ್ ಮೂಲದ ಪ್ರದೀಪ್ ಪಟೇಲ್ ಹಾಗೂ ಅವರ ಪುತ್ರಿ ಊರ್ಮಿ ಎಂದು ಗುರುತಿಸಲಾಗಿದೆ.
ಈ ಅವಳಿ ಹತ್ಯೆ ಸಂಬಂಧ ಜಾರ್ಜ್ ಫ್ರೇಝಿಯರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಗುರುವಾರ ಮುಂಜಾನೆ ಮದ್ಯವನ್ನು ಖರೀದಿಸಲು ಅಂಗಡಿಗೆ ತೆರಳಿದ ಆರೋಪಿಯು, ಹಿಂದಿನ ರಾತ್ರಿ ಯಾಕೆ ಅಂಗಡಿಯ ಬಾಗಿಲನ್ನು ಮುಚ್ಚಲಾಗಿತ್ತು ಎಂದು ಮೃತ ವ್ಯಕ್ತಿಗಳನ್ನು ಪ್ರಶ್ನಿಸಿದ್ದಾನೆ. ನಂತರ, ಆತ ಅವರಿಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ತಂದೆ ಪ್ರದೀಪ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಅವರ ಪುತ್ರಿ ಊರ್ಮಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ಪಟೇಲ್, ಅವರ ಪತ್ನಿ ಹನ್ಸಾಬೆನ್ ಹಾಗೂ ಅವರ ಪುತ್ರಿ ಊರ್ಮಿ ಗುಜರಾತ್ ನ ಮೆಹ್ಸಾನಾ ಜಿಲ್ಲೆಯರಾಗಿದ್ದು, ಆರು ವರ್ಷಗಳ ಹಿಂದಷ್ಟೆ ಅಮೆರಿಕಕ್ಕೆ ತೆರಳಿದ್ದರು. ಅವರು ತಮ್ಮ ಸಂಬಂಧಿ ಪರೇಶ್ ಪಟೇಲ್ ಮಾಲಕತ್ವದ ಡಿಪಾರ್ಟ್ ಮೆಂಟಲ್ ಸ್ಟೋರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಈ ಕುರಿತು ವರ್ಜೀನಿಯಾದಲ್ಲಿನ WAVY TVಗೆ ಪ್ರತಿಕ್ರಿಯೆ ನೀಡಿರುವ ಪರೇಶ್ ಪಟೇಲ್, ಮೃತರಿಬ್ಬರೂ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ. “ಇಂದು ಬೆಳಗ್ಗೆ ನನ್ನ ಸೋದರ ಸಂಬಂಧಿಯ ಪತ್ನಿ ಹಾಗೂ ಆಕೆಯ ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಓರ್ವ ವ್ಯಕ್ತಿ ಅಲ್ಲಿಗೆ ಬಂದು, ದಿಢೀರನೆ ಗುಂಡಿನ ದಾಳಿ ನಡೆಸಿದ್ದಾನೆ. ನನಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಪ್ರದೀಪ್ ಪಟೇಲ್ ಹಾಗೂ ಹನ್ಸಾಬೆನ್ ಗೆ ಇನ್ನೂ ಇಬ್ಬರು ಪುತ್ರಿಯರಿದ್ದು, ಅವರಿಬ್ಬರೂ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.
ಆರೋಪಿ ಜಾರ್ಜ್ ಫ್ರೇಝಿಯರ್ ವಿರುದ್ಧ ಹತ್ಯೆ ಹಾಗೂ ಅಪರಾಧ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.