23,000 ಮಸಾಲೆ ಮಾದರಿಗಳ ಪೈಕಿ 1500ಕ್ಕೂ ಅಧಿಕ ಕಳಪೆ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ ವಿಶ್ಲೇಷಿಸಲಾದ 23,000ಕ್ಕೂ ಅಧಿಕ ಮಸಾಲೆ ಮಾದರಿಗಳಲ್ಲಿ 1,500ಕ್ಕೂ ಅಧಿಕ ಕಳಪೆ ಗುಣಮಟ್ಟದ್ದೆಂದು ಕಂಡು ಬಂದಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯ ಸಹಾಯಕ ಸಚಿವ ಪ್ರತಾಪ್ ರಾವ್ ಜಾಧವ್ ಲಿಖಿತ ಪ್ರತಿಕ್ರಿಯೆಯಲ್ಲಿ 2022-23 ಹಾಗೂ 2023-24ರಲ್ಲಿ ಭಾರತದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮಸಾಲೆಗಳ 23,898 ಮಾದರಿಗಳನ್ನು ವಿಶ್ಲೇಷಿಸಿದೆ ಎಂದು ಲೋಕಸಭೆಗೆ ತಿಳಿಸಿದರು.
2022-23ರಲ್ಲಿ 11,979 ಹಾಗೂ 2023-24ರಲ್ಲಿ 11,919 ಸೇರಿದಂತೆ ಒಟ್ಟು 23,000ಕ್ಕೂ ಅಧಿಕ ಮಸಾಲೆ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರಲ್ಲಿ 1,241ಕ್ಕೂ ಅಧಿಕ ಮಾದರಿಗಳು ಸುರಕ್ಷಿತವಲ್ಲ ಎಂದು ತಿಳಿದು ಬಂದಿದೆ. 2022-23ರಲ್ಲಿ 534 ಮಸಾಲೆ ಮಾದರಿಗಳು, ಬಳಿಕದ ವರ್ಷದಲ್ಲಿ 707 ಮಸಾಲೆ ಮಾದರಿಗಳು ಸುರಕ್ಷಿತವಲ್ಲ ಎಂದು ಕಂಡು ಬಂದಿದೆ.
ಈ ಒಟ್ಟು ಮಾದರಿಗಳಲ್ಲಿ 2022-23ರಲ್ಲಿ 743 ಹಾಗೂ 2023-24ರಲ್ಲಿ 816 ಮಸಾಲೆ ಮಾದರಿಗಳು ಕಳಪೆ ಗುಣಮಟ್ಟದ್ದಾಗಿವೆ. ಇದರೊಂದಿಗೆ ಕಳಪೆ ಗುಣಮಟ್ಟದ ಮಸಾಲೆ ಮಾದರಿಗಳ ಸಂಖ್ಯೆ 1,559 ಆಗಿದೆ.
ದೇಶಾದ್ಯಂತದ ಗ್ರಾಹಕರಿಗೆ ಸುರಕ್ಷಿತ ಆಹಾರ ಉತ್ವನ್ನಗಳ ಲಭ್ಯತೆಯ ಖಾತರಿ ನೀಡುವಲ್ಲಿ ಎಪ್‌ಎಸ್‌ಎಸ್‌ಎಐ ಸಂಪೂರ್ಣ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.