ನ್ಯಾಯಮೂರ್ತಿ ಮನೆಯಲ್ಲಿ ನೋಟಿನ ಕಂತೆ ಪತ್ತೆ ಪ್ರಕರಣ: ತನಿಖೆ ಬಗ್ಗೆ ಇಂದು ಸಿಜೆಐ ನಿರ್ಧಾರ

PC: x.com/ArgusNews_in
ಹೊಸದಿಲ್ಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡಿದ ಬೆನ್ನಲ್ಲೇ, ವರ್ಮಾ ನಿವಾಸದಲ್ಲಿ ನಗದು ಪತ್ತೆಯಾಗಿದೆ ಎನ್ನಲಾದ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರಿಂದ ವರದಿ ಪಡೆಯಲಿದ್ದಾರೆ.
ಈ ಬಗ್ಗೆ ವಿಚಾರಣಾ ಸಮಿತಿಯನ್ನು ರಚಿಸುವ ಸಂಬಂಧ ಸಿಜೆಐ ಶನಿವಾರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಯಮೂರ್ತಿ ವರ್ಮಾ ಅವರು ಶುಕ್ರವಾರ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಿಲ್ಲ.
"ಮಾಹಿತಿ ಪಡೆದ ಬಳಿಕ ದೆಹಲಿ ಹೈಕೋರ್ಟ್ ಸಿಜೆಯವರು ಪುರಾವೆ ಮತ್ತು ಮಾಹಿತಿಯನ್ನು ಕಲೆ ಹಾಕುವ ಮೂಲಕ ಇಲಾಖಾ ವಿಚಾರಣೆ ಪ್ರಕ್ರಿಯೆ ಆರಂಭಿಸಿದ್ದಾರೆ.. ಸಿಜೆಐ ಸಂಜೀವ್ ಖನ್ನಾ ಅವರಿಗೆ ಅವರು ವರದಿ ನೀಡಲಿದ್ದಾರೆ" ಎಂದು ಸುಪ್ರೀಂಕೋರ್ಟ್ ಪ್ರಕಟಣೆ ಹೇಳಿದೆ.
ಈ ವರದಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮೂಲತಃ ಅಲಹಾಬಾದ್ ಹೈಕೋರ್ಟ್ ಗೆ ಸೇರಿದ ನ್ಯಾಯಮೂರ್ತಿ ಉಪಾಧ್ಯಾಯ ಅವರು ನ್ಯಾಯಮೂರ್ತಿ ವರ್ಮಾ ಅವರಿಂದ ಈ ಬಗ್ಗೆ ವಿವರಣೆ ಪಡೆದಿದ್ದು, ನಗದು ಪತ್ತೆಗೆ ಕಾರಣವಾದ ಅಗ್ನಿ ಆಕಸ್ಮಿಕ ಸಂಬಂಧ ಇತರ ದಾಖಲೆಗಳನ್ನು ಕಲೆ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ನ್ಯಾಯಮೂರ್ತಿ ವರ್ಮಾ ಅವರನ್ನು ವರ್ಗಾಯಿಸುವ ಕೊಲಿಜಿಯಂ ನಿರ್ಣಯವನ್ನು ಇನ್ನೂ ಸುಪ್ರೀಂಕೋರ್ಟ್ ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಿಲ್ಲ. "ದೆಹಲಿ ಹೈಕೋರ್ಟ್ ನ ಎರಡನೇ ಹಿರಿಯ ನ್ಯಾಯಮೂರ್ತಿ ಎನಿಸಿದ ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡುವ ಪ್ರಸ್ತಾವನೆಯಿಂದಾಗಿ ಅವರು ಅಲಹಾಬಾದ್ ಹೈಕೋರ್ಟ್ ನ ಜ್ಯೇಷ್ಠತ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಇರುತ್ತಾರೆ. ಅದು ಇಲಾಖಾ ವಿಚಾರಣೆ ಪ್ರಕ್ರಿಯೆಯಿಂದ ಪ್ರತ್ಯೇಕವಾಗಿರುತ್ತದೆ" ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.