ಪಂಜಾಬ್ | ಸೇನಾ ಕರ್ನಲ್ ಮೇಲೆ ಹಲ್ಲೆ: ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐ ತನಿಖೆಗೆ ಕರ್ನಲ್ ಪತ್ನಿ ಆಗ್ರಹ

CBI | PC : PTI
ಚಂಡೀಗಢ: ವಾಹನ ನಿಲುಗಡೆಗೆ ಸಂಬಂಧಿಸಿದ ವ್ಯಾಜ್ಯದಲ್ಲಿ 12 ಮಂದಿ ಪೊಲೀಸ್ ಅಧಿಕಾರಿಗಳು ನನ್ನ ಪತಿ ಹಾಗೂ ಪುತ್ರನ ಮೇಲೆ ಹಲ್ಲೆ ನಡೆಸಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕರ್ನಲ್ ಪುಷ್ಪಿಂದರ್ ಸಿಂಗ್ ಬಾತ್ ರ ಪತ್ನಿ ಜಸ್ವಿಂದರ್ ಸಿಂಗ್ ಕೌರ್ ಬಾತ್ ಆಗ್ರಹಿಸಿದರು.
ಚಂಡೀಗಢದಲ್ಲಿ ತಮ್ಮ ಪುತ್ರ ಹಾಗೂ ಸಂಬಂಧಿಯೊಬ್ಬರೊಂದಿಗೆ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಂಜಾಬ್ ಪೊಲೀಸರು ನನ್ನ ಪತಿ ಹಾಗೂ ಪುತ್ರನ ಮೇಲೆ ಊಹಿಸಲಸಾಧ್ಯಯವಾದ ರೀತಿಯ ಕ್ರೌರ್ಯದ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.
ತಮ್ಮ ಪತಿ ಹಾಗೂ ಪುತ್ರನ ಮೇಲೆ ನಡೆದಿರುವ ಕ್ರೂರ ಹಲ್ಲೆಗೆ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ಜಸ್ವಿಂದರ್ ಸಿಂಗ್ ಕೌರ್ ಬಾತ್, ನನ್ನ ಪತಿಯ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ತಕ್ಷಣವೇ ಎಫ್ಐಆರ್ ದಾಖಲಿಸಿಕೊಳ್ಳಬೇಕು, ಎಫ್ಐಆರ್ ನಲ್ಲಿ ಎಲ್ಲ 12 ಮಂದಿ ಆರೋಪಿ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಬೇಕು ಹಾಗೂ ಆರೋಪಿ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಪಟಿಯಾಲದಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗಾವಣೆಗೊಂಡಿರುವ 12 ಮಂದಿ ಪೊಲೀಸ್ ಅಧಿಕಾರಿಗಳ ಹೆಸರನ್ನು ಪೊಲೀಸರು ದಾಖಲಿಸಿಕೊಂಡಿಲ್ಲ ಎಂದೂ ಅವರು ಆರೋಪಿಸಿದರು.
ಇದೇ ವೇಳೆ, ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ವಿಫಲರಾಗಿದ್ದಾರೆ ಎಂದೂ ಅವರು ದೂರಿದರು.
ಪಂಜಾಬ್ ಪೊಲೀಸರಿಂದ ತಮ್ಮ ಕುಟುಂಬವು ಅನುಭವಿದ ಯಾತನೆಯನ್ನು ಹಂಚಿಕೊಂಡ ಅವರು, ಪಟಿಯಾಲದ ಉಪ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಮಾರ್ಚ್ 13ರ ಮಧ್ಯರಾತ್ರಿ ಪಟಿಯಾಲದಲ್ಲಿನ ರಾಜಿಂದರ್ ಸರಕಾರಿ ಆಸ್ಪತ್ರೆಯ ಬಳಿ ಕರ್ನಲ್ ಪುಷ್ಪಿಂದರ್ ಸಿಂಗ್ ಬಾತ್ ಅವರು ತಮ್ಮ ಪುತ್ರನೊಂದಿಗೆ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಆಹಾರ ಸೇವಿಸುತ್ತಿದ್ದಾಗ ಈ ಘಟನೆ ನಡೆದಿತ್ತು.
ಕರ್ನಲ್ ಪುಷ್ಪಿಂದರ್ ಸಿಂಗ್ ಬಾತ್ ಹಾಗೂ ಅವರ ಪುತ್ರನು ತಮ್ಮ ವಾಹನದ ಹೊರಗೆ ನಿಂತು ಆಹಾರ ಸೇವಿಸುತ್ತಿದ್ದಾಗ ಸಾಮಾನ್ಯ ವಸ್ತ್ರದಲ್ಲಿ ಅಲ್ಲಿಗೆ ಆಗಮಿಸಿದ ಕೆಲವು ಪೊಲೀಸ್ ಅಧಿಕಾರಿಗಳು ಅವರ ಬಳಿಗೆ ತೆರಳಿ, ನಮ್ಮ ವಾಹನಗಳನ್ನು ನಿಲುಗಡೆ ಮಾಡಲು ನಿಮ್ಮ ವಾಹನವನ್ನು ತೆರವುಗೊಳಿಸಿ ಎಂದು ಅವರಿಗೆ ಸೂಚಿಸಿದರು ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಅವರ ಒರಟು ವರ್ತನೆಯನ್ನು ಕರ್ನಲ್ ಪುಷ್ಪಿಂದರ್ ಸಿಂಗ್ ಬಾತ್ ಆಕ್ಷೇಪಿಸಿದಾಗ, ಓರ್ವ ಪೊಲೀಸ್ ಅಧಿಕಾರಿ ಅವರಿಗೆ ಗುದ್ದಿದ್ದಾರೆ. ನಂತರ, ಎಲ್ಲ ಪೊಲೀಸ್ ಸಿಬ್ಬಂದಿಗಳೂ ಅವರನ್ನು ಹಾಗೂ ಅವರ ಪುತ್ರನನ್ನು ಥಳಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಈ ಘಟನೆಯಲ್ಲಿ ಪುಷ್ಪಿಂದರ್ ಸಿಂಗ್ ಬಾತ್ ರ ಕೈ ಮೂಳೆ ಮುರಿದಿದ್ದು, ಅವರ ಪುತ್ರನ ತಲೆಗೆ ದೊಡ್ಡ ಸೀಳು ಗಾಯವಾಗಿದೆ.