ಒಡಿಶಾ | ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ ; 11 ತಿಂಗಳ ಹಿಂದೆಯೇ ಲೈಂಗಿಕ ಕಿರುಕುಳದ ಕುರಿತು ಕೆಐಐಟಿಗೆ ದೂರು

ಸಾಂದರ್ಭಿಕ ಚಿತ್ರ
ಭುವನೇಶ್ವರ: ಕೆಐಐಟಿಯಲ್ಲಿ ಫೆಬ್ರವರಿಯಲ್ಲಿ ಆತ್ಮಹತ್ಯೆಗೆ ಶರಣಾದ ನೇಪಾಳಿ ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ಬಗ್ಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಕಳೆದ ವರ್ಷ ಮಾರ್ಚ್‌ನಲ್ಲಿ ದೂರು ಸಲ್ಲಿಸಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಅವರು ಒಡಿಶಾ ವಿಧಾನ ಸಭೆಗೆ ಶುಕ್ರವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ದಶರಥಿ ಗೊಮಾಂಗ ಅವರ ಲಿಖಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರಜ್, ಲೈಂಗಿಕ ಕಿರುಕುಳದ ಕುರಿತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಸುಮಾರು 11 ತಿಂಗಳು ಮುನ್ನ ಕೆಐಐಟಿ ಅಧಿಕಾರಿಗಳಿಗೆ 2024 ಮಾರ್ಚ್ 12ರಂದು ದೂರು ಸಲ್ಲಿಸಿದ್ದರು ಎಂದರು.
ಯುವತಿಯ ಸಾವು ಹಾಗೂ ತರುವಾಯ ಇದರ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ ಕಿರುಕುಳ ನೀಡಿದ ಕುರಿತು ವಿಚಾರಣೆ ನಡೆಸಲು ರಾಜ್ಯ ಸರಕಾರ ರೂಪಿಸಿದ ಉನ್ನತ ಮಟ್ಟದ ಸಮಿತಿಯ ಮುಂದೆ ಇದುವರೆಗೆ 19 ಮಂದಿ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಅವರು ವಿಧಾನಸಭೆಗೆ ತಿಳಿಸಿದರು.
ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗದ ಮಾರ್ಗಸೂಚಿಗೆ ಅನುಗುಣವಾಗಿ ಆಂತರಿಕ ಸಮಿತಿಯನ್ನು ರೂಪಿಸುವ ಕುರಿತಂತೆ ಕೆಐಐಟಿ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಅವರು ತಿಳಿಸಿದರು.
20 ವರ್ಷದ ನೇಪಾಳಿ ವಿದ್ಯಾರ್ಥಿನಿಯ ಮೃತದೇಹ ಇಲ್ಲಿನ ಕೆಐಐಟಿ ಹಾಸ್ಟೆಲ್ ಕೊಠಡಿಯಲ್ಲಿ ಫೆಬ್ರವರಿ 16ರಂದು ಪತ್ತೆಯಾಗಿತ್ತು.