ಉತ್ತರ ಪ್ರದೇಶ | ಹೋಳಿಗೆ ಮೊದಲೇ ಗಲಭೆ ಸೃಷ್ಟಿಸಲು ಗೋಶಾಲೆಗೆ ಮಾಂಸ ಎಸೆದ ಇಬ್ಬರು ಆರೋಪಿಗಳ ಬಂಧನ

Photo : X
ಗಾಝಿಯಾಬಾದ್ : ಹೋಳಿ ಹಬ್ಬಕ್ಕೂ ಮುನ್ನ ಕೋಮುಗಲಭೆ ಪ್ರಚೋದಿಸಲು ಸಂಚು ರೂಪಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಗಾಝಿಯಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಯೋಗೇಂದ್ರ ಚೌಧರಿ ಮತ್ತು ಶಿವಂ ಬಂಧಿತ ಆರೋಪಿಗಳು. ಪೊಲೀಸ್ ತನಿಖೆಯ ಪ್ರಕಾರ, ಯೋಗೇಂದ್ರ ಚೌಧರಿ ಮತ್ತು ಶಿವಂ ಸ್ಥಳೀಯ ಗೋಶಾಲೆಗೆ ಮಾಂಸವನ್ನು ಎಸೆದು ಗೋಹತ್ಯೆ ಬಗ್ಗೆ ಹಿಂದುತ್ವ ಸಂಘಟನೆಗಳಿಗೆ ಸುಳ್ಳು ಮಾಹಿತಿ ನೀಡಿದರು. ಅಶಾಂತಿಯನ್ನು ಪ್ರಚೋದಿಸುವ ಉದ್ದೇಶದಿಂದ ಇವರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಗೋಶಾಲೆಯ ಮಾಲಕನ ಸೋದರ ಮಾವ ನಂದಕಿಶೋರ್ ಎಂಬಾತನ ಪುತ್ರಿ ಛಾಯಾ ತನ್ನ ಸಹಚರ ಯೋಗೇಶ್ ಜೊತೆ ಸೇರಿ ಕೃತ್ಯಕ್ಕೆ ಸಂಚನ್ನು ರೂಪಿಸಿದ್ದಳು ಎನ್ನುವುದು ಬಹಿರಂಗವಾಗಿದೆ. ಅವರು ಮಾಂಸವನ್ನು ಖರೀದಿಸಿ ಗೋಶಾಲೆಯ ಬಳಿ ಹಾಕಿದ್ದರು. ಬಳಿಕ ಎಚ್‌ಸಿಎಲ್ ಉದ್ಯೋಗಿಯಾಗಿರುವ ಯೋಗೇಶ್, ಗೂಗಲ್ ಮೂಲಕ ʼಗೋರಕ್ಷಕರʼ ಪೋನ್ ಸಂಖ್ಯೆಯನ್ನು ಪಡೆದು ಬಳಿಕ ಅವರಿಗೆ ಕರೆ ಮಾಡಿ ಗೋಹತ್ಯೆ ನಡೆಸಿದ್ದಾರೆಂದು ಸುಳ್ಳು ಮಾಹಿತಿ ನೀಡಿದ್ದಾನೆ.
ಆದರೆ, ಪೊಲೀಸರು ಈ ಕುರಿತು ನಿಷ್ಪಕ್ಷಪಾತೀಯವಾಗಿ ತನಿಖೆ ನಡೆಸಿ ಯಾವುದೇ ಅಶಾಂತಿ ಸೃಷ್ಟಿಯಾಗದಂತೆ ತಡೆದಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಿದ್ದಾರೆ.