ಪ್ರಜಾಪ್ರಭುತ್ವ ದೇಶ ಪೊಲೀಸ್ ರಾಜ್ಯದಂತೆ ಕಾರ್ಯ ನಿರ್ವಹಿಸಬಾರದು: ಜಾಮೀನು ನಿರಾಕರಣೆ ಕುರಿತು ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ತನಿಖೆ ಪೂರ್ಣಗೊಂಡಿರುವ ಹೊರತಾಗಿಯೂ ‘‘ತುಂಬಾ ಗಂಭೀರವಲ್ಲದ ಪ್ರಕರಣ’’ಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿ ಅನ್ನು ತಿರಸ್ಕರಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ವಂಚನೆ ಪ್ರಕರಣದಲ್ಲಿ ಎರಡು ವರ್ಷಗಳಿಗಿಂತಲೂ ಅಧಿಕ ಕಾಲ ಕಸ್ಟಡಿಯಲ್ಲಿದ್ದ ಆರೋಪಿಗೆ ಜಾಮೀನು ನೀಡುವ ಸಂದರ್ಭ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ, ಪ್ರಜಾಪ್ರಭುತ್ವ ರಾಷ್ಟ್ರವು ಪೊಲೀಸ್ ರಾಜ್ಯದಂತೆ ಕಾರ್ಯ ನಿರ್ವಹಿಸಬಾರದು. ಪೊಲೀಸ್ ರಾಜ್ಯದಲ್ಲಿ ಕಾನೂನು ಜಾರಿ ಸಂಸ್ಥೆಗಳು ಅವಶ್ಯಕತೆಯೇ ಇಲ್ಲದೆ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಅನಿಯಂತ್ರಿತ ಅಧಿಕಾರವನ್ನು ಬಳಸುತ್ತದೆ ಎಂದು ಹೇಳಿದೆ.
ಎರಡು ದಶಕಗಳ ಹಿಂದೆ ಸಣ್ಣ ಪ್ರಕರಣಗಳ ಜಾಮೀನು ಅರ್ಜಿಗಳು ಅಪರೂಪವಾಗಿ ಉಚ್ಚ ನ್ಯಾಯಾಲಯಕ್ಕೆ ಅಥವಾ ಸರ್ವೋಚ್ಛ ನ್ಯಾಯಾಲಯಕ್ಕೆ ಬರುತ್ತಿದ್ದವು. ವಿಚಾರಣಾ ನ್ಯಾಯಾಲಯದ ಮಟ್ಟದಲ್ಲಿ ಇತ್ಯರ್ಥವಾಗಬೇಕಾದ ಪ್ರಕರಣಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕಾಗಿರುವುದು ಆಘಾತಕಾರಿ ವಿಚಾರ. ಇದರಿಂದ ಕಾನೂನು ವ್ಯವಸ್ಥೆಗೆ ಅನಗತ್ಯವಾಗಿ ಹೊರೆಯಾಗುತ್ತಿದೆ ಎಂದು ಪೀಠ ಹೇಳಿದೆ.
ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಜಾಮೀನು ನೀಡುವಲ್ಲಿ, ಮುಖ್ಯವಾಗಿ ಸಣ್ಣ ಪುಟ್ಟ ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಹಾಗೂ ಉಚ್ಚ ನ್ಯಾಯಾಲಯದಗಳು ಜಾಮೀನು ನೀಡುವಲ್ಲಿ ಉದಾರ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಮತ್ತೆ ಮತ್ತೆ ಹೇಳಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ಪೂರ್ಣಗೊಂಡ ಹಾಗೂ ಆರೋಪ ಪಟ್ಟಿ ಸಲ್ಲಿಸಿದ ಹೊರತಾಗಿಯೂ ವಿಚಾರಣಾ ನ್ಯಾಯಾಲಯ ಹಾಗೂ ಗುಜರಾತ್ ಉಚ್ಚ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.