ನಾಗ್ಪುರ ಹಿಂಸಾಚಾರ ಪೂರ್ವನಿಯೋಜಿತ, ಬಾಲಿವುಡ್ ಚಿತ್ರ 'ಛಾವಾ' ಅದಕ್ಕೆ ತುಪ್ಪ ಸುರಿದಿದೆ: ಮಹಾರಾಷ್ಟ್ರ ಸಿಎಂ ಫಡ್ನವಿಸ್
Photo | PTI
ಮುಂಬೈ: ನಾಗ್ಪುರದಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತ, ಬಾಲಿವುಡ್ ಚಲನಚಿತ್ರ ‘ಛಾವಾ’ ಅದಕ್ಕೆ ತುಪ್ಪ ಸುರಿದಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಔರಂಗಜೇಬ್ ಅವರ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಸಂದರ್ಭ ಧರ್ಮ ಗ್ರಂಥವನ್ನು ದಹಿಸಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಾಗ್ಪುರದ ಮಹಲ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ಸಂಭವಿಸಿತ್ತು.
ಘರ್ಷಣೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಫಡ್ನವಿಸ್, ಬಾಲಿವುಡ್ ಚಲನಚಿತ್ರ ‘ಛಾವಾ’ ಬಿಡುಗಡೆಯಾದ ನಂತರ, ಮಹಾರಾಷ್ಟ್ರ ಮತ್ತು ಅದರಾಚೆಗಿನ ಜನರಿಗೆ ಛತ್ರಪತಿ ಸಂಭಾಜಿ ಮಹಾರಾಜ್ ಅವರನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಹೇಗೆ ಕ್ರೂರವಾಗಿ ಕೊಲೆ ಮಾಡಿದ ಎಂಬುವುದು ಅರಿವಾಯಿತು. ಈ ಚಿತ್ರದಿಂದಾಗಿ ಔರಂಗಜೇಬ್ ವಿರುದ್ಧದ ಆಕ್ರೋಶ ತಾರಕಕ್ಕೇರಿದೆ ಎಂದು ತಿಳಿಸಿದರು.
ನಾನು ಯಾವುದೇ ಚಲನಚಿತ್ರವನ್ನು ದೂಷಿಸಲು ಅಥವಾ ಟೀಕಿಸಲು ಬಯಸುವುದಿಲ್ಲ, ಆದರೆ 'ಛಾವಾ'ದಿಂದಾಗಿ ಜನರು ಔರಂಗಜೇಬ್ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಾವು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ರಾಜ್ಯದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಜನರು ಶಾಂತಿಯಿಂದ ಇರಬೇಕು. ಹಿಂಸಾಚಾರದಲ್ಲಿ ಮೂವರು ಡಿಸಿಪಿ ಮಟ್ಟದ ಅಧಿಕಾರಿಗಳು ಸೇರಿದಂತೆ 33 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಭಾಗವಹಿಸಿದವರನ್ನು ನಾವು ಬಿಡುವುದಿಲ್ಲ. ಹಿಂಸಾಚಾರವು ಪೂರ್ವಯೋಜಿತವಾಗಿದೆ ಎಂದು ಹೇಳಿದರು.
ಆದರೆ, 400 ವರ್ಷಗಳಷ್ಟು ಪುರಾತನವಾದ ಔರಂಗಜೇಬ್ ಸಮಾಧಿಯ ವಿಷಯವನ್ನು ಕೆದಕುವ ಮೂಲಕ ಮಹಾಯುತಿ ಸರಕಾರವು ರಾಜ್ಯದಲ್ಲಿ ಅಶಾಂತಿಯನ್ನು ಪ್ರಚೋದಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.