ಮಹಾಕುಂಭ ಕಾಲ್ತುಳಿತದಲ್ಲಿ ಮೃತರ ಬಗ್ಗೆ ಸರಕಾರದ ಬಳಿ ಯಾವುದೇ ಅಂಕಿ ಅಂಶಗಳಿಲ್ಲ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

Update: 2025-03-18 19:58 IST
ಮಹಾಕುಂಭ ಕಾಲ್ತುಳಿತದಲ್ಲಿ ಮೃತರ ಬಗ್ಗೆ ಸರಕಾರದ ಬಳಿ ಯಾವುದೇ ಅಂಕಿ ಅಂಶಗಳಿಲ್ಲ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ - Photo Credit: Sansad TV via PTI

  • whatsapp icon

ಹೊಸದಿಲ್ಲಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದ ಕುರಿತು ಉತ್ತರ ಪ್ರದೇಶ ಸರಕಾರ ತನಿಖೆ ನಡೆಸುತ್ತಿದ್ದು, ಈ ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಬಗ್ಗೆ ಕೇಂದ್ರ ಸರಕಾರದ ಬಳಿ ಯಾವುದೇ ಅಂಕಿ-ಅಂಶವಿಲ್ಲ ಎಂದು ಇಂದು (ಮಂಗಳವಾರ) ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ.

ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಹಾಗೂ ಗಾಯಾಳುಗಳ ಸಂಖ್ಯೆ ಮತ್ತು ಕಾರಣವನ್ನು ಪತ್ತೆ ಹಚ್ಚಲು ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಕುರಿತ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಕೇಳಿದ ಪ್ರಶ್ನೆದಗೆ ಕೇಂದ್ರ ಸರಕಾರ ಮೇಲಿನಂತೆ ಉತ್ತರಿಸಿದೆ.

ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್, “ಸಂವಿಧಾನದ ಏಳನೆ ವಿಧಿಯ ಪ್ರಕಾರ, ಇದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ” ಎಂದು ಹೇಳಿದರು.

“ಧಾರ್ಮಿಕ ಸಭೆಗಳು, ಜನಸಂದಣಿ ನಿರ್ವಹಣೆ, ಭಕ್ತರಿಗೆ ಸೌಲಭ್ಯ ಒದಗಿಸುವುದು, ಇಂತಹ ಸಭೆಗಳ ವೇಳೆ ಕೈಗೊಳ್ಳಬೇಕಾದ ವಿಪತ್ತು ನಿರ್ವಹಣೆ ಕ್ರಮಗಳು, ಇತ್ಯಾದಿ ವಿಷಯಗಳು ಸಾರ್ವಜನಿಕ ಸುವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಇವುಗಳು ರಾಜ್ಯದ ಅಧೀನತೆಗೆ ಒಳಪಟ್ಟಿರುತ್ತವೆ” ಎಂದು ಅವರು ತಿಳಿಸಿದರು.

“ರಾಜ್ಯಗಳಲ್ಲಿ ಸಂಭವಿಸಿದ ವಿಪತ್ತುಗಳ ಪರಿಶೀಲನೆ ನಡೆಸುವುದು, ಕಾಲ್ತುಳಿತ ಸೇರಿದಂತೆ ಸಂತ್ರಸ್ತರ ಕುಟುಂಬಗಳಿಗೆ ಹಣಕಾಸಿನ ನೆರವು ಒದಗಿಸುವುದೂ ಸಹ ಆಯಾ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುತ್ತವೆ. ಅಂತಹ ಸನ್ನಿವೇಶಗಳನ್ನು ನಿಭಾಯಿಸಲು ರಾಜ್ಯ ಸರಕಾರಗಳು ಸಮರ್ಥವಾಗಿದ್ದು, ಅವಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಕೇಂದ್ರ ಸರಕಾರ ನಿರ್ವಹಿಸುವುದಿಲ್ಲ” ಎಂದು ಅವರು ಹೇಳಿದರು.

“ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಜನಸಂದಣಿ ನಿರ್ವಹಣೆ ಕ್ರಮಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ” ಎಂದು ಅವರು ತಿಳಿಸಿದರು.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭ ಮೇಳವು ಜನವರಿ 13ರಿಂದ ಪ್ರಾರಂಭಗೊಂಡು, ಫೆಬ್ರವರಿ 26ರಂದು ಮುಕ್ತಾಯಗೊಂಡಿತ್ತು. ಆದರೆ, ಜನವರಿ 29ರ ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News