40 ವರ್ಷ ಬಳಿಕ ಸುಪ್ರೀಂಕೋರ್ಟ್ ನಿಂದ ನ್ಯಾಯ ಪಡೆದ ಅತ್ಯಾಚಾರ ಸಂತ್ರಸ್ತೆ!

Update: 2025-03-20 07:41 IST
40 ವರ್ಷ ಬಳಿಕ ಸುಪ್ರೀಂಕೋರ್ಟ್ ನಿಂದ ನ್ಯಾಯ ಪಡೆದ ಅತ್ಯಾಚಾರ ಸಂತ್ರಸ್ತೆ!

ಸಾಂದರ್ಭಿಕ ಚಿತ್ರ | PC : PTI

  • whatsapp icon

ಹೊಸದಿಲ್ಲಿ: ಮೂವತ್ತೊಂಬತ್ತು ವರ್ಷ ಹಳೆಯ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯ ವಿರುದ್ಧದ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಪ್ರಕರಣ ಇತ್ಯರ್ಥವಾಗಲು ಸುಧೀರ್ಘ ಕಾಯುವಿಕೆಗಾಗಿ ಮಹಿಳೆ ಮತ್ತು ಆಕೆಯ ಕುಟುಂಬದ ಬಗ್ಗೆ ಅನುಕಂಪ ವ್ಯಕ್ತಪಡಿಸಿದೆ.

"ಅಪ್ರಾಪ್ತ ವಯಸ್ಸಿನ ಯುವತಿ ಮತ್ತು ಆಕೆಯ ಕುಟುಂಬ ತಮ್ಮ ಜೀವನದಲ್ಲಿ ಭಯಾನಕ ಅಧ್ಯಾಯವನ್ನು ಕೊನೆಗೊಳಿಸಲು ನಾಲ್ಕು ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿ ಬಂದಿರುವುದು ತೀವ್ರ ಖೇದಕರ" ಎಂದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, 2013ರ ಜುಲೈನಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ.

ಮಹಿಳೆ ಇನ್ನೂ ಅಪ್ರಾಪ್ತ ವಯಸ್ಸಿನವಳಾಗಿದ್ದ ಸಂದರ್ಭದಲ್ಲಿ ಅಂದರೆ 1986ರಲ್ಲಿ 21 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದ. 1987ರ ನವೆಂಬರ್ ನಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯ ವಿರುದ್ಧ ತೀರ್ಪು ನೀಡಿ ಏಳು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಹಲವು ನ್ಯಾಯಾಲಯಗಳನ್ನು ಸುತ್ತುಹೊಡೆದ ಪ್ರಕರಣ ಅಂತಿಮವಾಗಿ ರಾಜಸ್ಥಾನ ಹೈಕೋರ್ಟ್ ತಲುಪಿತು. ಅಭಿಯೋಜಕ ಸಾಕ್ಷಿಗಳಿಂದ ಪ್ರಬಲ ಹೇಳಿಕೆಗಳು ಇಲ್ಲ ಎಂಬ ಕಾರಣ ನೀಡಿ ಹೈಕೋರ್ಟ್, ಆರೋಪಿಯನ್ನು ದೋಷಮುಕ್ತಗೊಳಿಸಿತ್ತು.

"ಬಾಲ ಸಾಕ್ಷಿ (ಸಂತ್ರಸ್ತೆ) ಆಕೆಯ ವಿರುದ್ಧ ಅಪರಾಧ ಎಸಗಿರುವ ಬಗ್ಗೆ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಘಟನೆ ಬಗ್ಗೆ ಕೇಳಿದಾಗ, ಸಂತ್ರಸ್ತೆ ಮೌನವಾಗಿದ್ದಳು ಎಂದು ವಿಚಾರಣಾ ನ್ಯಾಯಾಧೀಶರು ದಾಖಲಿಸಿಕೊಂಡಿದ್ದರು. ಮತ್ತೆ ಕೇಳಿದಾಗ ಮೌನವಾಗಿ ಕಣ್ಣೀರು ಸುರಿಸಿದ್ದು ಬಿಟ್ಟರೆ ಮತ್ತೇನೂ ಹೇಳಿರಲಿಲ್ಲ" ಎಂದು ನ್ಯಾಯಪೀಠ ಹೇಳಿದೆ.

ಆದರೆ ಇದನ್ನು ಆರೋಪಿಯ ಪರ ಅಂಶ ಎಂದು ಪರಿಗಣಿಸಲಾಗದು. ಬಾಲಕಿಯ ಮೌನದ ಹಿಂದೆ ಆಘಾತ ಕೆಲಸ ಮಾಡಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮಗುವಿನ ಮೌನವನ್ನು ವಯಸ್ಕ ಸಂತ್ರಸ್ತೆಯ ಮೌನದ ಜತೆ ತಾಳೆ ಮಾಡುವಂತಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಇದನ್ನು ಅಳೆಯಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News