ಸಂಸತ್ತು 'ಮನ್ ಕಿ ಬಾತ್' ಅಲ್ಲ: ಪ್ರಧಾನಿ ಮೋದಿಯ ಮಹಾ ಕುಂಭಮೇಳ ಕುರಿತ ಭಾಷಣಕ್ಕೆ ಟಿಎಂಸಿ ಸಂಸದ ಡೆರೆಕ್ ಓ’ಬ್ರಿಯಾನ್ ಆಕ್ಷೇಪ
Photo Credit: Sansad TV
ಹೊಸದಿಲ್ಲಿ: ಅಮೆರಿಕವು ಭಾರತದ ಮೇಲೆ ವಿಧಿಸಿರುವ ಸುಂಕ ವಿಷಯದ ಕುರಿತು ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಹಾ ಕುಂಭಮೇಳದ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಮಂಗಳವಾರ ಟಿಎಂಸಿ ಸಂಸದ ಡೆರೆಕ್ ಓ’ಬ್ರಿಯಾನ್ ಆರೋಪಿಸಿದರು.
ಇದಕ್ಕೂ ಮುನ್ನ, ವಿರೋಧ ಪಕ್ಷಗಳ ಸಂಸದರಿಗೆ ಸ್ಪಷ್ಟನೆ ನೀಡಲು ಅವಕಾಶ ನೀಡದಿದ್ದುರಿಂದ, ಸದನದಲ್ಲಿ ಗದ್ದಲ ಹಾಗೂ ಪ್ರತಿಭಟನೆಗಳು ನಡೆದವು. ಹೀಗಾಗಿ, ಲೋಕಸಭೆಯನ್ನು ಕೆಲಕಾಲ ಮುಂದೂಡಲಾಗಿತ್ತು.
ಸದನವು ಮತ್ತೆ ಸಮಾವೇಶಗೊಂಡಾಗ, ಸಚಿವರ ಹೇಳಿಕೆಗಳ ಕುರಿತು ಉಭಯ ಸದನಗಳ ಸದಸ್ಯರು ಸ್ಪಷ್ಟನೆ ಕೇಳಿರುವ ಅನೇಕ ಪೂರ್ವನಿದರ್ಶನಗಳಿವೆ ಎಂದೂ ಡೆರೆಕ್ ಓ’ಬ್ರಿಯಾನ್ ಹೇಳಿದರು.
ಇತ್ತೀಚೆಗೆ ನಡೆದ ಮಹಾ ಕುಂಭಮೇಳದ ಕುರಿತು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ನೀಡಿದ ಸಂಕ್ಷಿಪ್ತ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ರಾಜ್ಯಸಭೆಯಲ್ಲಿ ಟಿಎಂಸಿ ಪಕ್ಷದ ಸಂಸದೀಯ ನಾಯಕರೂ ಆಗಿರುವ ಡೆರೆಕ್ ಓ’ಬ್ರಿಯಾನ್, “ಪ್ರಧಾನಿ ಮೋದಿಯವರ ಭಾಷಣವು ತಮ್ಮ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳುವ ಭಾಷಣವಾಗಿದೆ. ಅವರು ಅಂತಾರಾಷ್ಟ್ರೀಯ ಮಟ್ವದಲ್ಲಿ ತಮ್ಮ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ತಮ್ಮ ಪಕ್ಷದ ಸಂಸದರು ತಮ್ಮನ್ನು ‘ತಾರೀಫ್’ (ಗುಣಗಾನ) ಮಾಡಬೇಕು ಎಂದು ಅವರು ಬಯಸುತ್ತಿದ್ದರೆ, ಟ್ರಂಪ್ ‘ಟಾರೀಫ್’ (ಸುಂಕ) ಹೇರಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಸಂಸತ್ತಿನ ಕಲಾಪದಲ್ಲಿ ಒಂದು ಪ್ರಶ್ನೆಗೂ ಉತ್ತರಿಸದ ಅದೇ ಪ್ರಧಾನಿ ಇವರಾಗಿದ್ದಾರೆ. ಒಂದೂ ಸಮರ್ಪಕ ಪತ್ರಿಕಾಗೋಷ್ಠಿಯನ್ನು ನಡೆಸದ ಪ್ರಧಾನಿ ಕೂಡಾ ಇವರೇ ಆಗಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಪತ್ರಿಕಾ ಗೋಷ್ಠಿ ನಡೆಸುತ್ತಾರೆ” ಎಂದು ಅವರು ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷಗಳ ಸಂಸದರಿಗೆ ಸ್ಪಷ್ಟನೆ ಕೋರಲು ಅವಕಾಶ ನೀಡದ ಕೇಂದ್ರ ಸರಕಾರವನ್ನು ಅವರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. “ವಿರೋಧ ಪಕ್ಷಗಳ ಸದಸ್ಯರಿಗೆ ಸ್ಪಷ್ಟನೆ ಕೋರಲು ಯಾಕೆ ಅವಕಾಶ ನೀಡಲಾಗುತ್ತಿಲ್ಲ? ಸಚಿವರೊಬ್ಬರು ಹೇಳಿಕೆ ನೀಡಿದಾಗ ವಿರೋಧ ಪಕ್ಷಗಳು ಸ್ಪಷ್ಟನೆ ಕೋರಿರುವ ಅನೇಕ ಪೂರ್ವ ನಿದರ್ಶನಗಳು ಉಭಯ ಸದನಗಳಲ್ಲೂ ಇವೆ” ಎಂದು ಅವರು ವಾಗ್ದಾಳಿ ನಡೆಸಿದರು.
ಅಲ್ಲದೆ, ಸಂಸತ್ತು ‘ಮನ್ ಕಿ ಬಾತ್’ನಂತೆ ಏಕಮುಖ ಸಂವಾದವಲ್ಲ; ಬದಲಿಗೆ ದ್ವಿಮುಖ ಸಂವಾದ ಎಂದೂ ಅವರು ಛೇಡಿಸಿದರು.