ಮಹಾಕುಂಭವು 1857ರ ಸ್ವಾತಂತ್ರ್ಯ ಸಂಗ್ರಾಮ, ದಂಡಿ ಮೆರವಣಿಗೆಯಂತಹ ಮಹತ್ವದ ಮೈಲಿಗಲ್ಲು ಎಂದ ಪ್ರಧಾನಿ ಮೋದಿ
Photo Credit: PTI/Sansad TV
ಹೊಸದಿಲ್ಲಿ: ಭಾರತದ ಸಾಮರ್ಥ್ಯಗಳ ಬಗ್ಗೆ ಅನುಮಾನ ಮತ್ತು ಆತಂಕಗಳಿದ್ದವರಿಗೆ ಮಹಾ ಕುಂಭ ಮೇಳದ ಯಶಸ್ವಿ ನಿರ್ವಹಣೆ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದರು. ಆದರೆ ಅವರು ಮಹಾಕುಂಭದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿಲ್ಲ, ಇದು ವಿಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು.
ಐತಿಹಾಸಿಕ ಸ್ವದೇಶಿ ಆಂದೋಲನ, ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ, 1857ರ ಸ್ವಾತಂತ್ರ್ಯ ಸಂಗ್ರಾಮ, ಭಗತ್ ಸಿಂಗ್ ಅವರ ಪ್ರಾಣತ್ಯಾಗ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ದಿಲ್ಲಿ ಚಲೋ ಕರೆ ಮತ್ತು ಮಹಾತ್ಮಾ ಗಾಂಧಿಯವರ ದಂಡಿ ಮೆರವಣಿಗೆಯಿಂದ ಸ್ಫೂರ್ತಿ ಪಡೆಯುವ ಮೂಲಕ ಭಾರತ ಸ್ವಾತಂತ್ರ್ಯವನ್ನು ಸಾಧಿಸಿದೆ. ಮಹಾ ಕುಂಭವು ಜಾಗೃತ ರಾಷ್ಟ್ರದ ಚೈತನ್ಯವನ್ನು ಪ್ರತಿಬಿಂಬಿಸುವ ಇದೇ ರೀತಿಯ ಮಹತ್ವದ ಮೈಲಿಗಲ್ಲು ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಮಹಾ ಕುಂಭಮೇಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪ್ರಶ್ನಿಸಲು ಅವಕಾಶ ಕೋರಿ ಪ್ರತಿಪಕ್ಷಗಳು ಮಂಗಳವಾರ ಲೋಕಸಭೆಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದು,ಗದ್ದಲದ ನಡುವೆಯೇ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.
ಇದಕ್ಕೂ ಮುನ್ನ ಮೋದಿಯವರು ಮಹಾಕುಂಭ ಕುರಿತು ಹೇಳಿಕೆಯನ್ನು ನೀಡಿದ ಬೆನ್ನಿಗೇ ಪ್ರತಿಪಕ್ಷ ಸದಸ್ಯರು ತಮ್ಮ ಆಸನಗಳಿಂದ ಎದ್ದು ನಿಂತು ಪ್ರತಿಭಟನೆಯನ್ನು ಆರಂಭಿಸಿದಾಗ ಅಪರಾಹ್ನ ಒಂದು ಗಂಟೆಯವರೆಗೆ ಸದನವನ್ನು ಮುಂದೂಡಲಾಗಿತ್ತು. ಕಾಲ್ತುಳಿತದಿಂದ ಸಂಭವಿಸಿದ ಸಾವುಗಳನ್ನೂ ಪ್ರಧಾನಿಯವರ ಹೇಳಿಕೆಯಲ್ಲಿ ಸೇರಿಸಬೇಕು ಎಂದೂ ಪ್ರತಿಪಕ್ಷ ಸಂಸದರು ಆಗ್ರಹಿಸಿದರು.
ಸರಕಾರದ ಅಂಕಿಅಂಶಗಳ ಪ್ರಕಾರ,ಮಹಾ ಕುಂಭಮೇಳದಲ್ಲಿ ಜ.29ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದರು.
ಸದನವು ಮರುಸಮಾವೇಶಗೊಂಡಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ತನ್ನ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದರು.
ಸದನವು ಜಲಶಕ್ತಿ ಸಚಿವಾಲಯಕ್ಕೆ ಅನುದಾನಗಳ ಬೇಡಿಕೆಗಳ ಮೇಲೆ ಚರ್ಚೆಯನ್ನು ಕೈಗೆತ್ತಿಕೊಂಡಾಗ ಪ್ರತಿಪಕ್ಷ ಸದಸ್ಯರು ಸದನದ ಅಂಗಳದಲ್ಲಿ ನೆರೆದು ಪ್ರತಿಭಟನೆಯನ್ನು ಮುಂದುವರಿಸಿದರು. ಹೀಗಾಗಿ ಸ್ಪೀಕರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.