ಕವಚ್ ಸುರಕ್ಷತಾ ವ್ಯವಸ್ಥೆ ಮೇಲೆ ಸಣ್ಣ ಮೊತ್ತ ತೊಡಗಿಸುವುದಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ?
ಲೋಕೋ ಪೈಲಟ್‌ಗಳ ಸ್ಥಿತಿ ಬಗ್ಗೆ ಹೇಳಿದ್ದಕ್ಕೆ ವಿಪಕ್ಷವನ್ನು ಟೀಕಿಸುವುದಕ್ಕೆ ನಿಲ್ಲುವ ರೈಲ್ವೆ ಮಂತ್ರಿ, ನಿಜವಾಗಿಯೂ ಇಲಾಖೆಯಲ್ಲಿ ಎಂಥ ಸ್ಥಿತಿಯಿದೆ, ಲೋಕೋ ಪೈಲಟ್‌ಗಳ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸುವ ಕಳಕಳಿಯನ್ನಾದರೂ ತೋರಬೇಕಿತ್ತು. ತಮಗೆ ಅನುಕೂಲವಾಗುವ ಡೇಟಾ ಇಟ್ಟುಕೊಂಡು ಸಮರ್ಥಿಸಿಕೊಳ್ಳುವುದು ರೈಲ್ವೆ ಮಂತ್ರಿಯ ಕೆಲಸವೇ? ಏಕೆ ಸಿಗ್ನಲ್ ವೈಫಲ್ಯ ಉಂಟಾಗುತ್ತದೆ ಎಂಬುದನ್ನಾದರೂ ಮಂತ್ರಿಯಾದವರು ಯೋಚಿಸಬೇಕಲ್ಲವೆ? ರೈಲ್ವೆ ಸುರಕ್ಷತಾ ಆಯೋಗವೇ ಲೋಪಗಳ ಬಗ್ಗೆ ಹೇಳುತ್ತಿದೆ. ಆದರೆ ರೈಲ್ವೆ ಮಂತ್ರಿ ಮಾತ್ರ ಏಕೆ ಸಮರ್ಥಿಸಿಕೊಳ್ಳುತ್ತಾ ಸತ್ಯ ಅಡಗಿಸುವುದರಲ್ಲೇ ನಿರತರಾಗಿದ್ದಾರೆ?
ಈವರೆಗಿನ ಅತ್ಯಂತ ವಿಫಲ ರೈಲ್ವೆ ಸಚಿವರಾಗಿಬಿಟ್ಟರೇ ಅಶ್ವಿನಿ ವೈಷ್ಣವ್? ಉನ್ನತ ಶಿಕ್ಷಣ ಪಡೆದ, ಭಾರೀ ಐಡಿಯಾಗಳಿರುವ, ಟೆಕ್ನೋಕ್ರಾಟ್ ಮಂತ್ರಿ ಎಂದೆಲ್ಲ ಹಣೆಪಟ್ಟಿಯೊಂದಿಗೆ ಬಂದು ಅವರು ಮಾಡಿದ್ದೇನು?
ಈಗ ಮತ್ತೂ ಒಂದು ರೈಲು ದುರಂತ ಸಂಭವಿಸಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಚಂಡಿಗಡ-ದಿಬ್ರುಗಡ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ.
ದಿಬ್ರುಗಡಕ್ಕೆ ತೆರಳುತ್ತಿದ್ದ ರೈಲು ಯುಪಿಯ ಗೊಂಡಾ ಎಂಬಲ್ಲಿ ಪಲ್ಟಿಯಾಗಿದೆ.
ಎಸಿ ಕೋಚ್‌ಗಳು ಸೇರಿ 12 ಕೋಚ್‌ಗಳು ಹಳಿ ತಪ್ಪಿದ್ದವು. ನಾಲ್ವರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿರುವುದಾಗಿ ಹಾಗೂ ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದುದಾಗಿ ವರದಿಗಳಿದ್ದವು.
ಈ ಭೀಕರ ಅಪಘಾತದ ನಂತರ, ರೈಲ್ವೆಯ ಸುರಕ್ಷತೆ ಮತ್ತು ನಿರ್ವಹಣೆಯ ಬಗ್ಗೆ ಮತ್ತೆ ಚರ್ಚೆ ಪ್ರಾರಂಭವಾಗಿದೆ.
ತಿಂಗಳ ಹಿಂದಷ್ಟೇ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ದುರಂತ 10 ಜನರನ್ನು ಬಲಿ ತೆಗೆದುಕೊಂಡಿತ್ತು.
ಅದು ಎಷ್ಟೆಲ್ಲ ಪ್ರಶ್ನೆಗಳನ್ನು ಎತ್ತಿತ್ತು.
ರೈಲ್ವೆ ಖಾಸಗೀಕರಣಗೊಳಿಸುವ ಭರದಲ್ಲಿ ಪೂರ್ತಿ ಹಾಳುಗೆಡವಲಾಗುತ್ತಿದೆ ಎಂದು ಆಗ ವಿಪಕ್ಷಗಳು ಟೀಕಿಸಿದ್ದವು.
ಆದರೆ ಅಷ್ಟರಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಈಗಲ್ಲ, ಕಳೆದೊಂದು ವರ್ಷದಿಂದಲೂ ರೈಲ್ವೆಯ ಹದಗೆಟ್ಟ ಸ್ಥಿತಿಯ ಬಗ್ಗೆ ಸವಾಲುಗಳು ಏಳುತ್ತಲೇ ಇವೆ.
ಒಡಿಶಾದ ಬಾಲಾಸೋರ್‌ನಲ್ಲಿ 2023ರ ಜೂನ್ 2ರಂದು ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅವಘಡದಲ್ಲಿ 293 ಪ್ರಯಾಣಿಕರು ಸಾವನ್ನಪ್ಪಿದ್ದರು. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಆಗ ಕವಚ್ ಸುರಕ್ಷಾ ವ್ಯವಸ್ಥೆ ವಿಚಾರವಾಗಿ ಪ್ರಶ್ನೆಗಳು ಎದ್ದಿದ್ದವು.
ಸಂಸತ್ತಿನಲ್ಲಿ ಮಹುವಾ ಮೊಯಿತ್ರಾ ತಮ್ಮ ಮೊದಲ ಭಾಷಣದಲ್ಲಿಯೇ, ‘‘ಒಂದೇ ಬುಲೆಟ್ ರೈಲು ಮಾರ್ಗಕ್ಕಾಗಿ ಖರ್ಚು ಮಾಡಲಾದ ವೆಚ್ಚಕ್ಕಿಂತ ಕಡಿಮೆ ಹಣದಲ್ಲಿ ದೇಶಾದ್ಯಂತ ಕವಚ್ ವ್ಯವಸ್ಥೆ ಅಳವಡಿಸಬಹುದು’’ ಎಂದಿದ್ದರು. 1 ಲಕ್ಷ 8 ಸಾವಿರ ಕೋಟಿ ಹಣವನ್ನು ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನೊಂದಕ್ಕಾಗಿಯೇ ವ್ಯಯಿಸಿದ್ದನ್ನು ಪ್ರಸ್ತಾವಿಸಿದ ಅವರು, ಅದೊಂದು ಕ್ರೂರ ಜೋಕ್ ಎಂದಿದ್ದರು.
ಕವಚ್ ರೈಲ್ವೆ ಸುರಕ್ಷತಾ ವ್ಯವಸ್ಥೆ ಅಳವಡಿಸುವ ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು ಕಿ.ಮೀ.ಗೆ 50 ಲಕ್ಷ ರೂ. ಮಾತ್ರ.
ದೇಶದ ಒಟ್ಟು ರೈಲುಮಾರ್ಗ 1.26ಲಕ್ಷ ಕಿ.ಮೀ. ಇದ್ದಿರಬಹುದು. ದೇಶಾದ್ಯಂತ ಕವಚ್ ಅಳವಡಿಕೆಗೆ ತಗಲಬಹುದಾದ ವೆಚ್ಚ 63 ಸಾವಿರ ಕೋಟಿ ರೂ. ಮಾತ್ರ.
ಆದರೆ ಏಕೈಕ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ವ್ಯವಸ್ಥೆಗೆ 1 ಲಕ್ಷ 8 ಸಾವಿರ ಕೋಟಿ ರೂ. ವೆಚ್ಚ ಮಾಡುವವರಿಗೆ ಅದಕ್ಕಿಂತ ಕಡಿಮೆ ವೆಚ್ಚದ ರೈಲು ಅವಘಡ ತಪ್ಪಿಸುವ ಕವಚ್ ವ್ಯವಸ್ಥೆ ಅಳವಡಿಸಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
25,000 ಕೋಟಿ ರೂ. ವೆಚ್ಚದಲ್ಲಿ 508 ರೈಲ್ವೇ ನಿಲ್ದಾಣ ಗಳನ್ನು ಝಗಮಗಗೊಳಿಸಲು ಹೊರಟಿದ್ದವರಿಗೆ ಕವಚ್ ಸುರಕ್ಷತಾ ವ್ಯವಸ್ಥೆ ಮೇಲೆ ಸಣ್ಣ ಮೊತ್ತ ತೊಡಗಿಸುವುದಕ್ಕೆ ಮನಸ್ಸಿಲ್ಲ ಎಂಬುದೇ ವಿಚಿತ್ರ. ಬರೀ 508 ರೈಲುನಿಲ್ದಾಣ ಗಳಿಗಾಗಿ ಅಷ್ಟೊಂದು ಹಣ ವ್ಯಯಿಸಬೇಕಿದೆಯೆ? ಮಾಲ್ ಇರುವ ನಿಲ್ದಾಣ ಮುಖ್ಯವೋ, ರೈಲಿನಲ್ಲಿ ಪ್ರಯಾಣಿಸು ವವರು ಸುರಕ್ಷಿತವಾಗಿ ಊರು ತಲುಪುವುದು ಮುಖ್ಯವೋ?
ಇದನ್ನು ಯೋಚಿಸದ ಸರಕಾರ ಬೇಡದ್ದೆಲ್ಲವನ್ನೂ ಮಾಡಿಕೊಂಡು ಕುಳಿತಿದೆ.
ಈ ಸರಕಾರ ಬಂದು 10 ವರ್ಷಗಳೇ ಆಗಿಹೋದವು.
ಆದರೆ ರೈಲ್ವೆ ಮಾತ್ರ ದುಸ್ಥಿತಿ ಮುಟ್ಟಿದೆ.
ಚಂಡೀಗಡ-ದಿಬ್ರುಗಡ ಎಕ್ಸ್‌ಪ್ರೆಸ್ ರೈಲು ಅವಘಡದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ, ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಈ ಘಟನೆಯ ಸಂಪೂರ್ಣ ಹೊಣೆಯನ್ನು ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೊರಬೇಕು ಎಂದಿದ್ದಾರೆ.
ಮೋದಿ ಸರಕಾರ ರೈಲು ಸುರಕ್ಷತೆಯನ್ನು ಹೇಗೆ ವ್ಯವಸ್ಥಿತವಾಗಿ ಅಪಾಯಕ್ಕೆ ಸಿಲುಕಿಸಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಎಂದು ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಅಶ್ವಿನಿ ವೈಷ್ಣವ್ ಅವಧಿಯ ರೈಲು ದುರಂತಗಳನ್ನು, ಮೋದಿ ಸರಕಾರದ 10 ವರ್ಷಗಳ ಅವಧಿಯಲ್ಲಿನ ಪೂರ್ತಿ ವಿವರವನ್ನು ಟ್ವೀಟ್ ಮಾಡಿದೆ.
ದುರಂತಗಳು ಸಂಭವಿಸಿದಾಗೆಲ್ಲ ಸಮಸ್ಯೆಯ ಆಳ ಅಗಲ ಅರಿವಿಗೆ ಬರುತ್ತಲೇ ಹೋಗುತ್ತವೆ. ಹಲವು ಲೋಪಗಳು ವ್ಯವಸ್ಥೆಯಲ್ಲಿರುವುದು ಬಹಿರಂಗವಾಗುತ್ತದೆ.
ಕಾಂಚನ್ ಜುಂಗಾ ರೈಲು ದುರಂತವಾದಾಗ, ಲೋಕೊ ಪೈಲಟ್ ಮತ್ತು ರೈಲು ಮ್ಯಾನೇಜರ್‌ಗೆ ವಾಕಿಟಾಕಿ ನೀಡಿರಲಿಲ್ಲ ಎಂಬುದು ಗೊತ್ತಾಗಿತ್ತು. ಅಗತ್ಯವಾಗಿರುವ ವಾಕಿಟಾಕಿ ಪೂರೈಸಲಾಗದವರು ಕೋಟಿಗಟ್ಟಲೆ ಹಣ ಖರ್ಚು ಮಾಡಿ ನಿಲ್ದಾಣಗಳನ್ನೇಕೆ ಝಗಮಗಗೊಳಿಸಲು ಹೊರಟಿದ್ದಾರೆ?
ಲೋಕೋ ಪೈಲಟ್‌ಗೆ ಅಗತ್ಯ ತರಬೇತಿಯನ್ನು ಪೂರ್ಣ ಪ್ರಮಾಣದಲ್ಲಿ ನೀಡಿಲ್ಲವೆಂದಾದರೆ ಇನ್ನು ಸುರಕ್ಷತೆಯ ಕಥೆ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಬಹುದು.
ಕಾಂಚನ್ ಜುಂಗಾ ಅವಘಡದ ವೇಳೆಯಲ್ಲೂ ಲೋಕೋ ಪೈಲಟ್ ಮೇಲೆಯೇ ತಪ್ಪು ಹೊರಿಸಲಾಗಿತ್ತು.
ಆದರೆ ಲೋಕೋ ಪೈಲಟ್‌ಗಳು ಎಂಥ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸರಕಾರ ಯೋಚಿಸುವುದೇ ಇಲ್ಲ.
ಲೋಕೊ ಪೈಲಟ್‌ಗಳನ್ನು ಕಂಡು ಮಾತಾಡಿಸಿದ್ದ ರಾಹುಲ್ ಗಾಂಧಿ, ಅವರೆಲ್ಲ 16 ಗಂಟೆಗಳ ಕಾಲ ಕೆಲಸ ಮಾಡಬೇಕಾದ ಸ್ಥಿತಿ ಇರುವುದರ ಬಗ್ಗೆ ಹೇಳಿದ್ದರು.
ಲೋಕೋ ಪೈಲಟ್‌ಗಳ ಈ ಸ್ಥಿತಿ ನಿಜವಾಗಿಯೂ ಅವರ ದೈಹಿಕ, ಮಾನಸಿಕ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂಥದ್ದಾಗಿದೆ.
ಆದರೆ ಲೋಕೋ ಪೈಲಟ್‌ಗಳನ್ನು ಭೇಟಿಯಾದ ರಾಹುಲ್ ಬಗ್ಗೆಯೇ ಆಡಿಕೊಳ್ಳಲಾಯಿತು. ನಿಜವಾಗಿಯೂ ಇಲ್ಲಿ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಿದೆಯೇ ಹೊರತು, ರಾಹುಲ್ ಅವರನ್ನು ಆಡಿಕೊಳ್ಳುವುದಕ್ಕಲ್ಲ.
ಕಾಂಚನ್ ಜುಂಗಾ ದುರಂತಕ್ಕೆ ಸಂಬಂಧಿಸಿ, ರೈಲ್ವೆ ಸುರಕ್ಷಾ ಆಯೋಗದ ವರದಿ ಬಂದಿದೆ. ಲೋಕೋ ಪೈಲಟ್‌ಗಳಿಗೆ ತರಬೇತಿ ನೀಡಬೇಕಿರುವುದರ ಬಗ್ಗೆ, ವಾಕಿಟಾಕಿಯಂಥ ಅಗತ್ಯ ಉಪಕರಣಗಳನ್ನು ನೀಡಬೇಕಿರುವ ಬಗ್ಗೆ ಹೇಳಿದೆ.
ಅಶ್ವಿನಿ ವೈಷ್ಣವ್ ಲೋಕೋ ಪೈಲಟ್‌ಗಳ ಕೆಲಸದ ಅವಧಿ 16 ಗಂಟೆ ಎನ್ನುವುದನ್ನು ಅಲ್ಲಗಳೆದು ಟ್ವೀಟ್ ಮಾಡಿದ್ದರು.
ಪ್ರಯಾಣದ ನಡುವೆ ವಿಶ್ರಾಂತಿ ಇರುವುದರ ಬಗ್ಗೆ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ನಿಗದಿಗಿಂತ ಹೆಚ್ಚು ಗಂಟೆಗಳವರೆಗೆ ಕೆಲಸ ಮಾಡಬೇಕಿರುವ ಬಗ್ಗೆ ಹೇಳಿದ್ದರು.
ಅದಕ್ಕಿಂತಲೂ ಹೆಚ್ಚಾಗಿ ಅಶ್ವಿನಿ ವೈಷ್ಣವ್, 2014ರ ಮೊದಲು ಹೇಗಿತ್ತು, ಆನಂತರ ಹೇಗಿದೆ ಎಂಬುದನ್ನು ಹೇಳಲು ಯತ್ನಿಸಿದ್ದರು.
ಅಂತೂ ಸಮಸ್ಯೆಯೇ ಇಲ್ಲ ಎಂದು ಬಿಂಬಿಸುತ್ತಾ, ಎಂಥ ಕಷ್ಟದಲ್ಲಿ ಲೋಕೊ ಪೈಲಟ್‌ಗಳು ರೈಲು ಚಾಲನೆ ಮಾಡಬೇಕಾಗಿದೆ ಎಂಬ ಸತ್ಯವನ್ನು ಅಡಗಿಸುವುದು ನಡೆದೇ ಇದೆ.
ಲೋಕೋ ಪೈಲಟ್‌ಗಳ ಸ್ಥಿತಿ ಬಗ್ಗೆ ಹೇಳಿದ್ದಕ್ಕೆ ವಿಪಕ್ಷವನ್ನು ಟೀಕಿಸುವುದಕ್ಕೆ ನಿಲ್ಲುವ ರೈಲ್ವೆ ಮಂತ್ರಿ, ನಿಜವಾಗಿಯೂ ಇಲಾಖೆಯಲ್ಲಿ ಎಂಥ ಸ್ಥಿತಿಯಿದೆ, ಲೋಕೋ ಪೈಲಟ್‌ಗಳ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸುವ ಕಳಕಳಿಯನ್ನಾದರೂ ತೋರಬೇಕಿತ್ತು.
ತಮಗೆ ಅನುಕೂಲವಾಗುವ ಡೇಟಾ ಇಟ್ಟುಕೊಂಡು ಸಮರ್ಥಿಸಿಕೊಳ್ಳುವುದು ರೈಲ್ವೆ ಮಂತ್ರಿಯ ಕೆಲಸವೇ?
ಏಕೆ ಸಿಗ್ನಲ್ ವೈಫಲ್ಯ ಉಂಟಾಗುತ್ತದೆ ಎಂಬುದನ್ನಾದರೂ ಮಂತ್ರಿಯಾದವರು ಯೋಚಿಸಬೇಕಲ್ಲವೆ?
ರೈಲ್ವೆ ಸುರಕ್ಷತಾ ಆಯೋಗವೇ ಲೋಪಗಳ ಬಗ್ಗೆ ಹೇಳುತ್ತಿದೆ. ಆದರೆ ರೈಲ್ವೆ ಮಂತ್ರಿ ಮಾತ್ರ ಏಕೆ ಸಮರ್ಥಿಸಿಕೊಳ್ಳುತ್ತಾ ಸತ್ಯ ಅಡಗಿಸುವುದರಲ್ಲೇ ನಿರತರಾಗಿದ್ದಾರೆ?