ರಾಯಚೂರು | ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟ ಪ್ರಕರಣ : ಆರೋಪಿಯನ್ನು ಬಂಧಿಸಲು ಒತ್ತಾಯ
ರಾಯಚೂರು : ಮಾನ್ವಿ ತಾಲ್ಲೂಕಿನ ರಾಜಲಬಂಡಾ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿರಾಮೇಗೌಡ ಬಣ)ಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕುಮಾರ ಜೈನ್ ಒತ್ತಾಯಿಸಿದರು.
ಮಾನ್ವಿ ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಒಟ್ಟು 237 ವಿದ್ಯಾರ್ಥಿಗಳಿದ್ದು, ಕಳೆದ ವರ್ಷ ಇದೇ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ವಸತಿ ಶಾಲೆಯ ಪ್ರಾಚಾರ್ಯರು ಹಾಗೂ ಮೇಲ್ವಿಚಾರಕರನ್ನು ಅಮಾನತು ಮಾಡಲಾಗಿತ್ತು. ಈಗ ಅಪರಿಚಿತ ವ್ಯಕ್ತಿಯಿಂದ ವಿದ್ಯಾರ್ಥಿಗಳ ಶೌಚಾಲಯದಲ್ಲಿ ವೀಡಿಯೋ ಚಿತ್ರಿಕರಿಸಲು ಮೊಬೈಲ್ ಇಟ್ಟಿರುವ ಪ್ರಕರಣ ಖಂಡನೀಯ. ಕೂಡಲೇ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು.
ಸಂಘಟನೆಯ ಪದಾಧಿಕಾರಿಗಳಾದ ಆನಂದ ಸ್ವಾಮಿ, ಸಂಗಮೇಶ ಮಂಗಾನವರ ಉಪಸ್ಥಿತರಿದ್ದರು.