ರಾಯಚೂರು | ಆಹಾರ ಇಲಾಖೆಯಲ್ಲಿ ಅವ್ಯವಹಾರ ಆರೋಪ : ತನಿಖೆಗೆ ಒತ್ತಾಯ
ರಾಯಚೂರು : ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆಹಾರ ಇಲಾಖೆಯಲ್ಲಿ ಬರುವ ಪಡಿತರ ಧಾನ್ಯಗಳನ್ನು ಕಾಳ ಸಂತೆಗೆ ಸರಬರಾಜು ಮಾಡುತ್ತಿದ್ದಾರೆ. ಇಲಾಖೆಯ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಡಿತರ ವಿತರಣೆಗಾಗಿ ಬಂದಿರುವ ಪಡಿತರ ಧಾನ್ಯಗಳನ್ನು ಕಾಳಸಂತೆಗೆ ಕಳುಹಿಸುತ್ತಿದ್ದು, ಪ್ರತಿ ತಿಂಗಳೂ 4-5 ಲಕ್ಷ ರೂ. ಅವ್ಯವಹಾರ ಮಾಡಿಕೊಂಡು ಬರಲಾಗಿದೆ. ಇದರ ಬಗ್ಗೆ ಮೇಲಾಧಿಕಾರಿಗಳು ಸಮಗ್ರ ತನಿಖೆಗೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಿಂಧನೂರು ಅಹಾರ ಇಲಾಖೆಯಲ್ಲಿ ಅಧಿಕಾರಿ ಶಿರಸ್ತೆದಾರ ಆನಂದ ಮತ್ತು ವ್ಯವಸ್ಥಾಪಕ ದಾವಲ್ ಸಾಬ ಸೇರಿ ಪಡಿತರ ಧಾನ್ಯಗಳನ್ನು ಲೂಟಿ ಹೊಡೆಯುತ್ತಿದ್ದು, ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಸಿಂಧನೂರು ತಾಲ್ಲೂಕಿನಲ್ಲಿ 150 ನ್ಯಾಯಬೆಲೆ ಅಂಗಡಿಗಳು ಇದ್ದು, ಪ್ರತಿಯೊಂದು ಅಂಗಡಿಯಿಂದ ಪ್ರತಿ ತಿಂಗಳೂ 1 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದಾರೆ, ಅಂದರೆ ಪ್ರತಿ ತಿಂಗಳೂ 150 ಕ್ವಿಂಟಾಲ್ ಅಕ್ಕಿಯನ್ನು ಮಾರಾಟ ಮಾಡಿಕೊಂಡು ಇಬ್ಬರೂ ಸೇರಿ ಸಮಪಾಲು ಭಾಗ ಮಾಡಿಕೊಳ್ಳುತ್ತಿದ್ದು, ಇದು ಅವ್ಯವಹಾರಕ್ಕೆ ಹಿಡಿದ ಸಾಕ್ಷಿಯಾಗುತ್ತದೆ. ಅದರಂತೆ ಗೋದಾಮ ವ್ಯವಸ್ಥಾಪಕರಾದ ದಾವಲ್ ಸಾಬ ಇವರು 2,250 ಪಡಿತರವನ್ನು ಪಡೆದುಕೊಂಡು ಇಬ್ಬರದೂ ಸೇರಿ ಬೇರೆ ಬೇರೆ ತಾಲೂಕಿಗೆ ಈ ಪಡಿತರ ಅಕ್ಕಿಯನ್ನು ಕಾಳ ಸಂತೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ಪ್ರತಿ ತಿಂಗಳು ಇಬ್ಬರು ಅಧಿಕಾರಿಗಳು 5,62,500 ಮೊತ್ತವನ್ನು ಅವ್ಯವಹಾರ ಮಾಡಿಕೊಂಡು ಬಂದಿದ್ದಾರೆ. ಅವ್ಯವಹಾರ ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ ಮಾಡಿ ಇವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಕಾರ್ಯಾಲಯದ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ತಾಲ್ಲೂಕಾಧ್ಯಕ್ಷ ಸುರೇಶ್ ಗೊಬ್ಬರಕಲ್, ದಾವಲ್ ಸಾಬ ದೊಡ್ಡನಿ , ಇನ್ನಿತರರು ಹಾಜರಿದ್ದರು.