ಕಾಶ್ಮೀರದಲ್ಲಿ ಉಗ್ರರಿಂದ ಪೈಶಾಚಿಕ ದಾಳಿ: ಕೇಂದ್ರ ಸರಕಾರ ನೈತಿಕ ಹೊಣೆ ಹೊತ್ತುಕೊಳ್ಳಲಿ

Update: 2025-04-24 07:45 IST
ಕಾಶ್ಮೀರದಲ್ಲಿ ಉಗ್ರರಿಂದ ಪೈಶಾಚಿಕ ದಾಳಿ: ಕೇಂದ್ರ ಸರಕಾರ ನೈತಿಕ ಹೊಣೆ ಹೊತ್ತುಕೊಳ್ಳಲಿ

PC: x.com/narendramodi

  • whatsapp icon

ನಿಸ್ಸಂಶಯವಾಗಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯತೆ ಮತ್ತು ಕಾಶ್ಮೀರಿಯತ್‌ನ ಮೇಲೆ ಏಕಕಾಲದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿ ಈ ದೇಶದ ಎಲ್ಲ ಜಾತಿ, ಧರ್ಮ, ವರ್ಗ, ಪಕ್ಷಗಳು ಸಂಘಟಿತವಾಗಿ ಉಗ್ರವಾದದ ವಿರುದ್ಧ ಒಕ್ಕೊರಲಲ್ಲಿ ಮಾತನಾಡುವಂತೆ ಮಾಡಿದೆ. ಭಯೋತ್ಪಾದಕರ ಗುಂಡಿನ ದಾಳಿಗೆ ೨೬ ಪ್ರವಾಸಿಗರು ಮೃತಪಟ್ಟಿದ್ದಾರೆ. ಉಗ್ರರ ಈ ಹೇಯ ದಾಳಿಗೆ ಕೇವಲ ಪ್ರವಾಸಿಗರಷ್ಟೇ ಅಲ್ಲ, ಇಡೀ ಕಾಶ್ಮೀರವೇ ರಕ್ತಸಿಕ್ತಗೊಂಡು ಬಿದ್ದಿದೆ. ಈ ದಾಳಿ ಕಾಶ್ಮೀರದ ಬದುಕನ್ನು ಇನ್ನಷ್ಟು ಜರ್ಜರಿತಗೊಳಿಸಲಿದೆ. ಉಗ್ರವಾದಿಗಳು, ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರವನ್ನು ಸರ್ವನಾಶ ಮಾಡಲು ಇರುವ ಆಸಕ್ತಿ ಅದನ್ನು ಉದ್ಧರಿಸುವ ವಿಷಯದಲ್ಲಿ ಇಲ್ಲ ಎನ್ನುವುದು ಮತ್ತೊಮ್ಮೆ ಜಗತ್ತಿಗೆ ಸ್ಪಷ್ಟವಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವೇನು ಎನ್ನುವುದು ಕೂಡ ಬಯಲಿಗೆ ಬರಬೇಕಾಗಿದೆ. ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರಕಾರದ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ. ಭಯೋತ್ಪಾದಕರ ನಿರ್ನಾಮ ಮಾತ್ರವಲ್ಲ, ದಾಳಿಯಿಂದ ತತ್ತರಿಸಿರುವ ಸ್ಥಳೀಯ ಬದುಕನ್ನು ತೆಕ್ಕೆಗೆ ತೆಗೆದುಕೊಂಡು, ಅಲ್ಲಿಯ ಜನರಲ್ಲಿ ಆತ್ಮವಿಶ್ವಾಸ ಬಿತ್ತುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ.

ವಿಪರ್ಯಾಸವೆಂದರೆ, ಭಯೋತ್ಪಾದಕರು ತಮ್ಮ ದಾಳಿಯ ಮೂಲಕ ಯಾವ ದುರುದ್ದೇಶವನ್ನು ಸಾಧಿಸಲು ಮುಂದಾಗಿದ್ದಾರೆಯೋ ಆ ದುರುದ್ದೇಶದ ಸಾಧನೆಗೆ ಭಯೋತ್ಪಾದಕರ ಜೊತೆಗೆ ಭಾರತದ ಕೆಲವು ರಾಜಕೀಯ ಶಕ್ತಿಗಳು ಮತ್ತು ಮಾಧ್ಯಮಗಳು ಯಾವ ಸಂಕೋಚವೂ ಇಲ್ಲದೆ ಕೈಜೋಡಿಸಿರುವುದು. ಅದರ ಭಾಗವಾಗಿಯೇ ಅವರು ಈ ಹಿಂಸಾಚಾರಕ್ಕೆ ಹಿಂದೂ-ಮುಸ್ಲಿಮ್ ಎಂದು ಬಣ್ಣ ಹಚ್ಚಲು ಉತ್ಸಾಹಿತರಾಗಿದ್ದಾರೆ. ಈ ಭಯೋತ್ಪಾದನಾ ದಾಳಿಯನ್ನು ಒಂದು ನಿರ್ದಿಷ್ಟ ಧರ್ಮ ಇನ್ನೊಂದು ಧರ್ಮದ ಮೇಲೆ ನಡೆಸಿದ ದಾಳಿ ಎಂದು ಬಿಂಬಿಸಲು ಅವರು ಹೊರಟಿದ್ದಾರೆ. ಈ ಹಿಂಸೆ ನಿಜಕ್ಕೂ ಮುಸ್ಲಿಮರು ಹಿಂದೂಗಳ ಮೇಲೆ ಎಸಗಿದ ದಾಳಿಯೇ ಆಗಿದ್ದರೆ, ಮುಸ್ಲಿಮ್ ನಾಗರಿಕರು ಈ ದಾಳಿಯಲ್ಲಿ ಸಾಯುತ್ತಿರಲಿಲ್ಲ. ಪ್ರವಾಸಿಗರನ್ನು ರಕ್ಷಿಸಲು ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಕಾಶ್ಮೀರದ ಮುಸ್ಲಿಮ್ ನಾಗರಿಕರು ಪ್ರಾಣ ತ್ಯಾಗ ಮಾಡುತ್ತಿರಲಿಲ್ಲ. ಕರ್ನಾಟಕದ ಓರ್ವ ಸಂತ್ರಸ್ತರ ಹೇಳಿಕೆಯೇ ಇದಕ್ಕೆ ಸಾಕ್ಷಿ. ‘ಸ್ಥಳೀಯರು ‘ಬಿಸ್ಮಿಲ್ಲಾ ಬಿಸ್ಮಿಲ್ಲಾ’ ಎನ್ನುತ್ತಲೇ ನಮ್ಮನ್ನು ರಕ್ಷಿಸಿದರು. ಅವರು ನಮ್ಮನ್ನು ಅಣ್ಣಂದಿರಂತೆ ಜೋಪಾನ ಮಾಡಿದರು’ ಎಂದು ಸಂತ್ರಸ್ತರು ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಕನ್ನಡದ ಮಾಧ್ಯಮಗಳು ‘‘ಉಗ್ರರು ಬಿಸ್ಮಿಲ್ಲಾ ಬಿಸ್ಮಿಲ್ಲಾ ಎನ್ನುತ್ತಿದ್ದರು’’ ಎಂದು ಅದನ್ನು ತಿರುಚಿ ಬಿತ್ತರಿಸಿವೆ. ಅಷ್ಟೇ ಅಲ್ಲ, ‘ನಿಮ್ಮ ಧರ್ಮ ಯಾವುದು?’ ಎಂದು ವಿಚಾರಿಸಿ ಹಿಂದೂಗಳ ಮೇಲೆ ಮಾತ್ರ ಗುಂಡು ಹಾರಿಸಿದರು ಎಂಬ ವದಂತಿಗಳನ್ನು ಹರಡಿದರು. ಸ್ಥಳೀಯರೊಬ್ಬರು ಉಗ್ರರನ್ನು ತಡೆಯುವ ಭರದಲ್ಲಿ ಪ್ರಾಣ ತ್ಯಾಗ ಮಾಡಿರುವುದನ್ನು ಮುಚ್ಚಿಟ್ಟವು. ಬಹುಶಃ ಭಯೋತ್ಪಾದಕರು ಅರ್ಧದಲ್ಲೇ ನಿಲ್ಲಿಸಿದ್ದನ್ನು, ಭಾರತದ ಅದರಲ್ಲೂ ಕರ್ನಾಟಕದ ಕೆಲವು ಟಿ.ವಿ. ಮಾಧ್ಯಮಗಳು ಮುಂದುವರಿಸಿವೆ. ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ಪರಿಣಾಮವನ್ನು ದೇಶಾದ್ಯಂತ ವಿಸ್ತರಿಸುವುದು ಈ ಮಾಧ್ಯಮ ಭಯೋತ್ಪಾದಕರ ಉದ್ದೇಶವಾಗಿತ್ತು.

ಇದೇ ಸಂದರ್ಭದಲ್ಲಿ ಪಹಲ್ಗಾಮ್ ದುರಂತಕ್ಕೆ ಕೇಂದ್ರ ಸರಕಾರದ ವೈಫಲ್ಯದ ಪಾತ್ರವೆಷ್ಟು ಎನ್ನುವುದು ಚರ್ಚೆಯಾಗಬೇಕಾಗಿದೆ. ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಭದ್ರತಾ ವೈಫಲ್ಯದ ಕುರಿತಂತೆ ಅಲ್ಲಿನ ಮಾಜಿ ರಾಜ್ಯಪಾಲರೇ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಅಷ್ಟೊಂದು ಪ್ರಮಾಣದ ಅಪಾಯಕಾರಿ ಸ್ಫೋಟಕಗಳನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ಮುಕ್ತವಾಗಿ ಸಾಗಿಸುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ದೊರಕಿಲ್ಲ. ಪುಲ್ವಾಮಾದಲ್ಲಿ ನಮ್ಮ ೪೦ಕ್ಕೂ ಅಧಿಕ ಸೈನಿಕರನ್ನು ಉಗ್ರರಿಗೆ ಬಲಿಕೊಟ್ಟ ಕೇಂದ್ರ ಸರಕಾರದ ವೈಫಲ್ಯ ಈ ದೇಶವನ್ನು ಇಂದಿಗೂ ಇರಿಯುತ್ತಿದೆ. ಇದೀಗ ಆ ಗಾಯಕ್ಕೆ ಬರೆ ಎಳೆಯುವಂತೆ ಪಹಲ್ಗಾಮ್‌ನಲ್ಲಿ ನಾಲ್ಕೈದು ಉಗ್ರರು ನೂರಾರು ಪ್ರವಾಸಿಗರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದಾರೆ. ಈ ಬೆರಳೆಣಿಕೆ ಉಗ್ರರನ್ನು ತಡೆಯಲು ಒಬ್ಬನೇ ಒಬ್ಬ ಭದ್ರತಾ ಪಡೆಯ ಯೋಧರೂ ಅಲ್ಲಿ ಇರಲಿಲ್ಲ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಅಲ್ಲಿ ನೆರೆದ ಅಷ್ಟೊಂದು ಪ್ರವಾಸಿಗರಿಗೆ ಸರಕಾರ ಯಾಕೆ ಭದ್ರತೆಯನ್ನು ನೀಡಲಿಲ್ಲ?

ಅಷ್ಟೂ ಜನರನ್ನು ಸ್ವತಃ ಸರಕಾರವೇ ಭಯೋತ್ಪಾದಕರಿಗೆ ಬಲಿಕೊಟ್ಟು ಬಿಟ್ಟಿತೆ? ಎಂದು ದೇಶದ ಜನತೆ ಅನುಮಾನಿಸುತ್ತಿದ್ದಾರೆ. ಆ ಪ್ರಶ್ನೆಗೆ ಕೇಂದ್ರ ಸರಕಾರವೇ ಉತ್ತರಿಸಬೇಕು. ಯಾಕೆಂದರೆ, ಅಲ್ಲಿನ ಗೃಹ ಇಲಾಖೆ, ಸೇನಾಪಡೆಗಳ ನಿಯಂತ್ರಣವನ್ನು ಕೇಂದ್ರ ಸರಕಾರ ಹೊಂದಿದೆ. ಅಲ್ಲಿನ ಸ್ಥಳೀಯ ಸರಕಾರ ನೆಪಕ್ಕಷ್ಟೇ ಇದೆ.

ಕಾಶ್ಮೀರ ಈಗಲೂ ಬಹುತೇಕ ಸೇನಾ ಪಡೆಗಳ ಹಿಡಿತದಲ್ಲೇ ಇದೆ. 370ನೇ ವಿಧಿ ರದ್ದುಗೊಳಿಸಿ, ಇಡೀ ಕಾಶ್ಮೀರವನ್ನು ಸಂಪೂರ್ಣವಾಗಿ ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಅಲ್ಲಿ ಭಯೋತ್ಪಾದನೆ ಇಳಿಕೆಯಾಗಿದೆ ಎಂದು ಕೇಂದ್ರದ ನಾಯಕರು ಪದೇ ಪದೇ ಭಾರತವನ್ನು ನಂಬಿಸುತ್ತಾ ಬಂದಿದ್ದಾರೆ. ಆದರೆ ಕಾಶ್ಮೀರಿ ಪಂಡಿತರ ಮೇಲೆ ದಾಳಿ ಹೆಚ್ಚುತ್ತಿದೆ ಎಂದು ವಿವಿಧ ಕಾಶ್ಮೀರಿ ಸಂಘಟನೆಗಳು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಾ ಬರುತ್ತಿವೆ. ಕಾಶ್ಮೀರದಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಲು ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಅವರನ್ನು ಬೆದರಿಸಿ ಕೆಲಸ ಮಾಡಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ನಡೆಸುತ್ತಾ ಬಂದಿದೆ. ನಿಜಕ್ಕೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದರೆ, ಕಾಶ್ಮೀರಿ ಪಂಡಿತರು ಯಾಕೆ ಬೀದಿಗಿಳಿಯುತ್ತಿದ್ದರು? ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಸರಕಾರಿ ಸಿಬ್ಬಂದಿ ಯಾಕೆ ಹಿಂಜರಿಯುತ್ತಿದ್ದರು? ಇದೀಗ ನೂರಾರು ಪ್ರವಾಸಿಗರು ನೆರೆದಿರುವ ಸ್ಥಳದಲ್ಲಿ ಭಯೋತ್ಪಾದಕರು ಯಾವುದೇ ಭಯವಿಲ್ಲದೆ ಕೋವಿಗಳೊಂದಿಗೆ ಬಂದು ದಾಳಿ ನಡೆಸುತ್ತಾರೆ ಎನ್ನುವುದರ ಅರ್ಥವಾದರೂ ಏನು? ಬಹುಶಃ ಸ್ಥಳೀಯ ಮುಸ್ಲಿಮರು ಪ್ರವಾಸಿಗರ ರಕ್ಷಣೆಗೆ ನಿಲ್ಲದೇ ಇರುತ್ತಿದ್ದರೆ ಸಾವು ನೋವಿನ ಪ್ರಮಾಣ ಇನ್ನಷ್ಟು ಹೆಚ್ಚುತ್ತಿತ್ತು. ಆದುದರಿಂದ, ಪ್ರವಾಸಿಗರ ರಕ್ಷಣೆಯಲ್ಲಿ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದ ಮತ್ತು ಭಯೋತ್ಪಾದಕರನ್ನು ತಡೆಯಲು ಹೋಗಿ ಪ್ರಾಣ ತ್ಯಾಗ ಮಾಡಿದ ಸ್ಥಳೀಯರನ್ನು ಗುರುತಿಸಿ ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರಕಾರ ಗೌರವಿಸಬೇಕು.

ಪಾಕಿಸ್ತಾನವನ್ನೋ, ಉಗ್ರರನ್ನೋ ಅಥವಾ ಒಂದು ಧರ್ಮವನ್ನೋ ಹೊಣೆ ಮಾಡಿ ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯಿಂದ ಕಳಚಿಕೊಳ್ಳುವಂತಿಲ್ಲ. ಪಹಲ್ಗಾಮ್ ದುರಂತದಲ್ಲಿ ನಡೆದಿರುವ ಭದ್ರತಾ ವೈಫಲ್ಯ ತನಿಖೆಗೊಳಗಾಗಬೇಕಾಗಿದೆ. ಪುಲ್ವಾಮ ದುರಂತಕ್ಕೆ ಸಂಬಂಧಿಸಿದ ಭದ್ರತಾ ವೈಫಲ್ಯಕ್ಕೆ ಯಾವುದೇ ತಲೆದಂಡವಾಗಲಿಲ್ಲ. ಯಾವ ಸಚಿವನಿಗೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅನ್ನಿಸಲಿಲ್ಲ. ಕನಿಷ್ಠ ಪಹಲ್ಗಾಮ್‌ನ ದುರಂತದಲ್ಲಿ ಅಮಾಯಕರ ಸಾವಿಗಾಗಿ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಲಿದ್ದಾರೆಯೇ? ಅಷ್ಟರಮಟ್ಟಿಗೆ ನಮ್ಮನ್ನಾಳುವ ಸರಕಾರ ಸಂವೇದನಾಶೀಲತೆಯನ್ನು ಉಳಿಸಿಕೊಂಡಿದೆಯೆ? ಕಾದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News