ಐಟಿ ಕಾಯ್ದೆ ತಿದ್ದುಪಡಿ ರದ್ದು: ಕೇಂದ್ರಕ್ಕೆ ಹೈಕೋರ್ಟ್ ತಪರಾಕಿ

Update: 2024-09-28 05:11 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕೇಂದ್ರ ಸರಕಾರ ತಂದಿರುವ ತಿದ್ದು ಪಡಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿರುವ ಮುಂಬೈ ಹೈಕೋರ್ಟ್, ಕೊನೆಗೂ ಇದನ್ನು ರದ್ದು ಪಡಿಸಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ತಿದ್ದುಪಡಿಯನ್ನು ಜಾರಿಗೆ ತಂದಿದ್ದು, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಸರಕಾರಕ್ಕೆ ಸಂಬಂಧಿಸಿದ ವರದಿಗಳಲ್ಲಿರುವ ಸುಳ್ಳುಗಳನ್ನು ಪತ್ತೆ ಹಚ್ಚಲು ಒಂದು ಘಟಕವನ್ನು ಸ್ಥಾಪಿಸಲು ಮುಂದಾಗಿತ್ತು. ಈ ಘಟಕವು ಯಾವುದೇ ಸುದ್ದಿಯನ್ನು ನಕಲಿಯೆಂದು ನಿರ್ಧರಿಸಿದರೆ, ಆನ್ ಲೈನ್ ಸಂಸ್ಥೆಗಳು ತಕ್ಷಣ ಅವುಗಳನ್ನು ತೆಗೆದು ಹಾಕಬೇಕಾಗಿತ್ತು. ಒಂದು ವೇಳೆ ತೆಗೆದುಹಾಕಲು ಹಿಂಜರಿದರೆ ಅವು ಕಾನೂನು ಕ್ರಮವನ್ನು ಎದುರಿಸಬೇಕಾಗಿತ್ತು. ಈಗಾಗಲೇ ಎಲ್ಲ ಮುದ್ರಣ ಮಾಧ್ಯಮಗಳು, ಟಿವಿ ಚಾನೆಲ್‌ಗಳನ್ನು ಭಾಗಶಃ ಹಣದ ಮೂಲಕ ಕೊಂಡುಕೊಂಡಿರುವ ಸರಕಾರ, ಪರ್ಯಾಯ ಮಾಧ್ಯಮವಾಗಿ ಸರಕಾರದ ವಿರುದ್ದ ಕೆಲಸ ಮಾಡುತ್ತಿರುವ ಆನ್‌ಲೈನ್ ವೇದಿಕೆಗಳನ್ನು ನಿಯಂತ್ರಿಸಲು ಈ ತಿದ್ದುಪಡಿಯನ್ನು ತಂದಿದೆ ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗಿ ಬಿಡುತ್ತದೆ. ಇದರ ವಿರುದ್ಧ ಎಡಿಟರ್ಸ್ ಗಿಲ್ಡ್, ಸುದ್ದಿಪ್ರಸಾರ-ಡಿಜಿಟಲ್ ಸಂಘ ಮತ್ತು ಭಾರತೀಯ ಮ್ಯಾಗಝಿನ್‌ಗಳ ಸಂಘ ಹಾಗೂ ಸ್ಟಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಒಂದು ವರ್ಷ ಕಾಲದ ಸುದೀರ್ಘ ಹೋರಾಟಕ್ಕೆ ಇದೀಗ ಜಯಸಿಕ್ಕಿದೆ. ಮಾತ್ರವಲ್ಲ, ಸರಕಾರಿ ವಿರೋಧಿ ಧ್ವನಿಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಹೊರಟು ಕೇಂದ್ರ ಸರಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಭಾರತದ ಅತಿ ದೊಡ್ಡ ಸಮಸ್ಯೆಯೇ 'ನಕಲಿ ಸುದ್ದಿ'ಗಳಾಗಿವೆ. ವಿಪರ್ಯಾಸವೆಂದರೆ ಈ ನಕಲಿ ಸುದ್ದಿಗಳನ್ನು ಅಧಿಕೃತ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಮುಂದೆ ನಿಂತು ಹರಡುತ್ತಿವೆ. ದೇಶದ ಸಾಮಾಜಿಕ, ರಾಜಕೀಯ ಬದುಕಿನ ಮೇಲೆ ನಕಲಿ ಸುದ್ದಿ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ನಮ್ಮ ನ್ಯಾಯಾಲಯಗಳೇ ಹಲವು ಬಾರಿ ಕಳವಳ ವ್ಯಕ್ತಪಡಿಸಿವೆ ಮಾತ್ರವಲ್ಲ, ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆಗಳನ್ನು ನೀಡಿವೆ. ಇಷ್ಟಾದರೂ ಇಂತಹ ನಕಲಿ ಸುದ್ದಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಮ್ಮ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಇಂದು ನಮ್ಮ ಸರಕಾರ ನಿಂತಿರುವುದೇ ಇಂತಹ ನಕಲಿ ಐಟಿ ಸೆಲ್ ಗಳ ತಳಹದಿಯ ಮೇಲೆ. ಚುನಾವಣೆಗಳು ಹತ್ತಿರ ಬರುತ್ತಿರುವಂತೆ ರಾಜಕೀಯ ಪಕ್ಷಗಳ ಐಟಿ ಸೆಲ್‌ ಗಳು ಕೋಮು ಪ್ರಚೋದಕ ನಕಲಿ ಸುದ್ದಿಗಳನ್ನು ಹರಡುವುದರಲ್ಲಿ ನಿರತವಾಗುತ್ತವೆ. ಈ ಮೂಲಕ ಜನರನ್ನು ಪ್ರಚೋದಿಸುತ್ತವೆ. ಕೋಮು ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುತ್ತವೆ. ಇದರ ವಿರುದ್ದ ದೂರು ನೀಡಿದರೂ, ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದೆ ಕಾನೂನು ಪಾಲಕರು ಕೈ ಚೆಲ್ಲುತ್ತಾರೆ. ಒಂದು ವೇಳೆ ಇಂತಹ ನಕಲಿ ಸುದ್ದಿಗಳನ್ನು ಹರಡುವ ಐಟಿ ಸೆಲ್‌ ಗಳ ವಿರುದ್ದ ಕ್ರಮ ಕೈಗೊಳ್ಳಲು ಕಠಿಣ ಕಾನೂನನ್ನು ಜಾರಿಗೊಳಿಸಿದ್ದೇ ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿ ರುವ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಆ ಕಾನೂನಿನ ಕುಣಿಕೆಗೆ ಮೊದಲು ಸಿಲುಕಿಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪತ್ರಿಕೆಗಳು, ಟಿವಿ ಚಾನೆಲ್ ಗಳು ವದಂತಿಗಳನ್ನು, ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ವಿಪರ್ಯಾಸವೆಂದರೆ ಅಭಿವ್ಯಕ್ತಿಯ ಹೆಸರಿನಲ್ಲಿ ತನ್ನ ಕೃತ್ಯಗಳನ್ನು ಈ ಮಾಧ್ಯಮಗಳು ಸಮರ್ಥಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣವನ್ನು ಪರ್ಯಾಯ ಮಾಧ್ಯಮವಾಗಿ ಬಳಸಿಕೊಂಡು ಕೆಲವು ವಸ್ತು ನಿಷ್ಠ ಬರಹಗಾರರು, ಪತ್ರಕರ್ತರು ಸರಕಾರದ ಜನವಿರೋಧಿ ನೀತಿಗಳು, ಆಡಳಿತದ ಬಗ್ಗೆ ಧ್ವನಿಯೆತ್ತುತ್ತಿದ್ದಾರೆ. ಸರಕಾರ ಈ ಧ್ವನಿಯನ್ನು ಬಗ್ಗು ಬಡಿಯುವ ಏಕೈಕ ಉದ್ದೇಶದಿಂದ ಐಟಿ ಕಾಯ್ದೆಗೆ ತಿದ್ದು ಪಡಿ ತಂದು, ಆನ್‌ಲೈನ್ ವೇದಿಕೆಗಳಿಗೆ ಕಣ್ಣಾವಲು ಸಮಿತಿಯನ್ನು ನೇಮಿಸಲು ಮುಂದಾಯಿತು.

ಸಮಾಜವನ್ನು ಕಂಗೆಡಿಸುವ ಸುಳ್ಳುಸುದ್ದಿಗಳಿಗೆ ಕಣ್ಣಾವಲನ್ನು ನೇಮಿಸಬೇಕಾಗಿದ್ದ ಸರಕಾರ, ಈ ನಾಡಿನ ವಸ್ತು ನಿಷ್ಠ ಪತ್ರಕರ್ತರಿಂದ ತನ್ನ ಸರಕಾರದ ಮೇಲೆ ನಡೆಯಬಹುದಾದ ದಾಳಿಗಳನ್ನು ತಡೆಯಲು ಕ್ರಮ ಕೈಗೊಂಡಿತು. ತಿದ್ದುಪಡಿಯಲ್ಲಿ ಸರಕಾರ 'ನಕಲಿ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ' ಎನ್ನುವ ಪದಗಳನ್ನು ಬಳಸುತ್ತದೆ. ಅವುಗಳಿಗೆ ಸ್ಪಷ್ಟವಾದ ವ್ಯಾಖ್ಯಾನವಿಲ್ಲದೇ ಇರುವುದರಿಂದ ಅವುಗಳನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಂಡು ತನ್ನ ಪರವಾಗಿಲ್ಲದ ಎಲ್ಲ ಸುದ್ದಿಗಳನ್ನು ನಕಲಿ, ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಸುದ್ದಿಗಳು ಎಂದು ಷರಾ ಬರೆಯುವ ಅಪಾಯವಿತ್ತು. ಈ ಕಾನೂನನ್ನು ಬಳಸಿಕೊಂಡು ಸರಕಾರದ ವಿರುದ್ದ ಬರುವ ಎಲ್ಲ ವರದಿಗಳನ್ನು, ಟೀಕೆಗಳನ್ನು ನಿಷೇಧಿಸುವ, ಒಂದು ವೇಳೆ ಇವುಗಳನ್ನು ಆನ್‌ಲೈನ್ ಕಂಪೆನಿಗಳು ಅಳಿಸದೇ ಇದ್ದರೆ ಕಂಪೆನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದ್ದವು. ಒಂದು ರೀತಿಯಲ್ಲಿ ಸ್ವತಂತ್ರ ಮಾಧ್ಯಮವೆಂದು ಕರೆಯಲ್ಪಡುವ ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ವಿರುದ್ಧ ಬರೆಯುವ ಜನಸಾಮಾನ್ಯರ ಎಲ್ಲ ಹಕ್ಕುಗಳನ್ನು ಈ ತಿದ್ದುಪಡಿಯು ಕಿತ್ತುಕೊಳ್ಳುತ್ತಿತ್ತು.

ಸರಕಾರದ ವಿರುದ್ಧ ತಪ್ಪು ಮಾಹಿತಿಗಳನ್ನು ಹರಡಿದರೆ ಅದಕ್ಕೆ ಸಂಬಂಧಿಸಿ ಸ್ಪಷ್ಟಿಕರಣ ನೀಡುವ ಮತ್ತು ತಪ್ಪು ಮಾಹಿತಿ ಹರಡಿದ ವ್ಯಕ್ತಿಯನ್ನು ಗುರುತಿಸಿ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಸಂಬಂಧಿಸಿದ ಇಲಾಖೆಗೆ ಇದ್ದೇ ಇದೆ. ಇದಕ್ಕೆ ಬದಲಾಗಿ ಆನ್‌ಲೈನ್ ವೇದಿಕೆಗಳಲ್ಲಿ ಪ್ರಕಟವಾಗುವ ಸುದ್ದಿಯಲ್ಲಿ ಯಾವುದು ನಕಲಿ, ಯಾವುದು ಸುಳ್ಳು, ಯಾವುದು ತಪ್ಪು ದಾರಿಗೆಳೆಯುವ ವರದಿ ಎನ್ನುವುದನ್ನು ತಾನೇ ನಿರ್ಧರಿಸಿ, ತೀರ್ಪು ನೀಡಿ ಸಂಬಂಧಿಸಿದ ಹೇಳಿಕೆಯನ್ನು ಅಳಿಸಲು ಆದೇಶ ನೀಡುವುದು ಮತ್ತು ಅದನ್ನು ಅಳಿಸದೇ ಇದ್ದಲ್ಲಿ ಕಂಪೆನಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗುವುದು ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಎಂದು ಕೊಚ್ಚಿ ಕೊಳ್ಳುವ ಭಾರತಕ್ಕೆ ಖಂಡಿತ ಭೂಷಣವಲ್ಲ. ಇದು ಅಳಿದುಳಿದ ಅಭಿವ್ಯಕ್ತಿಯ ಮಾರ್ಗವನ್ನು ಸಂಪೂರ್ಣ ಮುಚ್ಚಿ ಹಾಕಿ, ಪರೋಕ್ಷವಾಗಿ ಸರ್ವಾಧಿಕಾರಿ ಸರಕಾರವನ್ನು ಸ್ಥಾಪಿಸುವುದಕ್ಕೆ ಪೀಠಿಕೆಯಾಗಿದೆ. ಇದರ ವಿರುದ್ಧ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಐಟಿ ಕಂಪೆನಿಗಳ ಮುಖ್ಯಸ್ಥರೂ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಕಳೆದ ಜನವರಿಯಲ್ಲಿ ಈ ಬಗ್ಗೆ ದ್ವಿಪಕ್ಷೀಯ ವಿಭಾಗೀಯ ನ್ಯಾಯ ಪೀಠವು ಎರಡು ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. ಬಳಿಕ ನ್ಯಾಯಮೂರ್ತಿ ಚಂದೂರ್‌ಕರ್ ಅವರು ತೃತೀಯ ನ್ಯಾಯಾಧೀಶರಾಗಿ ಪರ ವಿರುದ್ದ ಹೇಳಿಕೆಯನ್ನು ಆಲಿಸಿದ್ದರು. ಇದೀಗ ಐಟಿ ತಿದ್ದು ಪಡಿ ಸಂವಿಧಾನ ವಿರೋಧಿಯಾದದ್ದು ಎನ್ನುವುದನ್ನು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಂದರೆ, ಕೇಂದ್ರ ಈ ಕಾಯ್ದೆಯ ಮೂಲಕ ಸಂವಿಧಾನ ಬದ್ಧವಾಗಿರುವ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿತ್ತು ಎನ್ನುವುದು ನ್ಯಾಯಾಲಯದಿಂದ ಸ್ಪಷ್ಟವಾಗಿದೆ. ಹೈಕೋರ್ಟ್ ಮಧ್ಯ ಪ್ರವೇಶಿಸಿ, ಕಾಯ್ದೆಯನ್ನು ರದ್ದು ಪಡಿಸಿರುವುದು ಕೇಂದ್ರ  ಸರಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಾದರೂ ಕೇಂದ್ರ ಸರಕಾರ ತನ್ನ ಸಂವಿಧಾನ ವಿರೋಧಿ ನಡೆಯನ್ನು ಇನ್ನಾದರೂ ತಿದ್ದಿಕೊಳ್ಳಲು ಮುಂದಾಗಬೇಕಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News