ಪ್ರಜಾಪ್ರಭುತ್ವದ ಹಬ್ಬ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿ ಮೋದಿಯವರು ನೀರಿನಲ್ಲಿ ಮುಳುಗಿ ‘ಧ್ಯಾನಸ್ಥ’ರಾದಾಗಲೇ ಚುನಾವಣೆ ಅನಧಿಕೃತವಾಗಿ ಘೋಷಣೆಯಾಗಿತ್ತು. ಇದೀಗ ಚುನಾವಣಾ ಆಯೋಗ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಕಳೆದ ಬಾರಿ ಗುಹೆಯಲ್ಲಿ ತಪ್ಪಸ್ಸಿಗೆ ಕೂತ ಪ್ರಧಾನಿ ಮೋದಿಯವರು ಈ ಬಾರಿ ಇನ್ನಷ್ಟು ತಂಪಾಗಿರುವ ಪ್ರದೇಶವನ್ನು ಹುಡುಕಿದ್ದಾರೆ. ದುರ್ಯೋಧನ ವೈಶಂಪಾಯನ ಸರೋವರದಲ್ಲಿ ವಿಶ್ರಾಂತಿ ಪಡೆದಂತೆ, ಮುಳುಗಿರುವ ದ್ವಾರಕೆಯ ಪ್ರದೇಶವೆಂದು ನಂಬಲಾಗಿರುವ ಕಡಲ ಭಾಗದಲ್ಲಿ ಪ್ರಧಾನಿ ಮೋದಿ ಸರ್ವ ಭದ್ರತೆಯೊಂದಿಗೆ ಕೆಲ ಹೊತ್ತು ಧ್ಯಾನಸ್ಥರಾದ ಪ್ರಹಸನವನ್ನು ನಡೆಸಿದರು. ದೇಶ ಇದೇ ಗತಿಯಲ್ಲಿ ಮುಂದೆ ಹೋದರೆ, ಮುಂದಿನ ಚುನಾವಣೆಯ ಹೊತ್ತಿಗೆ ಮುಳುಗಿದ ಭಾರತದ ಪ್ರಜಾಸತ್ತೆಯ ಅವಶೇಷಗಳನ್ನು ಹುಡುಕಲು ಕಡಲಿಗಿಳಿಯಬೇಕಾಗುವ ಸ್ಥಿತಿ ನಿರ್ಮಾಣವಾಗಬಹುದು ಎಂದು ರಾಜಕೀಯ ತಜ್ಞರು ಈ ಪ್ರಹಸನವನ್ನು ವಿಶ್ಲೇಷಿಸಿದ್ದಾರೆ. ನೀರಿನೊಳಗೆ ಮುಳುಗಿ ಅದೇನೂ ಹೊಲಸು ಮಾಡಿದರೂ, ಮೇಲೆ ಬರಲೇ ಬೇಕು ಎನ್ನುವಂತೆ, ಇದೀಗ ಚುನಾವಣಾ ಬಾಂಡ್ ಹೆಸರಿನಲ್ಲಿ ಮಾಡಿದ ಅಕ್ರಮಗಳು ಒಂದೊಂದಾಗಿ ಮೇಲೆ ಬರುತ್ತಿವೆ. ಈ ಅಕ್ರಮಗಳ ಹೊಲಸುಗಳ ಜೊತೆ ಜೊತೆಗೇ ಚುನಾವಣಾ ದಿನಾಂಕ ಪ್ರಕಟವಾಗಿದೆ. ಈ ಬಾರಿಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಚುನಾವಣಾ ಬಾಂಡ್ ಅಕ್ರಮಗಳು ಪ್ರಧಾನಿ ಮೋದಿಗೆ ಮುಜುಗರ ಸೃಷ್ಟಿಸುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆಯನ್ನು ‘ಪ್ರಜಾಸತ್ತೆಯ ಹಬ್ಬ’ ಎಂದು ಕರೆಯಲಾಗುತ್ತದೆ. ಈ ಹಬ್ಬಕ್ಕೆ ರಾಜಕೀಯ ಪಕ್ಷಗಳು ನೂರಾರು ಕೋಟಿ ರೂಪಾಯಿಗಳನ್ನು ಚೆಲ್ಲುತ್ತವೆ. ಹಣ ಸೋಲುಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುವುದು ನಿಜವೇ ಆದರೆ ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಎನ್ನುವುದನ್ನು ಯಾರು ಹೆಚ್ಚು ಚುನಾವಣಾ ಬಾಂಡ್ ಮೂಲಕ ದೇಣಿಗೆಗಳನ್ನು ಸ್ವೀಕರಿಸಿದ್ದಾರೆ ಎನ್ನುವುದೇ ನಿರ್ಧರಿಸುತ್ತದೆ ಎಂದು ಪ್ರಾಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅತಿ ಹೆಚ್ಚು ಹಣವನ್ನು ಯಾರು ಯಾವ ಪಕ್ಷದ ಮೇಲೆ ಹೂಡಿಕೆ ಮಾಡುತ್ತಾರೆಯೋ ಅವರು ಆ ಪಕ್ಷವನ್ನು ಅಧಿಕಾರಕ್ಕೇರಿಸಲು ಸರ್ವ ಪ್ರಯತ್ನ ನಡೆಸುತ್ತಾರೆ. ಹಾಕಿದ ಬಂಡವಾಳ ಲಾಭದಾಯಕವಾಗಿ ಮರಳಬೇಕಾದರೆ ತಾವು ಹೂಡಿಕೆ ಮಾಡಿದ ಪಕ್ಷ ಸರಕಾರ ರಚಿಸುವುದು ಅನಿವಾರ್ಯ. ಇದೇ ಸಂದರ್ಭದಲ್ಲಿ ಮತದಾರರನ್ನು, ಮತಗಟ್ಟೆಗಳನ್ನು ಕೊಂಡುಕೊಳ್ಳಲು, ಗೆದ್ದ ಸಂಸದರನ್ನು ಖರೀದಿಸಲು, ಅಧಿಕಾರಿಗಳಿಗೆ, ತಳಸ್ತರದ ನಾಯಕರಿಗೆ, ಕಾರ್ಯಕರ್ತರಿಗೆ ಸುರಿಯಲು ಹಣದ ಅಗತ್ಯವಂತೂ ಇದ್ದೇ ಇದೆ. ತಳಮಟ್ಟದ ಬೂತ್‌ಗಳಿಗೆ ಅತಿ ಶೀಘ್ರ ಹಣವನ್ನು ರವಾನಿಸುವ ಪಕ್ಷ ಗೆದ್ದು ಬರುವ ಸಾಧ್ಯತೆ ಹೆಚ್ಚು. ಇದರ ಜೊತೆ ಜೊತೆಗೆ ಧರ್ಮ, ಜಾತಿ ಇತ್ಯಾದಿಗಳು ಈ ಹಬ್ಬದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಅಕ್ರಮಗಳು, ಹಿಂಸಾಚಾರ, ದ್ವೇಷ ಭಾಷಣ, ಮದ್ಯ ಪೂರೈಕೆ ಇವೆಲ್ಲವೂ ಪ್ರಜಾಸತ್ತೆಯ ಹಬ್ಬದ ಸಂಭ್ರಮಕ್ಕೆ ಕಳೆ ಕೊಡುವ ಇನ್ನಿತರ ಪಟಾಕಿಗಳು. ಈ ಎಲ್ಲ ಪಟಾಕಿಗಳ ಜೊತೆಗೆ ರಾಜಕೀಯ ಪಕ್ಷಗಳು ಹಬ್ಬ ಆಚರಿಸಲು ಸಿದ್ಧವಾಗುತ್ತಿವೆ.
ಪ್ರಜಾಸತ್ತೆಯ ಹಬ್ಬವನ್ನು ಈ ಬಾರಿ ಸುದೀರ್ಘವಾಗಿ ಆಚರಿಸುವ ಭಾಗ್ಯವನ್ನು ಚುನಾವಣಾ ಆಯೋಗ ಜನಸಾಮಾನ್ಯರಿಗೆ ನೀಡಿದೆ. ಎಪ್ರಿಲ್ 19ರಿಂದ ಆರಂಭವಾಗುವ ಮತದಾನ ಏಳು ಹಂತಗಳಲ್ಲಿ ಅಂದರೆ ಜೂನ್ 1ರಂದು ಮುಗಿಯಲಿದೆ. ಜೂ. 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ಅವಧಿ ದೀರ್ಘವಾದಷ್ಟೂ ಅದರ ಖರ್ಚು ವೆಚ್ಚ ಹೆಚ್ಚಾಗುತ್ತವೆ ಎನ್ನುವುದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಅಧಿಕಾರಾವಧಿಯಲ್ಲಿ ತಾವು ಮಾಡಿದ ಅಕ್ರಮ, ಭ್ರಷ್ಚಾಚಾರಗಳನ್ನು ಮುಚ್ಚಿ ಹಾಕಿ, ಜನರನ್ನು ಗೊಂದಲಗೊಳಿಸಲು ಚುನಾವಣಾ ಆಯೋಗ ಈ ಮೂಲಕ ರಾಜಕಾರಣಿಗಳಿಗೆ ಬಹಳಷ್ಟು ಸಮಯಾವಕಾಶವನ್ನು ನೀಡಿದಂತಾಗಿದೆ. ಮತ ಪತ್ರಗಳ ಕಾಲದಲ್ಲಿ ಚುನಾವಣೆಗಳು ಒಂದೂವರೆ, ಎರಡು ತಿಂಗಳ ಕಾಲ ನಡೆಯುವುದು ಅನಿವಾರ್ಯವಾಗಿತ್ತು. ಆದರೆ ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದಿರುವಾಗಲೂ, ಸುಮಾರು ಒಂದೂವರೆ ತಿಂಗಳನ್ನು ಚುನಾವಣೆಗಾಗಿ ಮೀಸಲಿಡುವ ಅಗತ್ಯವಿದೆಯೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
‘ಇವಿಎಂ ಬೇಡ, ಮತ ಪತ್ರದ ಮೂಲಕ ಚುನಾವಣೆ ನಡೆಸಿ’ ಎಂದು ಕೆಲವು ಪಕ್ಷಗಳು ಒತ್ತಾಯಿಸಿದಾಗ ಇವಿಎಂನ್ನು ಸಮರ್ಥಿಸಲು ಆಯೋಗ ‘ಚುನಾವಣೆ ಪ್ರಕ್ರಿಯೆಯ ನಿಧಾನಗತಿ’ಯನ್ನು ಮುಂದಿಟ್ಟಿತ್ತು. ಇದೀಗ ಇವಿಎಂನ್ನು ಬಳಸಿಕೊಂಡೂ ಚುನಾವಣಾ ಪ್ರಕ್ರಿಯೆಗೆ ಸುಮಾರು ಒಂದೂವರೆ ತಿಂಗಳು ಬೇಕಾಗುತ್ತದೆ. ಅಷ್ಟೇ ಅಲ್ಲ , ಎಪ್ರಿಲ್ ತಿಂಗಳಲ್ಲಿ ನಡೆದ ಮತದಾನದ ಫಲಿತಾಂಶವನ್ನು ಸುಮಾರು ಒಂದೂವರೆ ತಿಂಗಳ ಕಾಲ ಮುಚ್ಚಿಡುವುದು ಅನಗತ್ಯ ಆತಂಕ, ಅನುಮಾನಗಳಿಗೆ ಕಾರಣವಾಗಬಹುದು. ಇವಿಎಂ ತಿರುಚಲಾಗುತ್ತಿದೆ ಎನ್ನುವ ಆರೋಪಗಳಿಗೆ ಇದರಿಂದ ಪುಷ್ಟಿ ಬಂದಾಗುತ್ತದೆ. ಚುನಾವಣಾ ಆಯೋಗವೇನೋ ‘ಇವಿಎಂ’ ಬಗ್ಗೆ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಆದರೆ ಚುನಾವಣಾ ಆಯೋಗವೇ ತನ್ನ ವಿಶ್ವಾಸವನ್ನು ಕಳೆದುಕೊಂಡಿರುವಾಗ ಅದು ‘ಇವಿಎಂ ಕುರಿತಂತೆ ನೀಡುವ ಹೇಳಿಕೆ’ ವಿಶ್ವಾಸಾರ್ಹತೆಯನ್ನು ಪಡೆಯುವುದು ಹೇಗೆ? ನ್ಯಾಯ ಸಂಕಲ್ಪ ಯಾತ್ರೆಯ ಸಮಾರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ಇವಿಎಂನಿಂದ ಬಿಜೆಪಿ ಬಹುಮತವನ್ನು ಪಡೆಯುತ್ತಿದೆ’ ಎನ್ನುವ ಆರೋಪವನ್ನು ಪುನರುಚ್ಚರಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಕನಿಷ್ಠ ವಿರೋಧ ಪಕ್ಷಗಳು ಇಟ್ಟಿರುವ ಕೆಲವು ಬೇಡಿಕೆಗಳನ್ನಾದರೂ ಈಡೇರಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಅದರಲ್ಲೂ ನೂರು ಶೇಕಡ ವಿವಿಪ್ಯಾಟ್ ಬಳಕೆ ಮತ್ತು ಎಣಿಕೆಯ ಬಗ್ಗೆ ಆಯೋಗ ಕ್ರಮ ತೆಗೆದುಕೊಳ್ಳಬೇಕು.
ಪ್ರಜಾಸತ್ತೆಯ ಹಬ್ಬ ಯಾವ ಕಾರಣಕ್ಕೂ ರಾಜಕೀಯ ಪಕ್ಷಗಳ ಹಬ್ಬವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಮತದಾರರ ಕೈಯಲ್ಲಿದೆ. ರಾಜಕೀಯ ಪಕ್ಷಗಳು ನಡೆಸಿದ ಚುನಾವಣಾ ಪ್ರಚಾರಗಳು, ಅವುಗಳು ಸುರಿಸಿದ ಹಣ, ಸ್ಫೋಟಿಸಿದ ದ್ವೇಷ ಪಟಾಕಿಗಳು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಂತಾಗಬಾರದು. ಸಂಸದರು ತಮ್ಮ ತಮ್ಮ ಕ್ಷೇತ್ರಗಳಿಗೆ, ತಮ್ಮ ರಾಜ್ಯಗಳಿಗೆ ನೀಡಿದ ಕೊಡುಗೆಗಳೆಷ್ಟು ?
ಅಧಿಕಾರಾವಧಿಯಲ್ಲಿ ರಾಜಕಾರಣಿಗಳು ತಮ್ಮ ಕ್ಷೇತ್ರಗಳಿಗೆ ಎಷ್ಟರಮಟ್ಟಿಗೆ ಸ್ಪಂದಿಸಿದ್ದಾರೆ ಎನ್ನುವುದು ಮತದಾನ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸಬೇಕು. ಚುನಾವಣಾ ಬಾಂಡ್‌ನ ಮೂಲಕ ಸಂಗ್ರಹಿಸಿದ ಅಕ್ರಮಹಣವನ್ನು ಬ ಳಸಿಕೊಂಡು ಚುನಾವಣೆ ಗೆಲ್ಲುವುದೆಂದರೆ ಭ್ರಷ್ಟರ ಹಣದ ಬಲದಿಂದ ಅಧಿಕಾರಕ್ಕೇರುವುದು ಎಂದು ಅರ್ಥ? ತಾವು ಗೆದ್ದಿರುವುದು ಮತದಾರರ ಬಲದಿಂದಲ್ಲ, ಭ್ರಷ್ಟರ ಹಣದ ಬಲದಿಂದ ಎಂದು ನಂಬಿ ಅಧಿಕಾರಕ್ಕೇರುವ ರಾಜಕೀಯ ನಾಯಕರು ಸಹಜವಾಗಿಯೇ ಭ್ರಷ್ಟರಿಗಾಗಿ ದೇಶದ ಆರ್ಥಿಕ ನೀತಿಗಳನ್ನು ರೂಪಿಸುತ್ತಾರೆ. ಜನಸಾಮಾನ್ಯರನ್ನು ಸಹಜವಾಗಿಯೇ ನಿರ್ಲಕ್ಷಿಸುತ್ತಾರೆ. ಈ ಕಾರಣದಿಂದ ಚುನಾವಣೆಯಲ್ಲಿ ಮತದಾರನ ಪಾತ್ರ ‘ಒಂದು ದಿನದ ದೊರೆ’ಯ ಪಾತ್ರವಾಗಿ ಮುಗಿಯಬಾರದು. ಅಂದು ಆತ ನೀಡಿದ ಮತವನ್ನು ರಾಜಕಾರಣಿಗಳು ಐದು ವರ್ಷ ನೆನಪಿನಲ್ಲಿಡುವಂತಿರಬೇಕು. ತನ್ನ ಸರಕಾರ ಜನರಿಂದ ಆಯ್ಕೆಯಾಗಿದೆ ಎಂದು ನಂಬಿದ ನಾಯಕ ಮಾತ್ರ ಜನಪರ ಆಡಳಿತವನ್ನು ನೀಡಲು ಸಾಧ್ಯ. ಈ ಬಾರಿಯ ಚುನಾವಣಾ ಹಬ್ಬ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಲಿ ಎನ್ನುವ ಆಶಯದೊಂದಿಗೆ ನಾವು ಮತದಾನಕ್ಕೆ ಸಿದ್ಧರಾಗೋಣ.