ಕುಂಭಮೇಳದಲ್ಲಿ ಗಂಗೆಯ ಕಣ್ಣೀರು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, 50ಕ್ಕೂ ಅಧಿಕಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಸುಮಾರು 144 ವರ್ಷಗಳಿಗೊಮ್ಮೆ ನಡೆಯುವ, ಕೋಟ್ಯಂತರ ಜನರು ಸೇರುವ ಈ ಜಾತ್ರೆಯಲ್ಲಿ ಇಂತಹ ಕಾಲ್ತುಳಿತ ಸಾಮಾನ್ಯ ಎಂದು ದುರಂತವನ್ನು ಸಮರ್ಥಿಸುವ ಕೆಲಸವನ್ನು ಇದರ ಜೊತೆ ಜೊತೆಗೇ ಕೆಲವರು ಮಾಡುತ್ತಿದ್ದಾರೆ. ಮೌನಿ ಅಮಾವಾಸ್ಯೆಯ ದಿನ ಲಕ್ಷಾಂತರ ಮಂದಿ ಯಾತ್ರಿಕರು ಗಂಗಾನದಿಯಲ್ಲಿ ಸ್ನಾನಕ್ಕೆ ನೂಕು ನುಗ್ಗಲು ನಡೆಸಿರುವುದರಿಂದ ಈ ಕಾಲ್ತುಳಿತ ಸಂಭವಿಸಿದೆ. ಮುಂಜಾನೆಯೇ ದುರಂತ ಸಂಭವಿಸಿದ್ದರೂ, ಮಧ್ಯಾಹ್ನದವರೆಗೂ ಸಾವು ನೋವಿನ ಸಂಖ್ಯೆಯನ್ನು ಮುಚ್ಚಿ
ಡುವ ಪ್ರಯತ್ನ ನಡೆಯಿತು. ಆದರೆ ಸಾಲು ಸಾಲಾಗಿ ಬಂದು ಬೀಳುತ್ತಿರುವ ಹೆಣಗಳ ಸಂಖ್ಯೆಯನ್ನು ಮುಚ್ಚಿಡುವುದು ಸ್ಥಳೀಯ ಆಡಳಿತಕ್ಕೆ ಅಷ್ಟು ಸುಲಭವಿರಲಿಲ್ಲ. ಭಕ್ತಿಯ ಘೋಷಗಳು ಕೇಳಬೇಕಾದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಸಾವಿನ ಸಂಖ್ಯೆಯನ್ನು ಗುರುತಿಸಲು ಜಿಲ್ಲಾಡಳಿತ ವಿಫಲವಾಗುತ್ತಿದೆ. ಯಾಕೆಂದರೆ ನೂರಾರು ಹೆಣಗಳು ಗಂಗಾನದಿಯಲ್ಲಿ ತೇಲಿ ಹೋಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಬೃಹತ್ ಸಾಂಸ್ಕೃತಿಕ,ಧಾರ್ಮಿಕ ಸಮಾವೇಶವೆಂದು ಪ್ರಧಾನಿಯಿಂದಲೇ ಬಣ್ಣಿಸಲ್ಪಟ್ಟಿದ್ದ ಕುಂಭಮೇಳ, ಇದೀಗ ಮೃತ್ಯು ಮೇಳವಾಗಿ ಪರಿಣಮಿಸಿದ್ದರ ಹಿಂದೆ ಜಿಲ್ಲಾಡಳಿತದ ವೈಫಲ್ಯಗಳೂ ಇವೆ. ಕೋಟ್ಯಂತರ ಜನರು ಸೇರುವಲ್ಲಿ ಇಂತಹ ದುರಂತಗಳು ಸಾಮಾನ್ಯ ಎಂದು ಸರಕಾರ ಈ ದುರಂತದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದೆಂದರೆ, ದುರಂತದಲ್ಲಿ ತನ್ನ ಪಾತ್ರವನ್ನು ನೇರವಾಗಿಯೇ ಒಪ್ಪಿಕೊಂಡಂತೆ.
ಸಾವು ನೋವುಗಳು ಬೆಳಕಿಗೆ ಬರುತ್ತಿದ್ದಂತೆಯೇ ಸರಕಾರದ ವಿರುದ್ಧ ಟೀಕಾ ಪ್ರಹಾರಗಳಾಗುತ್ತಿವೆ. ಇಂತಹ ದುರಂತವೊಂದು ಸಂಭವಿಸುವ ಸಾಧ್ಯತೆಗಳ ಬಗ್ಗೆ ಅರಿವಿದ್ದು ಅದನ್ನು ತಡೆಯಲು ಸರಕಾರ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸರಕಾರ ಕುಂಭಮೇಳವನ್ನು ತನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲು ತಲೆಕೆಡಿಸಿಕೊಂಡಷ್ಟು ಭಕ್ತರ ಯೋಗಕ್ಷೇಮದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಹಲವು ಸಾಧುಸಂತರು ಕೂಡ ಉತ್ತರ ಪ್ರದೇಶ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ‘‘ಆಡಳಿತವು ವಿಐಪಿಗಳ ಸೇವೆಗೈಯುವುದರಲ್ಲೇ ಮೈಮರೆತಿದೆ. ಕುಂಭಮೇಳದ ನಿರ್ವಹಣೆಯನ್ನು ಸೇನೆಗೆ ಹಸ್ತಾಂತರಿಸಿದ್ದರೆ ಇಷ್ಟು ದೊಡ್ಡ ದುರಂತ ಸಂಭವಿಸಿರುತ್ತಿರಲಿಲ್ಲ’’ ಎಂದು ಮಹಾಮಂಡಲೇಶ್ವರ ಪ್ರೇಮಾನಂದ ಪುರಿ ಆರೋಪಿಸಿದ್ದಾರೆ. ಸರಕಾರದ ವ್ಯವಸ್ಥೆಗಳು ಅರೆಬರೆಯಾಗಿತ್ತು. ಏರ್ಪಡಿಸಿರುವ ಭದ್ರತಾ ಸಿಬ್ಬಂದಿ ನೆರೆದಿರುವ ಜನಸ್ತೋಮವನ್ನು ನಿಯಂತ್ರಿಸುವಷ್ಟು ಶಕ್ತಿಯನ್ನು ಹೊಂದಿರದೇ ಇರುವುದು ಈ ಕಾಲ್ತುಳಿತಕ್ಕೆ ಕಾರಣ ಎಂದು ಹಲವು ರಾಜಕೀಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ನೆರೆದಿರುವ ಜನರ ಅಶಿಸ್ತು, ಭಕ್ತಿಯ ಆವೇಶ, ಆಧ್ಯಾತ್ಮಿಕತೆಯ ಕೊರತೆ ಎಲ್ಲವೂ ಅಂತಿಮವಾಗಿ ಒಂದು ಮಹಾ ದುರಂತಕ್ಕೆ ಕಾರಣವಾಯಿತು.
ಇದು 144 ವರ್ಷಗಳಿಗೊಮ್ಮೆ ಬಂದು ಹೋಗುವ ಕುಂಭಮೇಳ ಎಂದು ಮಾಧ್ಯಮಗಳು ವರ್ಣಿಸಿವೆ. ಆದರೆ ಮುಂದಿನ 144 ವರ್ಷಗಳಿಗೆ ಈ ಮೇಳ ಉಳಿಸಿ ಹೋದದ್ದಾದರೂ ಏನು?ಎಂದು ಜನರು ತಮಗೆ ತಾವೇ ಪ್ರಶ್ನಿಸುವಂತಾಗಿದೆ. ಗಂಗಾನದಿಗೆ ಹೆಣಗಳು ಅಪರಿಚಿತವಲ್ಲ. ಭಕ್ತರು ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ ಬಳಿಕ ಮೃತರಿಗೆ ಸದ್ಗತಿಯನ್ನು ಕರುಣಿಸುವ ಭರದಲ್ಲಿ ಉಳಿದ ಅವಶೇಷಗಳನ್ನು ಗಂಗಾನದಿಗೆ ಎಸೆಯುವ ಸಂಪ್ರದಾಯವಿತ್ತು. ಈ ಪ್ರವೃತ್ತಿಯ ಬಗ್ಗೆ ಪರಿಸರವಾದಿಗಳು, ಗಂಗಾನದಿಯ ನಿಜವಾದ ಭಕ್ತರು, ಹಿತೈಷಿಗಳು ಆಕ್ರೋಶ, ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗಂಗಾನದಿಯ ನೀರು ಕುಡಿಯುವುದಕ್ಕೆ ಅಯೋಗ್ಯವಾಗುವುದಕ್ಕೆ ಭಕ್ತರ ಈ ಕೃತ್ಯವೂ ಮುಖ್ಯ ಕಾರಣ. ಸಾವಿರಾರು ಕೋಟಿ ರೂಪಾಯಿಯಲ್ಲಿ ಗಂಗಾನದಿಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಮನುಷ್ಯನ ಸಾವಿರಾರು ಅಸ್ಥಿ ಪಂಜರಗಳು, ತಲೆಬುರುಡೆಗಳು ಈ ಗಂಗಾನದಿಯಲ್ಲಿ ಪತ್ತೆಯಾಗಿದ್ದವು. ಗಂಗೆ ಮತ್ತು ಅದರ ಉಪನದಿಗಳ ಶುಚೀಕರಣಕ್ಕಾಗಿ ಸುಮಾರು 32,000 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿದೆಯಾದರೂ, ಅದರಲ್ಲಿ ಸರಕಾರ ಪೂರ್ಣವಾಗಿ ಯಶಸ್ವಿಯಾಗಿಲ್ಲ. ಕೊರೋನ ಕಾಲದಲ್ಲಿ ಗಂಗಾನದಿಯಲ್ಲಿ ಮತ್ತೆ ಹೆಣಗಳು ತೇಲ ತೊಡಗಿದವು. ಗಂಗೆಯ ತಟದಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ನಾಯಿ, ನರಿಗಳು ಎಳೆದು ತಿನ್ನುತ್ತಿರುವುದು ಪತ್ರಿಕೆಗಳಲ್ಲಿ ಸುದ್ದಿಯಾದವು. ಇದೀಗ 144 ವರ್ಷಗಳ ಬಳಿಕ ಆಗಮಿಸಿರುವ ಕುಂಭಮೇಳ ಗಂಗಾ ನದಿಯ ಪಾವಿತ್ರ್ಯತೆಗೆ ಶುಚಿತ್ವಕ್ಕೆ ನೀಡಿದ ಕೊಡುಗೆಗಳೇನು ಎಂದು ಕೇಳಿದರೆ ವಿಷಾದವೇ ಉತ್ತರವಾಗುತ್ತದೆ. ಗಂಗೆಯಲ್ಲಿ ಮುಳುಗೆದ್ದರೆ ಪಾಪಗಳು ತೊಳೆದುಹೋಗುತ್ತವೆ ಎನ್ನುವುದು ಭಕ್ತರ ನಂಬಿಕೆ. ಹಾಗೆಂದು, ತಾವು ಪಾಪಗಳಿಂದ ಮುಕ್ತವಾಗುವ ಭರದಲ್ಲಿ ಗಂಗೆಯನ್ನು ಕುಲಗೆಡಿಸಬಾರದು ಎನ್ನುವ ಅರಿವು, ವಿವೇಕ ಕೂಡ ನಮಗಿರಬೇಕಾಗುತ್ತದೆ. ಆದರೆ ಕಳೆದ ಎರಡು ವಾರಗಳಿಂದ ಗಂಗಾನದಿಯ ತಟದಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ಈ ಮೇಳದ ಅವಧಿಯಲ್ಲಿ ಮಾಲಿನ್ಯಗೊಂಡ ಗಂಗೆಯನ್ನು ಶುಚಿಗೊಳಿಸಲು 144 ವರ್ಷಗಳು ಬೇಕಾದೀತೇನೋ!
ಕುಂಭಮೇಳ ಈ ದೇಶದ ಆಧ್ಯಾತ್ಮಿಕತೆಯನ್ನು ಎತ್ತಿ ಹಿಡಿಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ಆಧ್ಯಾತ್ಮಿಕತೆಯ ಹೆಸರಿನಲ್ಲಿಯೇ ಋಣಾತ್ಮಕವಾದ ಅಂಶಗಳನ್ನೂ ಈ ಮೇಳ ವಿಶ್ವದ ಮುಂದಿಟ್ಟಿದೆ. ಅವುಗಳನ್ನು ನೋಡಿ ‘‘ಇದೇನಾ ಭಾರತವೆಂದರೆ?’’ ಎಂದು ವಿಶ್ವ ಆಘಾತ ವ್ಯಕ್ತಪಡಿಸುತ್ತಿದೆ. ವರ್ಷಗಳ ಕಾಲ ಸ್ನಾನವನ್ನೇ ಮಾಡದಿರುವುದು, ಹೆಣ ತಿನ್ನುವುದು, ಶವಸಂಭೋಗಿಸುವುದು... ಇವೆಲ್ಲವನ್ನೂ ಅಧ್ಯಾತ್ಮಗಳ ಭಾಗವಾಗಿ ಬಿಂಬಿಸುವ ಪ್ರಯತ್ನವೂ ಈ ಮೇಳದಲ್ಲಿ ನಡೆದಿದೆ. ನಿಜವಾದ ಸಾಧುಗಳ ನಡುವೆ ಕಪಟ ಸಾಧುಗಳೂ ಮಿಂಚಿದ್ದಾರೆ. ಕೆಲವು ನಕಲಿ ಸಾಧುಗಳು ಬೆತ್ತಲೆಯನ್ನು ವೈರಾಗ್ಯದ ರೂಪದಲ್ಲಿ ಮುಂದಿಡದೆ ವಿಕೃತವಾಗಿ ಪ್ರತಿನಿಧಿಸಿದ್ದಾರೆ. ಕುಂಭಮೇಳದಿಂದ ಭಾರತಕ್ಕೆ ಆಧ್ಯಾತ್ಮಿಕವಾಗಿ ಎಷ್ಟರಮಟ್ಟಿಗೆ ಲಾಭವಾಗಿದೆಯೋ, ಕೆಲವು ನಕಲಿಗಳಿಂದ ನಷ್ಟವೂ ಆಗಿದೆ. ಇವುಗಳ ನಡುವೆಯೇ ಇದೀಗ ಸಂಭವಿಸಿರುವ ಕಾಲ್ತುಳಿತ ದುರಂತ ಕುಂಭಮೇಳದ ವರ್ಚಸ್ಸಿಗೆ ಇನ್ನಷ್ಟು ಧಕ್ಕೆ ತಂದಿದೆ. ಕುಂಭಮೇಳ ಫೆಬ್ರವರಿ 26ರ ಹೊತ್ತಿಗೆ ಮುಗಿಯುತ್ತದೆ. ಆದರೆ ಈ ಮೇಳ ಉಳಿಸಿ ಹೋಗುವ ಒಳಿತುಗಳನ್ನು, ಕೆಡುಕುಗಳನ್ನು ಅನುಭವಿಸಬೇಕಾದವರು ನಾವೇ ಎನ್ನುವುದನ್ನು ಮಾತ್ರ ಈ ಸಂದರ್ಭದಲ್ಲಿ ಮರೆಯಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಕುಂಭಮೇಳದ ಸಂದರ್ಭದಲ್ಲಿ ಮಾಲಿನ್ಯ ಗೊಂಡಿರುವ ನದಿ ಮತ್ತು ಅದರ ಪರಿಸರವನ್ನು ಶುಚಿಗೊಳಿಸುವ ದೊಡ್ಡ ಹೊಣೆಗಾರಿಕೆ ಸರಕಾರದ ಮುಂದಿದೆ. ಗಂಗಾನದಿಯನ್ನು ಶುಚಿಗೊಳಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ ಬಳಿಕ ನದಿ ಇನ್ನಷ್ಟು ಮಾಲಿನ್ಯಗೊಳ್ಳುವುದನ್ನು ತಡೆಯಲು ಸರಕಾರ ಹಲವು ಕಾನೂನುಗಳನ್ನು ಜಾರಿಗೊಳಿಸಿತ್ತು. ನದಿಗೆ ಉಗುಳಿದರೂ ದಂಡ ಎನ್ನುವ ನಿಯಮಗಳನ್ನು ತಂದಿತ್ತು. ಆದರೆ ಈ ಕುಂಭಮೇಳದಲ್ಲಿ ನದಿ ರಕ್ಷಣೆಗೆ ಸಂಬಂಧಿಸಿದ ಸರಕಾರದ ಎಲ್ಲ ನಿಯಮ, ಕಾನೂನುಗಳು ಕಾಲ್ತುಳಿತಕ್ಕೊಳಗಾಗಿವೆ. ಅರೆಜೀವವಾಗಿರುವ ಆ ಕಾನೂನನ್ನು ಐಸಿಯುವಿಗೆ ಸೇರಿಸಿ, ಅದಕ್ಕೂ ಮರುಜೀವಕೊಡುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ. ಮುಂದಿನ ಬಾರಿಗೆ ಕುಂಭಮೇಳ ಪೂರ್ಣ ಪ್ರಮಾಣದಲ್ಲಿ ಭಾರತದ ನಿಜವಾದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪ್ರತಿನಿಧಿಸುವಂತಾಗಲು ಈ ಬಾರಿಯ ತಪ್ಪುಗಳು ಸರಕಾರಕ್ಕೆ ಪಾಠವಾಗಲಿ. ಗಂಗಾ ನದಿಯ ಸ್ನಾನದಿಂದ ನಾವೇನೋ ನಮ್ಮ ಪಾಪಗಳನ್ನು ತೊಳೆದುಕೊಂಡೆವು. ಆದರೆ ನಾವು ಉಳಿಸಿ ಹೋದ ಮಾಲಿನ್ಯವನ್ನು ಕಳೆಯುವುದು ಅವಳ ಪಾಲಿಗೆ ಅಷ್ಟು ಸುಲಭದ ಮಾತಲ್ಲ. ಅದರಲ್ಲಿ ಆಕೆಯೂ ಯಶಸ್ವಿಯಾಗಲಿ ಎಂದು ಹಾರೈಸೋಣ.