ಕೇಂದ್ರ ಬಜೆಟ್‌ಗೆ ಭಾರವಾದ ದಲಿತರು

Update: 2025-02-17 08:30 IST
ಕೇಂದ್ರ ಬಜೆಟ್‌ಗೆ ಭಾರವಾದ ದಲಿತರು
  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಂಪಾದಕೀಯ | ಕೇಂದ್ರ ಬಜೆಟ್‌ಗೆ ಭಾರವಾದ ದಲಿತರು

ಸಂಪಾದಕೀಯ | ಕೇಂದ್ರ ಬಜೆಟ್‌ಗೆ ಭಾರವಾದ ದಲಿತರು

Full View

‘‘ದೇಶವೆಂದರೆ ಅದರ ಮಣ್ಣು ಮಾತ್ರವಲ್ಲ, ದೇಶವೆಂದರೆ ಅದರ ಜನರು’’ ಎಂದು ಖ್ಯಾತ ತೆಲುಗು ಕವಿ ಗುರಜದ ಅಪ್ಪಾ ರಾವ್ ಅವರ ಪ್ರಸಿದ್ಧ ಸಾಲಿನೊಂದಿಗೆ ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನ್ನು ಮಂಡಿಸಿದ್ದರು. ದೇಶ ಕಟ್ಟುವುದೆಂದರೆ, ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುವುದು ಎಂಬ ಬಿಜೆಪಿಯ ರಾಷ್ಟ್ರೀಯವಾದಕ್ಕೆ ವ್ಯತಿರಿಕ್ತವಾಗಿ ವಿತ್ತ ಸಚಿವೆಯ ಬಾಯಿಯಿಂದ ಉದುರಿದ ಕವಿತೆಯ ಸಾಲು ಜನತೆಗೆ ಅನಿರೀಕ್ಷಿತವಾಗಿತ್ತು. ದೇಶ ಕಟ್ಟುವುದಕ್ಕೂ ಜನಸಾಮಾನ್ಯರ ಬದುಕಿಗೂ ಸಂಬಂಧವೇ ಇಲ್ಲ ಎನ್ನುವಂತಹ ಆರ್ಥಿಕ ನೀತಿಗಳಿಂದ ಸುಸ್ತು ಹೊಡೆದಿದ್ದ ಜನರು, ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ, ದೇಶವಂದರೆ ಬರೀ ಗಡಿಗಳಲ್ಲ, ಅಲ್ಲಿ ಮನುಷ್ಯರಿಗೂ ಪಾಲಿದೆ ಎನ್ನುವುದನ್ನು ಬಾಯಿ ಮಾತಿಗಾದರೂ ಪ್ರಧಾನಿ ಮೋದಿ ಒಪ್ಪಿಕೊಂಡರಲ್ಲ ಎಂದು ಜನರು ಸಂತೃಪ್ತಿಪಟ್ಟುಕೊಂಡರು. ಪದ್ಯದ ಸಾಲಿಗೆ ತಾಳ ಕುಟ್ಟುವಂತೆ, ದೇಶದಲ್ಲಿ ಬಡತನ ಶೂನ್ಯವಾಗಿಸುವುದು, 100 ಶೇ. ಗುಣಮಟ್ಟದ ಶಾಲಾ ಶಿಕ್ಷಣ, ಉತ್ತಮ ಗುಣಮಟ್ಟದ ಹಾಗೂ ಮಿತದರದ ಸಮಗ್ರ ಆರೋಗ್ಯ ಸೇವೆ, ಕುಶಲ ಕೆಲಸಗಾರರಿಗೆ 100 ಶೇಕಡ ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ 70 ಶೇಕಡ ಮಹಿಳೆಯರು ಪಾಲ್ಗೊಳ್ಳುವಂತೆ ಮಾಡುವುದು, ರೈತರ ಸಮೃದ್ಧಿಯನ್ನು ಖಾತರಿಪಡಿಸುವುದು ತನ್ನ ಬಜೆಟ್‌ನ ಉದ್ದೇಶವಾಗಿದೆ ಎಂದೂ ಸಚಿವೆ ವಿವರಿಸಿದರು.

ಕೇಂದ್ರ ಸರಕಾರದ ತೆರಿಗೆ ಭಯೋತ್ಪಾದನೆಯಿಂದ ತತ್ತರಿಸಿದ ಜನರ ಪಾಲಿಗೆ ತೆರಿಗೆಯ ವಿನಾಯಿತಿ ಬಹುದೊಡ್ಡ ಕೊಡುಗೆ ಎಂಬಂತೆ ವಿತ್ತಸಚಿವರು ಬಣ್ಣಿಸಿದರು. ಸರಕಾರ ಮೊಣಕೈಗೆ ಹಚ್ಚಿದ ಬೆಣ್ಣೆಯನ್ನು ಯಾವ ರೀತಿ ಚಪ್ಪರಿಸಬೇಕು ಎನ್ನುವುದನ್ನರಿಯದೆ ಈ ದೇಶದ ಮಧ್ಯಮ ವರ್ಗ ಇನ್ನೂ ನಾಲಗೆ ಹೊರಳಿಸುತ್ತಲೇ ಇದೆ. ಬೆಲ್ಲವಿನ್ನೂ ಅವರ ನಾಲಗೆಗೆ ಎಟಕಿಲ್ಲ. ಇದೇ ಹೊತ್ತಿಗೆ ಈ ದೇಶದ ದೊಡ್ಡ ಸಂಖ್ಯೆಯ ದಲಿತರು ನೇರ ತೆರಿಗೆಯ ವ್ಯಾಪ್ತಿಗೆ ಬರದವರು ಇನ್ನೂ ದೇಶದ ಅಭಿವೃದ್ಧಿಯ ಕಲ್ಪನೆಯಿಂದ ಸಂಪೂರ್ಣ ಹೊರಗಿದ್ದಾರೆ. ಈ ಬಜೆಟ್‌ನಲ್ಲಿ ಇವರ ಸ್ಥಾನ ಎಲ್ಲಿದೆ ಎಂದು ಯೋಚಿಸಿದರೆ, ಅಪ್ಪಾರಾವ್ ಕವಿತೆಯನ್ನು ವಿತ್ತ ಸಚಿವೆ ಯಾಕೆ ಉಲ್ಲೇಖಿಸಿದರು ಎನ್ನುವುದು ಅರ್ಥವಾಗಿಡುತ್ತದೆ. ಇಡೀ ಬಜೆಟ್‌ನ್ನು ಅವಲೋಕಿಸಿದಾಗ ದಲಿತರು ಈ ದೇಶಕ್ಕೆ ಸಂಬಂಧಪಟ್ಟ ಜನರು ಅಲ್ಲವೇನೋ ಎನ್ನುವ ಅನುಮಾನ ಹುಟ್ಟಿ ಬಿಡುತ್ತದೆ.

2011ರ ಜನಗಣತಿಯ ಪ್ರಕಾರ, ದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಗಳ ಜನಸಂಖ್ಯೆ 16.6 ಶೇ. ಅವರ ಪೈಕಿ ಹೆಚ್ಚಿನವರು ಅತಿ ಬಡವರು. ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣ ಯೋಜನೆಗಳಿಗೆ ಅನುದಾನ ನೀಡುವಂತೆ ಸಮುದಾಯದ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಸಂಘಟನೆಗಳು ಒತ್ತಾಯಿಸುತ್ತಲೇ ಬರುತ್ತಿವೆ. ಆದರೆ, ಈ ಬೇಡಿಕೆಯನ್ನು ಈ ಬಜೆಟ್‌ನಲ್ಲೂ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಬಜೆಟ್‌ನ ಕೇವಲ 3.4 ಶೇ. ಅನುದಾನವನ್ನು ಮಾತ್ರ ಅವರಿಗೆ ನೀಡಲಾಗಿದೆ. ಇದರಲ್ಲೂ, ಹೆಚ್ಚಿನ ಹಣವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ. ಅಂದರೆ ಈ ದೇಶ ಎಂದರೆ ಯಾರು ಎನ್ನುವುದನ್ನು ಈ ಮೂಲಕ ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ಪರಿಶಿಷ್ಟ ಜಾತಿಗಳ ಜನರ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಬೇಕೆಂಬ ಪ್ರಸ್ತಾವವನ್ನು ಪೂನಾ ಒಪ್ಪಂದದಲ್ಲೇ ಸೇರಿಸಲಾಗಿತ್ತು. ವಂಚಿತ ವಿಭಾಗಗಳಿಗೆ ಉತ್ತಮ ಅವಕಾಶಗಳನ್ನು ನೀಡುವ ಮೂಲಕ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂಬುದಾಗಿ ಡಾ. ಬೀಮರಾವ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. 2017ರಲ್ಲಿ, ಮೋದಿ ಸರಕಾರವು ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಯೋಜನೆಗಳ ಹೆಸರನ್ನು ‘ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮ’ ಎಂಬುದಾಗಿ ಬದಲಾಯಿಸಿತು. ಪರಿಶಿಷ್ಟ ಜಾತಿಗಳ ಜನರ ಸಾಮಾಜಿಕ ಸಬಲೀಕರಣ, ಶೈಕ್ಷಣಿಕ ಪ್ರಗತಿ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಅವರ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶ ಎಂಬುದಾಗಿ ಘೋಷಿಸಲಾಯಿತು. ಅವರ ಆದಾಯ ಹೆಚ್ಚಿಸುವ ಯೋಜನೆಗಳು, ಕೌಶಲ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟವಾಗಿ ಹೇಳಲಾಗಿತ್ತು. ಕೌಶಲ ಅಭಿವೃದ್ಧಿಗೆ ಉಪ ಯೋಜನೆ ಬಜೆಟ್‌ನ 10 ಶೇ. ದಷ್ಟನ್ನು ಖರ್ಚು ಮಾಡುವುದು ಕಡ್ಡಾಯ ಎಂಬುದಾಗಿಯೂ ಹೇಳಲಾಗಿತ್ತು.

2025-26ರ ಸಾಲಿನ ಬಜೆಟ್ ಗಮನಿಸಿದರೆ, ಪರಿಶಿಷ್ಟ ಜಾತಿಗಳಿಗೆ 1,68,478.38 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದು ಕಳೆದ ವರ್ಷದ ಅನುದಾನ 1,65,500.05 ಕೋಟಿ ರೂ.ಗಿಂತ ಕೊಂಚ ಹೆಚ್ಚಾಗಿದೆ. 5 ಶೇ. ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ವಾಸ್ತವಿಕವಾಗಿ ಅನುದಾನದಲ್ಲಿ ಕಡಿತವಾಗಿದೆ. ಇನ್ನೊಂದು ಮುಖ್ಯ ವಿಷಯವೂ ಇದೆ. ಕಳೆದ ಹಣಕಾಸು ವರ್ಷದಲ್ಲಿ ಒದಗಿಸಲಾಗಿದ್ದ ಅನುದಾನದ ಪೈಕಿ ಕೇವಲ 1,38,362.52 ಕೋಟಿ ರೂ. ಮೊತ್ತವನ್ನು ಮಾತ್ರ ಖರ್ಚು ಮಾಡಲಾಗಿದೆ.

ಭಾರತವನ್ನು ಕುಶಲ ಉದ್ಯೋಗಿಗಳ ದೊಡ್ಡ ಮಾರುಕಟ್ಟೆಯನ್ನಾಗಿ ಮಾಡಲಾಗುವುದು ಮತ್ತು ಕುಶಲ ಉದ್ಯೋಗಿಗಳನ್ನು ವಿದೇಶಗಳಿಗೆ ಪೂರೈಸಲಾಗುವುದು ಎಂಬುದಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಜೆಟ್‌ಗೆ ಮೊದಲು ಘೋಷಿಸಿದ್ದರು. ಆದರೆ, ಕೌಶಲ ಅಭಿವೃದ್ಧಿಯ ಪ್ರಮುಖ ಸಂಸ್ಥೆಗಳ ಪರಿಶಿಷ್ಟ ಜಾತಿ ಉಪ ಯೋಜನೆ ಬಜೆಟ್‌ನತ್ತ ನೋಡಿದರೆ ನಿರಾಶೆಯಾಗುತ್ತದೆ. ಐಐಟಿಯಂಥ ಖ್ಯಾತ ಸಂಸ್ಥೆಗಳ ಪರಿಶಿಷ್ಟ ಜಾತಿ ಬಜೆಟ್‌ಗೆ ಕಳೆದ ವರ್ಷ 631.60 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ ಆ ಮೊತ್ತವನ್ನು ಕೇವಲ 50 ಕೋಟಿ ರೂ.ಯಷ್ಟು ಹೆಚ್ಚಿಸಲಾಗಿದೆ.ಐಐಟಿ ಹೈದರಾಬಾದ್‌ನಲ್ಲಿ 2023-24ರಲ್ಲಿ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗಾಗಿ 48.54 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈ ಬಾರಿ ಅದಕ್ಕೆ ಯಾವುದೇ ಅನುದಾನ ಒದಗಿಸಲಾಗಿಲ್ಲ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಂಥ ಮಹತ್ವದ ಸಂಸ್ಥೆಗೆ 2023-24ರಲ್ಲಿ 20.63 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ ಅನುದಾನವನ್ನು 15.44 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಕಳೆದ ವರ್ಷ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ಗೆ

ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗಾಗಿ ಖರ್ಚು ಮಾಡಲು 103.79 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ ಅದನ್ನು 94.73 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಕ್ಕೆ ಉತ್ತೇಜನ ನೀಡುವ ಯೋಜನೆಗಾಗಿನ ಬಜೆಟ್ ಅನುದಾನವನ್ನು 18 ಕೋಟಿ ರೂ. ಯಿಂದ 9 ಕೋಟಿ ರೂ.ಗೆ ಇಳಿಸಲಾಗಿದೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಜೆಟನ್ನು ಕಳೆದ ವರ್ಷ ಇದ್ದ 456.45 ಕೋಟಿ ರೂ.ಯಿಂದ ಈ ಬಾರಿ 398.12 ಕೋಟಿ ರೂ.ಗೆ ಇಳಿಸಲಾಗಿದೆ.

ಇದು ಕೃತಕ ಬುದ್ಧಿಮತ್ತೆ (ಎಐ)ಯ ಯುಗ. ಕೇಂದ್ರ ಸರಕಾರವು ಕಳೆದ ವರ್ಷ ಪರಿಶಿಷ್ಟ ಜಾತಿಗಳ ಕೃತಕ ಬುದ್ಧಿಮತ್ತೆ ಕೇಂದ್ರಗಳಿಗಾಗಿ 42 ಕೋಟಿ ರೂ. ಒದಗಿಸಿತ್ತು. ಈ ಬಾರಿ ಅದನ್ನು 32.94 ಕೋಟಿ ರೂ.ಗೆ ಇಳಿಸಲಾಗಿದೆ. ಕೌಶಲ ಭಾರತ ಕಾರ್ಯಕ್ರಮಕ್ಕೆ ಕಳೆದ ವರ್ಷ ಒದಗಿಸಲಾದ ಹಣದ ಪೈಕಿ 384.69 ಕೋಟಿ ರೂ. ಮೊತ್ತವನ್ನು ಮಾತ್ರ ಖರ್ಚು ಮಾಡಲಾಗಿದೆ. ಈ ಬಾರಿ ಅನುದಾನವನ್ನು 15 ಕೋಟಿ ರೂ.ಯಷ್ಟು ಕಡಿತ ಮಾಡಲಾಗಿದೆ. ಈ ಬಾರಿ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ 853.68 ಕೋಟಿ ರೂ. ಮೊತ್ತವನ್ನು ಮೀಸಲಿಡಲಾಗಿದೆ. ಕಳೆದ ವರ್ಷ ಇದಕ್ಕಾಗಿ 612.65 ಕೋಟಿ ರೂ. ಒದಗಿಸಲಾಗಿತ್ತಾದರೂ, ಕೇವಲ 477.94 ಕೋಟಿ ರೂ. ಖರ್ಚು ಮಾಡಲಾಗಿತ್ತು.ಪರಿಶಿಷ್ಟ ಜಾತಿಗಳ ಶಿಕ್ಷಣಕ್ಕಾಗಿ ಕಳೆದ ವರ್ಷ ಬಜೆಟ್‌ನಲ್ಲಿ 18,436.16 ಕೋಟಿ ರೂ. ಒದಗಿಸಲಾಗಿತ್ತು. ಈ ಬಾರಿ ಆ ಮೊತ್ತದಲ್ಲಿ ಅಲ್ಪ ಏರಿಕೆಯಾಗಿದ್ದು, 19,653.99 ಕೋಟಿ ರೂ. ನೀಡಲಾಗಿದೆ. ಇದು ಆ ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ತೀರಾ ಅಲ್ಪವಾಗಿದೆ.

ಅದೇ ರೀತಿ, ಆರೋಗ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗಳಿಗಾಗಿ 10,094.17 ಕೋಟಿ ರೂ. ಒದಗಿಸಲಾಗಿದೆ. ಇದು ಕಳೆದ ವರ್ಷದ 9,158.5 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ, ಕಳೆದ ಬಾರಿ ಸರಕಾರಕ್ಕೆ 8,927.18 ಕೋಟಿ ರೂ. ಮೊತ್ತವನ್ನು ಮಾತ್ರ ಖರ್ಚು ಮಾಡಲು ಸಾಧ್ಯವಾಗಿತ್ತು .ಆರೋಗ್ಯ ಮೂಲಸೌಕರ್ಯಕ್ಕಾಗಿ 2023-24ರ ಹಣಕಾಸು ವರ್ಷದಲ್ಲಿ ಸರಕಾರವು 1,933.47 ಕೋಟಿ ರೂ. ಖರ್ಚು ಮಾಡಿತ್ತು. ಆದರೆ ಈ ಬಾರಿ, 1,521.88 ಕೋಟಿ ರೂ. ಮಾತ್ರ ಒದಗಿಸಲಾಗಿದೆ.

ಪರಿಶಿಷ್ಟ ಜಾತಿಗಳ ಜನರಿಗಾಗಿ ಖರ್ಚಾಗುವ ಮುಖ್ಯ ಯೋಜನೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೀಡಲಾಗಿರುವ ಅನುದಾನದಲ್ಲಿ 1,000 ಕೋಟಿ ರೂ.ಯಷ್ಟು ಬೃಹತ್ ಮೊತ್ತವನ್ನು ಕಡಿತಗೊಳಿಸಲಾಗಿದೆ. ಕೃಷಿ ಉನ್ನತಿ ಯೋಜನೆಯಲ್ಲಿ 300 ಕೋಟಿ ರೂ., ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ 2 ಕೋಟಿ ರೂ., ಕೃಷಿ ವಿಜ್ಞಾನ ಕೇಂದ್ರದಲ್ಲಿ 4 ಕೋಟಿ ರೂ. ಮತ್ತು ಯೂರಿಯ ಸಬ್ಸಿಡಿಯಲ್ಲಿ 40 ಕೋಟಿ ರೂ. ಕಡಿತ ಮಾಡಲಾಗಿದೆ.ಪರಿಶಿಷ್ಟ ಜಾತಿಗಳ ಜನರ ಗೌರವಯುತ ಬದುಕಿಗಾಗಿ ಶುದ್ಧ ನೀರು ಒದಗಿಸುವ ಮತ್ತು ಶೌಚಾಲಯ ನಿರ್ಮಾಣ ಯೋಜನೆಯ ಅನುದಾನವನ್ನು ಈ ಬಾರಿ 6,600 ಕೋಟಿ ರೂ.ಯಷ್ಟು ಕಡಿತಗೊಳಿಸಲಾಗಿದೆ. ಕಾರ್ಮಿಕ ಕಲ್ಯಾಣ ಯೋಜನೆಯ ಅನುದಾನದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ನೀಡುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಗೆ ಈ ಬಾರಿ ಕೇವಲ 25 ಕೋಟಿ ರೂ. ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ 5 ಕೋಟಿ ರೂ. ಕಡಿಮೆಯಾಗಿದೆ.

ಈ ಬಜೆಟ್ ಪರಿಶಿಷ್ಟ ಜಾತಿಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಮೇಲೆ ಮೋದಿ ಸರಕಾರ ನಡೆಸಿರುವ ದಾಳಿಯಾಗಿದೆ. ಈ ಬಜೆಟ್‌ನಿಂದ ಸರಕಾರ ಸ್ಪಷ್ಟವಾಗಿ ‘ದಲಿತರೆಂದರೆ ದೇಶವೂ ಅಲ್ಲ, ಮನುಷ್ಯರೂ ಅಲ್ಲ’ ಎಂದು ಘೋಷಿಸಿದಂತಾಗಿದೆ.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News