ಶಿವಮೊಗ್ಗ: ಸಿಎಂ, ಶಾಸಕರಿಗೆ ಅಗೌರವ, ಕರ್ತವ್ಯ ಲೋಪ ಆರೋಪ; ಶಂಕರ ವಲಯದ ಉಪ ಅರಣ್ಯಾಧಿಕಾರಿ ಅಮಾನತು

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಅಗೌರವ ತೋರಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಶಂಕರ ವಲಯದ ಉಪ ಅರಣ್ಯಾಧಿಕಾರಿ ನರೇಂದ್ರ ಕುಮಾರ್ ಬಿ.ಜಿ ಅವರನ್ನು ಅಮಾನತುಗೊಳಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.
ಶಂಕರ ವಲಯದ ಕಸಬಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನರೇಂದ್ರ ಕುಮಾರ್ ಬಿ.ಜಿ ಅವರು,ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.ಈ ಬಗ್ಗೆ ಎ.ಜಿ ಯೋಗೇಂದ್ರ ಎಂಬವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಅರಣ್ಯ ಸಚಿವರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಲಾಗಿತ್ತು. ತನಿಖೆ ನಡೆಸಿದ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ನರೇಂದ್ರ ಕುಮಾರ್ ಬಿ.ಜಿ ಅವರು, ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ. ಸರ್ಕಾರಿ ನೌಕರರಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿರುವುದರಿಂದ ಇವರ ವಿರುದ್ದ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿಕೊಂಡು ಅಮಾನತುಗೊಳಿಸುವಂತೆ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ವರದಿ ಸಲ್ಲಿಸಿದ್ದರು.
ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವರದಿ ಆಧರಿಸಿ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅಮಾನತು ಮಾಡಿ ಆದೇಶಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ವಲಯ ಕಛೇರಿಯನ್ನು ಕೇಂದ್ರಸ್ಥಾನವಾಗಿ ನಿಗದಿಪಡಿಸಿದ್ದು ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡದಂತೆ ಅಮಾನತು ಆದೇಶದಲ್ಲಿ ಸೂಚಿಸಲಾಗಿದೆ.
ತನಿಖೆಯಲ್ಲಿ ಆರೋಪ ಅಲ್ಲಗಳೆದ ಅಧಿಕಾರಿ:
ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರ ಬಗ್ಗೆ ಅಗೌರವ ತೋರಿ ಕರ್ತವ್ಯ ಲೋಪ ಎಸಗಿದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ನೋಟೀಸ್ ಜಾರಿ ಮಾಡಿದ್ದರು. ಈ ಬಗ್ಗೆ ಸಮಜಾಯಿಷಿ ನೀಡಿರುವ ಶಂಕರ ವಲಯದ ಕಸಬಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ನರೇಂದ್ರ ಕುಮಾರ್ ಬಿ.ಜಿ ಅವರು,ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರ ಬಗ್ಗೆ ಅಗೌರವ ತೋರಿದ್ದೇನೆ ಎಂಬ ಆರೋಪ ಸೃಷ್ಟಿತವಾದ ಸುಳ್ಳು ದೂರಾಗಿದೆ.
ನಾನೊಬ್ಬ ಸರ್ಕಾರಿ ನೌಕರನಾಗಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು, ಮುಖ್ಯಮಂತ್ರಿ ಮತ್ತು ಶಾಸಕರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಸಿಎಂ ಹಾಗೂ ಶಾಸಕರ ಬಗ್ಗೆ ಯಾವುದೇ ಆಡಿಯೋ ಮೂಲಕ ಸಂಭಾಷಣೆ ಮಾಡಿರುವುದಿಲ್ಲ. ಯಾರೋ ಕೆಲವು ಮಧ್ಯವರ್ತಿ ವ್ಯಕ್ತಿಗಳು ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ನನ್ನ ಧ್ವನಿಗೆ ಅನುಕರಣೀಯವಾಗಿ ತಂತ್ರಜ್ಞಾನದಲ್ಲಿ ಬೇರೆ ವ್ಯಕ್ತಿಗಳ ಮೂಲಕ ಸಂಭಾಷಣೆ ಮಾಡಿ ಸುಳ್ಳು ಆಡಿಯೋ ಧ್ವನಿಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.