ಕೌಟುಂಬಿಕ ಹಿಂಸೆ ಆರೋಪ: ಆಸೀಸ್ ನ ಮಾಜಿ ಕ್ರಿಕೆಟಿಗನಿಗೆ 4 ವರ್ಷ ಜೈಲು

ಮೈಕಲ್ ಸ್ಲೇಟರ್ | PC : NDTV
ಮೆಲ್ಬರ್ನ್: ಕೌಟುಂಬಿಕ ಹಿಂಸೆ ಆರೋಪ ಎದುರಿಸುತ್ತಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ಗೆ ನ್ಯಾಯಾಲಯವೊಂದು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಈಗಾಗಲೇ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆದಿರುವ ಹಿನ್ನೆಲೆಯಲ್ಲಿ 55 ವರ್ಷದ ಕ್ರಿಕೆಟಿಗ ಜೈಲಿನಿಂದ ಹೊರಬರಲಿದ್ದಾರೆ.
ಹೆಂಡತಿಗೆ ಹಿಂಸೆ ನೀಡಿರುವುದು ಸೇರಿದಂತೆ ಏಳು ಆರೋಪಗಳಲ್ಲಿ ತಾನು ತಪ್ಪಿತಸ್ಥ ಎನ್ನುವುದನ್ನು ಸ್ಲೇಟರ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ.
ನೂಸ ವಲಯದಲ್ಲಿ 2023ರಿಂದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ, ಕತ್ತು ಹಿಸುಕಿದ, ಅವರನ್ನು ಹಿಂಬಾಲಿಸಿದ ಮತ್ತು ಕಳ್ಳತನ ಮಾಡಿದ ಆರೋಪಗಳನ್ನು ಅವರು ಎದುರಿಸುತ್ತಿದ್ದರು.
ಸ್ಲೇಟರ್‌ರ ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಶಿಕ್ಷೆ ಘೋಷಿಸಿದ ನ್ಯಾಯಾಧೀಶ ಗ್ಲೆನ್ ಕ್ಯಾಶ್ ಹೇಳಿದರು. ‘‘ಇದು ಸ್ಪಷ್ಟವಾಗಿದೆ ಸ್ಲೇಟರ್, ನೀವು ಕುಡಿತದ ದಾಸರಾಗಿದ್ದೀರಿ. ನಿಮ್ಮ ಈ ಚಟದಿಂದಾಗಿಯೇ ನಿಮ್ಮ ಕ್ರೀಡಾ ಜೀವನವು ಬೇಗನೇ ಕೊನೆಗೊಂಡಿರುವುದು ವಿಷಾದನೀಯ’’ ಎಂದು ನ್ಯಾಯಾಲಯ ಹೇಳಿತು.
ಅವರನ್ನು ಕಳೆದ ವರ್ಷದ ಎಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲೇ ಇದ್ದಾರೆ.
ಸ್ಲೇಟರ್ ಆಸ್ಟ್ರೇಲಿಯದ ಪರವಾಗಿ 74 ಟೆಸ್ಟ್‌ಗಳನ್ನು ಆಡಿ 14 ಶತಕಗಳನ್ನು ಒಳಗೊಂಡ 5,312 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು 42 ಏಕದಿನ ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲೂ ಆಡಿದ್ದಾರೆ.