ಶುಭಮನ್ ಗಿಲ್, ಸಾಯಿ ಸುದರ್ಶನ್ ಶತಕ

Update: 2024-05-10 18:24 GMT
PC :X/@IPL

ಅಹ್ಮದಾಬಾದ್: ಆರಂಭಿಕ ಬ್ಯಾಟರ್‌ಗಳಾದ ಶುಭಮನ್ ಗಿಲ್ (104 ರನ್, 55 ಎಸೆತ, 9 ಬೌಂಡರಿ, 6 ಸಿಕ್ಸರ್)ಹಾಗೂ ಸಾಯಿ ಸುದರ್ಶನ್(103 ರನ್, 51 ಎಸೆತ, 5 ಬೌಂಡರಿ, 7 ಸಿಕ್ಸರ್)ಶತಕ, ಮೋಹಿತ್ ಶರ್ಮಾ(3-31) ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿಯ ಸಹಾಯದಿಂದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 35 ರನ್ ಅಂತರದಿಂದ ಮಣಿಸಿದೆ.

ಶುಕ್ರವಾರ ನಡೆದ 59ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು.

ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 231 ರನ್ ಕಲೆ ಹಾಕಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸಿಎಸ್‌ಕೆ ಪರ ಡ್ಯಾರಿಲ್ ಮಿಚೆಲ್(63 ರನ್, 34 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಮೊಯಿನ್ ಅಲಿ(56 ರನ್, 36 ಎಸೆತ, 4 ಬೌಂಡರಿ, 4 ಸಿಕ್ಸರ್)ಅರ್ಧಶತಕ ಗಳಿಸಿದರೂ ಗೆಲುವಿಗೆ ಇದು ಸಾಕಾಗಲಿಲ್ಲ. ಮಾಜಿ ನಾಯಕ ಎಂ.ಎಸ್. ಧೋನಿ ಔಟಾಗದೆ 26 ರನ್ ಗಳಿಸಿದರು.

ಗುಜರಾತ್ ಪರ ಮೋಹಿತ್ ಯಶಸ್ವಿ ಬೌಲರ್ ಎನಿಸಿಕೊಂಡರು. ರಶೀದ್ ಖಾನ್(2-38)ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು 17.2 ಓವರ್‌ಗಳಲ್ಲಿ 210 ರನ್ ಜೊತೆಯಾಟ ನಡೆಸಿದ ನಾಯಕ ಗಿಲ್ ಹಾಗೂ ಸುದರ್ಶನ್ ಗುಜರಾತ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. 2022ರಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಕೆ.ಎಲ್.ರಾಹುಲ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು.

ಗಿಲ್ 50 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಸಾಯಿ ಸುದರ್ಶನ್ ಕೂಡ 50 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಬಲದಿಂದ ಶತಕ ಪೂರ್ಣಗೊಳಿಸಿದರು. ಸುದರ್ಶನ್ ಹಾಗೂ ಗಿಲ್ ಒಂದೇ ಓವರ್‌ನಲ್ಲಿ ಬೆನ್ನುಬೆನ್ನಿಗೆ ಔಟಾದರು. ಡೇವಿಡ್ ಮಿಲ್ಲರ್ ಔಟಾಗದೆ 16 ರನ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ(2-33)ಶತಕವೀರರಾದ ಸುದರ್ಶನ್ ಹಾಗೂ ಗಿಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಟೈಟಾನ್ಸ್: 20 ಓವರ್‌ಗಳಲ್ಲಿ 231/3

(ಶುಭಮನ್ ಗಿಲ್ 104, ಸಾಯಿ ಸುದರ್ಶನ್ 103, ಡೇವಿಡ್ ಮಿಲ್ಲರ್ ಔಟಾಗದೆ 16, ತುಷಾರ್ ದೇಶಪಾಂಡೆ 2-33)

ಚೆನ್ನೈ ಸೂಪರ್ ಕಿಂಗ್ಸ್:20 ಓವರ್‌ಗಳಲ್ಲಿ 196/8

(ಡ್ಯಾರಿಲ್ ಮಿಚೆಲ್ 63, ಮೊಯಿನ್ ಅಲಿ 56, ಶಿವಂ ದುಬೆ 21, ಧೋನಿ ಔಟಾಗದೆ 26,ಮೋಹಿತ್ ಶರ್ಮಾ 3-31, ರಶೀದ್ ಖಾನ್ 2-38)

್‌‌‌‌‌‌‌‌

ರಾಹುಲ್, ಸೂರ್ಯಕುಮಾರ್ ದಾಖಲೆ ಸರಿಗಟ್ಟಿದ ಗಿಲ್

ಹೊಸದಿಲ್ಲಿ, ಮೇ 10: ಸಿಎಸ್‌ಕೆ ವಿರುದ್ಧ ಶತಕ ಗಳಿಸಿದ ಗುಜರಾತ್ ನಾಯಕ ಶುಭಮನ್ ಗಿಲ್ ಅಮೋಘ ಪ್ರದರ್ಶನ ನೀಡಿದ್ದಾರೆ. ಶುಭಮನ್ ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 9 ಬೌಂಡರಿ, 6 ಸಿಕ್ಸರ್ ಸಿಡಿಸಿದರು. ಇದು ಶುಭಮನ್ ಐಪಿಎಲ್‌ನಲ್ಲಿ ಗಳಿಸಿದ 4ನೇ ಶತಕವಾಗಿದೆ.

ಗಿಲ್ ಇದೀಗ ಟಿ-20 ಕ್ರಿಕೆಟ್‌ನಲ್ಲಿ ಆರನೇ ಶತಕ ಗಳಿಸಿದರು. ಈ ಮೂಲಕ ಋತುರಾಜ್ ಗಾಯಕ್ವಾಡ್, ಕೆ.ಎಲ್.ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ದಾಖಲೆಯನ್ನು ಸರಿಗಟ್ಟಿದರು. ಇವೆರಲ್ಲರೂ ತಲಾ 6 ಶತಕ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಟಿ-20ಯಲ್ಲಿ 9 ಬಾರಿ ಶತಕ ಗಳಿಸಿದ ಭಾರತದ ಮೊದಲ ಆಟಗಾರನಾಗಿದ್ದಾರೆ. ರೋಹಿತ್ ಶರ್ಮಾ 8 ಶತಕಗಳನ್ನು ಗಳಿಸಿ ಟಿ-20ಯಲ್ಲಿ ಗರಿಷ್ಠ ಶತಕ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News