“ನಾನು ನಿನಗೇನೂ ಆಗಲು ಬಿಡುವುದಿಲ್ಲ” : ಪಿಚ್ ಪ್ರವೇಶಿಸಿ ಕಾಲಿಗೆರಗಿದ ಅಭಿಮಾನಿಗೆ ಧೋನಿಯಿಂದ ಅಭಯ

Update: 2024-05-29 18:02 GMT

Courtesy: X/ Screengrab

ಹೊಸದಿಲ್ಲಿ : ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಟೂರ್ನಿಯ ಸಂದರ್ಭ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ, ಅಭಿಮಾನಿಯೊಬ್ಬರು ಭದ್ರತೆ ಭೇದಿಸಿ ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲಿನ ಅಭಿಮಾನವನ್ನು ತೋರಿಸುವ ಉದ್ದೇಶದಿಂದ ಮೈದಾನಕ್ಕೆ ಪ್ರವೇಶಿಸಿದ್ದರು. ಧೋನಿ ಅವರನ್ನು ಭೇಟಿಯಾಗುವ ಕನಸನ್ನು ನನಸಾಗಿಸಲು ಪಿಚ್‌ಗೆ ನುಗ್ಗಿದ್ದ ಅಭಿಮಾನಿಗೆ ಧೋನಿ ನೀಡಿದ ಅಪ್ಪುಗೆಯ ಹೃದಯಸ್ಪರ್ಶಿ ಸೂಚಕವು ರಾಷ್ಟ್ರವ್ಯಾಪಿ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆಯನ್ನು ಗಳಿಸಿತು.

ಧೋನಿ ವಿರುದ್ಧದ ಎಲ್‌ಬಿಡಬ್ಲ್ಯು ನಿರ್ಧಾರವನ್ನು ಮೂರನೇ ಅಂಪೈರ್ ರದ್ದುಗೊಳಿಸಿದ ಬಿಡುವಿನಲ್ಲಿ ಈ ಘಟನೆ ನಡೆದಿತ್ತು. ಅಚಾನಕ್ಕಾಗಿ ನಡೆದ ಈ ಘಟನೆಯ ನಡುವೆ, ಧೋನಿ ಶಾಂತ ಚಿತ್ತರಾಗಿ, ಅಭಿಮಾನಿಯು ತಮ್ಮ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದಾಗ ನಾಟಕೀಯವಾಗಿ ಓಡಿದರು.

ಸಿಎಸ್‌ಕೆ ಮಾಜಿ ನಾಯಕ ಧೋನಿಯವರನ್ನು ಅಪ್ಪಿಕೊಳ್ಳುವ ಮೊದಲು ಅಭಿಮಾನಿಯು ಅವರ ಪಾದಗಳನ್ನು ಮುಟ್ಟುವಲ್ಲಿ ಯಶಸ್ವಿಯಾದರು. ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ಯುವ ಮೊದಲು, ಧೋನಿ ಮತ್ತು ಅಭಿಮಾನಿಯ ನಡುವೆ ಒಂದಿಷ್ಟು ಮಾತುಗಳು ವಿನಿಮಯವಾದವು.

ಈ ಮಧ್ಯೆ ಧೋನಿ ತನ್ನ ವಿಶಿಷ್ಟವಾದ ಕ್ರೀಡಾಸ್ಫೂರ್ತಿ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸುವ ಮೂಲಕ, ಅಭಿಮಾನಿಯನ್ನು ಗಾರ್ಡ್‌ಗಳಿಂದ ರಕ್ಷಿಸಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿವೆ. ಆ ಕ್ಷಣಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿವೆ. ಕ್ರಿಕೆಟ್ ಜಗತ್ತಿನಲ್ಲಿ ಆಟಗಾರರು ಮತ್ತು ಅಭಿಮಾನಿಗಳ ನಡುವಿನ ಅನುಬಂಧವನ್ನು ಈ ವೀಡಿಯೊ ಪ್ರದರ್ಶಿಸುವಂತಿದೆ.

ಧೋನಿ ಮತ್ತು ಪಿಚ್ ಗೆ ನುಗ್ಗಿದ ಅಭಿಮಾನಿಯ ನಡುವಿನ ಮಾತುಕತೆಯು ಆರಂಭದಲ್ಲಿ ಅಸ್ಪಷ್ಟವಾಗಿತ್ತು. ಆದರೆ ಅಭಿಮಾನಿಯು ಆ ಮಾತುಗಳನ್ನು ಬಹಿರಂಗಪಡಿಸಿರುವ ವೀಡಿಯೊ ಈಗ ವೈರಲ್ ಆಗಿದೆ. ಎಂ.ಎಸ್ ಧೋನಿಯು, ತನ್ನ ಪಾದಗಳನ್ನು ಸ್ಪರ್ಶಿಸುವ ಅಭಿಮಾನಿಯ ಪ್ರಯತ್ನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ತಮಾಷೆ ಮಾಡುತ್ತಿದ್ದರು ಎಂದು ಅಭಿಮಾನಿ ಹೇಳಿದ್ದಾರೆ. ಅವರ ನಡುವಿನ ಮಾತುಕತೆಯ ನಡುವೆ ಅಭಿಮಾನಿಗೆ ಉಸಿರಾಟದ ತೊಂದರೆಯಿರುವುದು ಎಂಎಸ್ ಧೋನಿಗೆ ತಿಳಿಯಿತು.ಅಭಿಮಾನಿ ಬಿಗಿದಪ್ಪಿದ ಕೂಡಲೇ ಧೋನಿಯು, ಅಭಿಮಾನಿಗೆ ಶಸ್ತ್ರಚಿಕಿತ್ಸೆಗೆ ಅಗತ್ಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು ಎಂದು, ಅವರು ಹೇಳಿದ್ದಾರೆ.

ಅಲ್ಲದೇ ಬೌನ್ಸರ್‌ ಗಳು ಅಭಿಮಾನಿಯನ್ನು ಹೊರಗೆ ಕರೆದೊಯ್ಯಲು ಬಂದ ಕೂಡಲೇ, “ ನಿನೇಗೂ ಆಗಲು ನಾನು ಬಿಡುವುದಿಲ್ಲ. ಹೆದರಿಕೊಳ್ಳಬೇಡ. ಇವರ್ಯಾರೂ ನಿನಗೇ ಏನೂ ಮಾಡುವುದಿಲ್ಲ” ಎಂದು ಹೇಳಿದರು, ಎಂದು ಅಭಿಮಾನಿ ಹೇಳಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬೌನ್ಸರ್‌ ಗಳನ್ನು ಧೋನಿ ಅಭಿಮಾನಿಗೆ ಏನೂ ಮಾಡದಂತೆ ತಡೆಯುವುದು ವೀಡಿಯೊದಲ್ಲಿದೆ.

ಸೌಜನ್ಯ : dnaindia.com

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News