ಚಿಕ್ಕಮಗಳೂರು: ನಾಳೆ ಶರಣಾಗಲಿರುವ ಆರು ನಕ್ಸಲರು

Update: 2025-01-07 15:06 GMT

ಚಿಕ್ಕಮಗಳೂರು: ಹಲವು ದಶಕಗಳಿಂದ ಭೂಗತರಾಗಿದ್ದ ಆರು ಮಂದಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ರಾಜ್ಯದ ನಾಲ್ವರು ಹಾಗೂ ಕೇರಳ, ತಮಿಳುನಾಡು ಮೂಲದ ಇಬ್ಬರು ನಕ್ಸಲರು ಜ.8ರಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಬರಲಿದ್ದಾರೆ ಎಂಬುದನ್ನು ಶಾಂತಿಗಾಗಿ ನಾಗರಿಕರ ವೇದಿಕೆ ಮುಖಂಡರು ‘ವಾರ್ತಾಭಾರತಿ’ಗೆ ಖಚಿತಪಡಿಸಿದ್ದಾರೆ.

ಮಂಗಳವಾರ ಮಲೆನಾಡು ಭಾಗದ ಅಜ್ಞಾತ ಸ್ಥಳದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆಯ ನೂರ್ ಶ್ರೀಧರ್, ನಗರಗೆರೆ ರಮೇಶ್ ಹಾಗೂ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಕೆ.ಪಿ.ಶ್ರೀಪಾಲ್ ಅವರು ನಕ್ಸಲರ ತಂಡವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 6 ಮಂದಿ ನಕ್ಸಲರು ಜಿಲ್ಲಾಡಳಿತದ ಮುಂದೆ ಹಾಜರಾಗುವ ಮೂಲಕ ಮುಖ್ಯವಾಹಿನಿಗೆ ಮರಳಲಿದ್ದಾರೆ. ಈ ಸಂಬಂಧ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲ್ಲೂರು, ರಾಯಚೂರಿನ ಮಾರಪ್ಪಅರೋಲಿ, ತಮಿಳುನಾಡಿನ ಕೆ.ವಸಂತ್, ಕೇರಳದ ಟಿ.ಎನ್.ಜೀಶ ಅವರು ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ.

ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಡಾ.ಬಂಜಗೆರೆ ಜಯಪ್ರಕಾಶ್, ಕೆ.ಪಿ.ಶ್ರೀಪಾಲ್, ಸಿರಿಮನೆ ನಾಗರಾಜ್, ಪಾರ್ವತೀಶ ಬಿಳಿದಾಳೆ, ಶಾಂತಿಗಾಗಿ ನಾಗರಿಕರ ವೇದಿಕೆಯ ನಗರಗೆರೆ ರಮೇಶ್, ಬಿ.ಟಿ.ಲಲಿತಾ ನಾಯಕ್, ಶ್ರೀಪಾಲ್, ನೂರ್ ಶ್ರೀಧರ್, ತಾರಾ ರಾಯ್, ಕೆ.ಎಲ್.ಅಶೋಕ್, ಪ್ರೊ.ಶ್ರೀಧರ್ ಅವರನ್ನೊಳಗೊಂಡ ತಂಡವು ಸರಕಾರ ಮತ್ತು ನಕ್ಸಲರ ಗುಂಪಿನ ನಡುವೆ ಮಧ್ಯಸ್ಥಿಕೆ ವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News