ಹನೂರು | ಕಾಮಗಾರಿಗೆ ಟೆಂಡರ್ ಆಗದ 'ಪ್ರಜಾ ಸೌಧ'ಕ್ಕೆ ಶಿಲಾನ್ಯಾಸ ನೆರವೇರಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ
Update: 2025-04-25 12:21 IST

ಚಾಮರಾಜನಗರ : ಕಾಮಗಾರಿಗೆ ಟೆಂಡರ್ ಆಗಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಪ್ರಜಾ ಸೌಧ' ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ನಿರಾಕರಿಸಿದ ಘಟನೆ ಹನೂರು ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಹನೂರು ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಶಿಲಾನ್ಯಾಸ ನೆರವೇರಿಸಲು ಶುಕ್ರವಾರ ಮಹದೇಶ್ವರಬೆಟ್ಟದಿಂದ ಹನೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಗುದ್ದಲಿ ಹಿಡಿದು ಮುಖ್ಯಮಂತ್ರಿಯವರು ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರು.
ಪ್ರಜಾ ಸೌಧದ ಕಾಮಗಾರಿಯ ಟೆಂಡರ್ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಟೆಂಡರ್ ಆಗದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವುದು ತಪ್ಪು ಎಂದ ಮುಖ್ಯಮಂತ್ರಿ, ಶಿಲಾನ್ಯಾಸ ನೆರವೇರಿಸದೇ ಕಾರನ್ನೇರಿ ಚಾಮರಾಜನಗರ ಜಿಲ್ಲಾ ಕೇಂದ್ರದತ್ತ ತೆರಳಿದರು.