ಅಖಿಲ ಭಾರತ ಮಟ್ಟದಲ್ಲಿ ಸತತ ನಾಲ್ಕನೆಯ ವರ್ಷವೂ ಬೇಗ ಕೆಡುವ ಉತ್ಪನ್ನಗಳ ರಫ್ತಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡ ಬೆಂಗಳೂರು ವಿಮಾನ ನಿಲ್ದಾಣ

Update: 2024-07-04 14:07 GMT

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು : ಅಖಿಲ ಭಾರತ ಮಟ್ಟದಲ್ಲಿ ಸತತ ನಾಲ್ಕನೆಯ ವರ್ಷವೂ ಬೇಗ ಕೆಡುವ ಉತ್ಪನ್ನಗಳ ರಫ್ತಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಅಗ್ರ ಸ್ಥಾನ ಕಾಯ್ದುಕೊಂಡಿದೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಬೇಗ ಕೆಡುವ ಉತ್ಪನ್ನಗಳ ರಫ್ತಿನಲ್ಲಿ ಶೇ. 18ರಷ್ಟು ಬೆಳವಣಿಗೆ ಸಾಧಿಸಲಾಗಿದ್ದು, 2023-24ನೇ ಸಾಲಿನಲ್ಲಿ ಒಟ್ಟು 63,188 ಮೆಟ್ರಿಕ್ ಟನ್ ಬೇಗ ಕೆಡುವ ಉತ್ಪನ್ನಗಳ ರಫ್ತು ಮಾಡಲಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಲಕತ್ವ ಹಾಗೂ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ಪ್ರಕಟಣೆಯಲ್ಲಿ ತಿಳಿಸಿದೆ.

"ಈ ಸಾಧನೆಯು ದೇಶದ ಒಟ್ಟು ಬೇಗ ಕೆಡುವ ಉತ್ಪನ್ನಗಳ ಸಾಗಣೆಯಲ್ಲಿ ಶೇ. 28ರಷ್ಟು ಬೇಗ ಕೆಡುವ ಉತ್ಪನಗಳ ರಫ್ತನ್ನು ನಿಭಾಯಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಹತ್ತರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಒಟ್ಟು ಬೇಗ ಕೆಡುವ ಉತ್ಪನ್ನಗಳ ರಫ್ತಿನ ಪೈಕಿ ಶೇ. 48ರಷ್ಟನ್ನು ನಿಭಾಯಿಸುತ್ತಿದೆ ಹಾಗೂ 2023-24ನೇ ಹಣಕಾಸು ವರ್ಷದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಶೇ. 28ರಷ್ಟು ಪಾಲನ್ನು ಕಾರ್ಯಾಚರಿಸುತ್ತಿದೆ" ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ವಿಮಾನ ನಿಲ್ದಾಣವು 2023-24ನೇ ಸಾಲಿನಲ್ಲಿ 47,041 ಮೆಟ್ರಿಕ್ ಟನ್ ಕುಕ್ಕಟೋತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಅದರಲ್ಲೂ ಅಗ್ರ ಸ್ಥಾನಕ್ಕೆ ಭಾಜನವಾಗಿದೆ ಎಂದೂ ತಿಳಿಸಿದೆ.

ಇವುಗಳೊಂದಿಗೆ, ಬೆಂಗಳೂರು ವಿಮಾನ ನಿಲ್ದಾಣವು ಕಳೆದ ಹಣಕಾಸು ವರ್ಷದಲ್ಲಿ 2,050 ಮೆಟ್ರಿಕ್ ಟನ್ ಪುಷ್ಪವನ್ನೂ ರಫ್ತು ಮಾಡಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News