ವಾಹನಗಳಿಗೆ ಹೈ-ಬೀಮ್ ಹೆಡ್‍ಲೈಟ್‍ಗಳ ಬಳಕೆ : 4 ದಿನಗಳಲ್ಲಿ 5 ಸಾವಿರ ಪ್ರಕರಣ ದಾಖಲು

Update: 2024-07-07 15:11 GMT

ಸಾಂದರ್ಭಿಕ ಚಿತ್ರ (PC : Meta AI)

ಬೆಂಗಳೂರು : ಹೆಚ್ಚು ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವ ಹೈ-ಬೀಮ್ ಹೆಡ್‍ಲೈಟ್‍ಗಳನ್ನು ಬಳಸಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರಿ ಪೊಲೀಸರು, ಕೇವಲ ನಾಲ್ಕು ದಿನಗಳಲ್ಲಿ 5 ಸಾವಿರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಕಣ್ಣು ಕುಕ್ಕುವ ರೀತಿ ಎಲ್‍ಇಡಿ ದೀಪ ಬಳಸಿ ವಾಹನ ಚಲಾಯಿಸಿದ ಲಾರಿ, ಟ್ರಕ್, ಬಸ್, ಆಟೋ ಸೇರಿದಂತೆ ಇನ್ನಿತರ ವಾಹನಗಳ ಚಾಲಕರ ವಿರುದ್ಧ ರಾಜ್ಯಾದ್ಯಂತ ಸಂಚಾರಿ ಪೊಲೀಸರು ಸತತ ನಾಲ್ಕು ದಿನಗಳು ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನಲ್ಲಿ 2,153, ಮೈಸೂರಿನಲ್ಲಿ 302, ತುಮಕೂರು 237, ಉತ್ತರ ಕನ್ನಡ 236, ರಾಯಚೂರು 260, ವಿಜಯನಗರ 182, ಧಾರವಾಡ 144 ಸೇರಿದಂತೆ ಜುಲೈ 4ರ ಅಂತ್ಯಕ್ಕೆ ಐದು ಸಾವಿರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ರಸ್ತೆ ಹಾಗೂ ಸುರಕ್ಷತೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ವಾಹನದಲ್ಲಿನ ಹೆಚ್ಚು ಬೆಳಕು ಹೊರಸೂಸುವ(ಹೈಬೀಮ್) ಎಲ್.ಇ.ಡಿ. ಹೆಡ್‍ಲೈಟ್‍ಗಳು ಅಪಘಾತಕ್ಕೆ ಕಾರಣವಾಗಬಹುದು. ಇಂತಹ ಮಾರ್ಪಡಿಸಿದ ಹೆಡ್‍ಲೈಟ್‍ಗಳನ್ನು ಬಳಸುವವರ ವಿರುದ್ದ ರಾಜ್ಯದಾದ್ಯಂತ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ 500 ರೂ., ಎರಡನೇ ಬಾರಿ ಉಲ್ಲಂಘಿಸಿದರೆ 1 ಸಾವಿರ ರೂ ದಂಡ ವಿಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್‍ಇಡಿ ದೀಪ ಬಳಕೆಯಿಂದಾಗಿ ಅಪಘಾತ ಹೆಚ್ಚಾಗಿದೆ. ಪ್ರಖರ ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವ ಹಾಗೆ ಹೈ ಬೀಮ್ ಹೆಡ್‍ಲೈಟ್ ಬಳಸದೆ ಕೇಂದ್ರ ಮೋಟಾರ್ ಕಾಯ್ದೆಯ ಮಾರ್ಗಸೂಚಿ ಅನುಸರಿಸಬೇಕು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News