ಚನ್ನಪಟ್ಟಣ ಅಭಿವೃದ್ಧಿ ಭರವಸೆ ಉಳಿಸಿಕೊಳ್ಳುತ್ತೇವೆ : ಡಿಸಿಎಂ ಡಿ.ಕೆ.ಶಿವಕುಮಾರ್
ಕನಕಪುರ : "ಚನ್ನಪಟ್ಟಣದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ಮನೆ, ನಿವೇಶನ ಹಂಚಿಕೆ, ಬಗರ್ ಹುಕುಂ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಚುನಾವಣೆಗೆ ಮುಂಚಿತವಾಗಿ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕನಕಪುರದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ನಂತರ ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಈಗ ನಮಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಅವರ ಋಣದ ಸಾಲದ ಹೊರೆ ಹೊರಿಸಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕ ಆ ಋಣ ತೀರಿಸಲಾಗುವುದು" ಎಂದರು.
"ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆಯಾಗಿದೆ. ಅವರು ಗುಣಮುಖರಾದ ನಂತರ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮೊದಲು ಯೋಗೇಶ್ವರ್ ಅವರ ಜತೆಗೆ ಅಧಿಕಾರಿಗಳ ಸಭೆ ಕರೆದು ನಿವೇಶನ, ಮನೆ ಹಂಚಿಕೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಎಲ್ಲಾ ಕೆಲಸಗಳಿಗೆ ಚಾಲನೆ ನೀಡಲಿದ್ದೇವೆ" ಎಂದು ಹೇಳಿದರು.
ಗೆಲುವಿನ ಶ್ರಮ ಎಲ್ಲರಿಗೂ ಸೇರಬೇಕು, ಅಪೂರ್ವ ಸಹೋದರರಿಗೆ ಅಲ್ಲ :
ಗೆಲುವಿನ ಶ್ರಮ ಯಾರಿಗೆ ಸೇರಬೇಕು ಎಂದು ಕೇಳಿದಾಗ, "ಇದು ಒಬ್ಬರಿಗೆ ಸೇರುವ ಗೆಲುವಲ್ಲ. ಎಲ್ಲರೂ ಸೇರಿ ಶ್ರಮಪಟ್ಟ ಕಾರಣಕ್ಕೆ ಗೆಲುವು ದೊರೆತಿದೆ. ಅಪೂರ್ವ ಸಹೋದರರಿಗೆ ಗೆಲುವಿನ ಗರಿ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಯೋಗೇಶ್ವರ್ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಮತದಾರರು ನಮ್ಮ ಪರ ನಿಂತಿದ್ದಾರೆ. ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿ, ಗೆಲ್ಲಿಸಿದ್ದಾರೆ" ಎಂದರು.
ಕಾಂಗ್ರೆಸ್ ಸೇರಲು ಬಿಜೆಪಿಯವರೂ ಬಯಸಿದ್ದಾರೆ :
ಜನರು ಬಯಸಿದರೆ ಕಾಂಗ್ರೆಸ್ ಸೇರುವುದಾಗಿ ಜಿ. ಟಿ. ದೇವೇಗೌಡರ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದಾಗ, "ಇದು ಜಿಟಿಡಿ ಅವರೊಬ್ಬರ ಅಭಿಪ್ರಾಯ ಅಲ್ಲ, ಬಹಳಷ್ಟು ಜನ ಬಿಜೆಪಿಯವರು ಇದೇ ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿಯವರು ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿತ್ತೇ" ಎಂದು ಮರು ಪ್ರಶ್ನಿಸಿದರು.
ಅಶ್ವತ್ ನಾರಾಯಣ್ ದಡ್ಡರೇ? :
ಕಾಂಗ್ರೆಸ್ ಗೆಲುವಿಗೆ ರಾಜ್ಯ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆಯೇ ಎಂದಾಗ, "ಶನಿವಾರದಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರು 'ನನಗೆ ಮೊದಲೇ ತಿಳಿದಿತ್ತು, ಯೋಗೇಶ್ವರ್ ಅವರು ಗೆಲ್ಲುತ್ತಾರೆʼ ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಈ ರೀತಿ ಹೇಳಲು ದಡ್ಡರೇ?. ಅವರಿಗೆ ಜನರ ನಾಡಿ ಮಿಡಿತ ಗೊತ್ತಿತ್ತು" ಎಂದರು.