ಶೀಘ್ರವೇ ಗೃಹಲಕ್ಷ್ಮೀ ಸಂಘಗಳ ಸ್ಥಾಪನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ
ಕನಕಪುರ : ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ತ್ರೀಯರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಬಹಳ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕನಕಾಂಬರಿ ಮಹಿಳಾ ಒಕ್ಕೂಟದ ವತಿಯಿಂದ ರೂರಲ್ ಕಾಲೇಜು ಮೈದಾನದಲ್ಲಿ ರವಿವಾರ ನಡೆದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳಾ ಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಎಸ್. ಎಂ.ಕೃಷ್ಣ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಮೋಟಮ್ಮ ಅವರು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳನ್ನು ಆರಂಭಿಸಿ, ಆರ್ಥಿಕ ಶಕ್ತಿಯನ್ನು ತುಂಬಿದರು. ಇದೀಗ ಅದೇ ಇಲಾಖೆಯ ಮೂಲಕ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿರುವುದು ನನ್ನ ಪಾಲಿನ ಅದೃಷ್ಟ ಎಂದರು.
ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶ ನನ್ನದು. ಹಾಗಾಗಿ ಗೃಹಲಕ್ಷ್ಮೀ ಸಂಘಗಳ ಮೂಲಕ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದರು.
ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಅನುಕೂಲ ಮಾಡುವ ಸಲುವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇದರ ಫಲವಾಗಿ ಇಂದು 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಟಿಯ ಫಲವಾಗಿ ಇಂದು ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣ ಮಾಡಲಾಗುತ್ತಿದೆ. ಕನಕಪುರ ತಾಲೂಕಿನಲ್ಲಿ 70 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯ ಆಗುತ್ತಿದೆ ಎಂದರು.
ಡಿ.ಕೆ.ಶಿವಕುಮಾರ್ ರಾಷ್ಟಮಟ್ಟದ ನಾಯಕ :
ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಕೇವಲ ಕರ್ನಾಟಕದ ನಾಯಕ ಅಲ್ಲ, ಅವರು ರಾಷ್ಟ ಮಟ್ಟದ ನಾಯಕ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಡಿ.ಕೆ.ಶಿವಕುಮಾರ್. ಬೆಂಗಳೂರು ಮಾದರಿಯಲ್ಲಿ ಕನಕಪುರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ವೇಳೆ ನಂಜನಗೂಡು ಶಾಸಕ ದರ್ಶನ್ ದ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಕನಕಾಂಬರಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಎಚ್.ಕೆ.ಶ್ರೀಕಂಠು, ಮುಖಂಡರಾದ ಡಿ.ಎಂ.ವಿಶ್ವನಾಥ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಯೋಜನಾ ಅನುಷ್ಠಾನಗಳ ಅಧ್ಯಕ್ಷ ದಿಲೀಪ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ನಗರಸಭೆ ಅಧ್ಯಕ್ಷ ಲಕ್ಷ್ಮೀ ದೇವಮ್ಮ, ರೂರಲ್ ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮಣ್ ಮೊದಲಾದವರಿದ್ದರು.