ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ರಾಕೇಶ್ ಮಲ್ಲಿ, ಮುತ್ತಪ್ಪ ರೈ 2ನೇ ಪತ್ನಿ ಸಹಿತ ನಾಲ್ವರ ವಿರುದ್ಧ FIR ದಾಖಲು

ರಾಮನಗರ: ಮಾಜಿ ಭೂಗತ ಪಾತಕಿ ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಕಿ ಶೆಟ್ಟಿಯ ಕಾರು ಚಾಲಕ ಜಿ. ಬಸವರಾಜು ನೀಡಿರುವ ದೂರಿನನ್ವಯ ಮುತ್ತಪ್ಪ ರೈಯವರಿಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈಯವರ ಎರಡನೇ ಪತ್ನಿ ಅನುರಾಧಾ, ನಿತೇಶ್ ಎಸ್ಟೇಟ್ ಮಾಲಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ 11:30ರ ಸುಮಾರಿಗೆ ರಿಕ್ಕಿ ರೈ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ರಿಕ್ಕಿ ರೈ ಹಿಂಬದಿ ಸೀಟಿನಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾದರೂ ಅವರು ಮೂಗು ಮತ್ತು ಬಲತೋಳಿಗೆ ಗಾಯವಾಗಿದೆ.
ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.