ರಾಮನಗರ | ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ

ರಿಕ್ಕಿ ರೈ
ರಾಮನಗರ: ಮಾಜಿ ಭೂಗತ ಪಾತಕಿ ಮುತ್ತಪ್ಪ ರೈಯವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಬಿಡದಿಯ ಮುತ್ತಪ್ಪ ರೈ ಮನೆ ಬಳಿ ನಡೆದಿದೆ.
ಕಳೆದ ರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಿಕ್ಕಿ ರೈಯವರ ಮೂಗು, ಕೈಗೆ ಗುಂಡು ತಾಗಿದೆ. ಸದ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ರಾತ್ರಿ 11:30ರ ಸುಮಾರಿಗೆ ರಿಕ್ಕಿ ರೈ ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ಈ ಶೂಟೌಟ್ ನಡೆಸಿದ್ದಾರೆ. ಡ್ರೈವಿಂಗ್ ಸೀಟ್ ಗುರಿಯಾಗಿಸಿ ಗುಂಡಿನ ದಾಳಿ ನಡೆದಿದೆ. ಆದರೆ ರಿಕ್ಕಿ ರೈ ಹಿಂಬದಿ ಸೀಟಿನಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನ ಬೆನ್ನಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.
ರಶ್ಯದಲ್ಲಿ ನೆಲೆಸಿರುವ ರಿಕ್ಕಿ ರೈ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದರು. ಮನೆಯಿಂದ ಹೊರಗಡೆ ಹೋಗುವ ಸಂದರ್ಭಗಳಲ್ಲಿ ಹೆಚ್ಚಾಗಿ ರಿಕ್ಕಿ ರೈ ತಾವೇ ಕಾರು ಡ್ರೈವ್ ಮಾಡುತ್ತಾರೆ. ಆದರೆ ಕಳೆದ ತಡರಾತ್ರಿ ಚಾಲಕನಿಗೆ ಕಾರು ಚಲಾಯಿಸಲು ಹೇಳಿದ್ದ ರಿಕ್ಕಿ ರೈ, ಹಿಂಬದಿ ಸೀಟ್ನಲ್ಲಿ ಗನ್ ಮ್ಯಾನ್ ಜತೆ ಕುಳಿತಿದ್ದರೆನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖೆ ಚುರುಕು: ರಿಕ್ಕಿ ರೈ ಮೇಲೆ ಗುಂಡಿನ ದಾಳಿ ವಿಷಯದ ಮಾಹಿತಿ ಪಡೆದಿದ್ದೇನೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ತಕ್ಷಣವೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದೆ. ಸೈಬರ್ ಪ್ರಕರಣಗಳು ಕಡಿಮೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.