ದೇವೇಗೌಡರೇ ನಿಮ್ಮ ಪಾಳೇಗಾರಿಕೆ-ಹೊಟ್ಟೆಯುರಿ ನಿಮ್ಮನ್ನೇ ಸುಡುತ್ತೆ, ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

Update: 2024-11-11 10:38 GMT

ಚನ್ನಪಟ್ಟಣ : "ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿ ಆದ ಎಂದು ದೇವೇಗೌಡರಿಗೆ ಹೊಟ್ಟೆಯುರಿ. ಅದಕ್ಕೇ ನಮ್ಮ ಸರಕಾರವನ್ನು ಕಿತ್ತುಹಾಕುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದ ಜನತೆ ಆರಿಸಿರುವ ನಮ್ಮ‌ ಸರಕಾರವನ್ನು ಕುಮಾರಸ್ವಾಮಿ, ದೇವೇಗೌಡರಿಂದ ಕೀಳಲು ಸಾಧ್ಯವಿಲ್ಲ. ನಿಮ್ಮ ಹೊಟ್ಟೆಯುರಿ ನಿಮ್ಮನ್ನೇ ಸುಡುತ್ತದೆ, ಹೊರತು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಸೋಮವಾರ ಇಲ್ಲಿನ ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಮೋದಿಯವರಂತಹಾ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡರು ಹೇಳಿದ್ದರು. ಈಗ ಮೋದಿಯವರನ್ನು ಯದ್ವಾತದ್ವಾ ಹೊಗಳುತ್ತಿದ್ದಾರೆ" ಎಂದು ಛೇಡಿಸಿದರು.‌

ʼನಾನು, ಜಾಲಪ್ಪ ಅವರು ಇಲ್ಲದೇ ಹೋಗಿದ್ದರೆ 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರಲಿಲ್ಲ. ದೇವೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಎಸ್.ಆರ್.ಬೊಮ್ಮಾಯಿ ಸಿದ್ದರಿರಲಿಲ್ಲ. ಏಕೆಂದರೆ ಇವರು ಬೊಮ್ಮಾಯಿ ಸರಕಾರವನ್ನು ಕೆಡವಿದ್ದರು. ಆದರೂ ಆ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ ದೇವೇಗೌಡರ ಪರವಾಗಿ ನಿಂತಿದ್ದೆವು. ಈಗ ಸಿದ್ದರಾಮಯ್ಯ ಅವರಿಗೆ ಸೊಕ್ಕು, ಅಹಂ ಎನ್ನುತ್ತಿದ್ದಾರೆ. ಇದು ಪಾಳೇಗಾರಿಕೆ ಅಲ್ಲವೇ ದೇವೇಗೌಡರೇʼ ಎಂದು ಪ್ರಶ್ನಿಸಿದರು.

ʼಆಕಸ್ಮಿಕವಾಗಿ ಪ್ರಧಾನಿ ಆದ ದೇವೇಗೌಡರು ಪಾಳೆಗಾರಿಕೆ ಮಾತ್ರ ಬಿಡಲ್ಲ. ದಲಿತರು, ಹಿಂದುಳಿದವರನ್ನು ಕಂಡರೆ ಆಗಲ್ಲ. ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ಇದೆಲ್ಲಾ ಪಾಳೇಗಾರಿಕೆ ಅಲ್ವಾ ? ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಜೆಡಿಎಸ್ ಅಥವಾ ಬಿಜೆಪಿಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ನಿಂತು ಮತ ಕೇಳ್ತಿದ್ರಾ ? ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧಿಸಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಇದ್ದು ಮತ ಕೇಳ್ತಿದ್ರಾ ಎಂದು ಪ್ರಶ್ನಿಸಿದರು.

ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ:

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಬ್ಬೇ ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ, ಓಕೆ. ಆದರೆ, ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ ಎಂದರು.

ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರು ಯಾರನ್ನೂ ದೇವೇಗೌಡರು ಬೆಳೆಯಲು ಬಿಡಲ್ಲ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ. ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಸಿದ್ದೀನಿ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು. ಇನ್ನು ಯೋಗೇಶ್ವರ್ ಅವರನ್ನು ಸಹಿಸುತ್ತಾರಾ? ಎಂದು ಪ್ರಶ್ನಿಸಿದರು.

ಯೋಗೇಶ್ವರ್ ಆಧುನಿಕ ಭಗೀರಥ :

"ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಯಲ್ಲಿ-ರೈತರಿಗೆ ನೀರು ಕೊಡುವುದರಲ್ಲಿ ನಮ್ಮ ಯೋಗೇಶ್ವರ್ ಆಧುನಿಕ ಭಗೀರಥ. ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಮಣ್ಣಿನ ಬಗ್ಗೆ, ಇಲ್ಲಿನ ರೈತ ಸಮುದಾಯದ ಬಗ್ಗೆ, ಇಲ್ಲಿನ ಪಶುಪಾಲಕರು, ಗೋ ಸಾಕಾಣಿಕೆದಾರರ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಹಾಗೂ ಕಾಳಜಿ ಇಟ್ಟುಕೊಂಡಿದ್ದಾರೆ. ಹೀಗಾಗಿ ರೈತ ಕುಲದ ಉದ್ದಾರಕ್ಕಾಗಿ ಕೆರೆಗಳನ್ನು ತುಂಬಿಸಿ ಪುಣ್ಯಾತ್ಮ‌ ಎನ್ನಿಸಿಕೊಂಡರುʼ ಎಂದು ಮೆಚ್ಚುಗೆ ಸೂಚಿಸಿದರು.

ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಭಾವ, ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರ ಗೆಲುವಿಗೆ ಯೋಗೇಶ್ವರ್ ಅವರು ಬಹಳ ಶ್ರಮಿಸಿದರು. ಆಗಲೇ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಬೆಂಬಲಿಸಿ ಗೆಲ್ಲಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಂದಾಗ ಕೈ ಕೊಟ್ಟರು ಎಂದು ವ್ಯಂಗ್ಯವಾಡಿದರು.‌

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News