ಕರ್ನಲ್ ಮೆಕೆಂಜಿ ಜನಪದರ ಬಾಳು ಬದುಕನ್ನು ಬರೆದಿಡುವ ಪ್ರಯತ್ನ ಮಾಡಿದರು : ಪುರುಷೋತ್ತಮ ಬಿಳಿಮಲೆ

ರಾಮನಗರ : ಬ್ರಿಟಿಷರು ಭಾರತಕ್ಕೆ ಬಂದಾಗ ಬರೆಯುವ ಸಂಸ್ಕೃತಿ ಬಂದಿತು. ಆದರೆ, ಜನಪದರ ಬದುಕನ್ನು ಯಾರೂ ದಾಖಲಿಸಲಿಲ್ಲ. ಬ್ರಿಟೀಷ್ ಸಂಗ್ರಹಕಾರ ಕರ್ನಲ್ ಮೆಕೆಂಜೆ ಮೊದಲಿಗೆ ಜನಪದರ ಬಾಳು ಬದುಕನ್ನು ಬರೆದಿಡುವ ಪ್ರಯತ್ನವನ್ನು ಮಾಡಿದರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು,
ಶನಿವಾರ ರಾಮನಗರದಲ್ಲಿ ಮಹಿಳಾ ಜಾನಪದ ಲೋಕೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಆನಂತರವೇ, ಪಾಡ್ದನಗಳು, ಹಾಸ್ಯಗಳು, ಗಾದೆ, ಒಗಟುಗಳನ್ನು ಬರೆಯುವ ಪ್ರಯತ್ನಗಳಾದವು. ಬಂಟರ ನಾಡಿನ ಕಾಡು ಕಥೆ, ಜನಪದ ರಾಮಾಯಣ ಮತ್ತು ದ್ರೌಪದಿ ವಸ್ತ್ರಾಭರಣದ ಪ್ರಸಂಗದ ಸ್ವಾರಸ್ಯವನ್ನು ತಿಳಿಸಿದರು.
ಕರಕುಶಲ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಹಳ್ಳಿಗಳು ಜನಪದದ ಬೇರುಗಳು. ವೈವಿಧ್ಯಮಯ ಸೋಪುಗಳಿಂದ ಮೈಕೈ ತೊಳೆಯುತ್ತೇವೆ. ಆದರೆ ಮನಸ್ಸನ್ನು ತೊಳೆಯಲಾಗುವುದಿಲ್ಲ. ಇಂದು ಜಾನಪದವನ್ನು ಮನಸ್ಸು ಮತ್ತು ಎದೆಗೆ ಹಾಕಬೇಕಿದೆ. ಇಂದು ಜಾನಪದವನ್ನು ಉಳಿಸಲು, ಗಿಡ ಮರಗಳಂತೆ ಪಾತಿ ಮಾಡಿ, ನೀರುಣಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ 140 ಕೋಟಿ ಜನಸಂಖ್ಯೆಗೆ 400 ಕೋಟಿ ಮೊಬೈಲುಗಳಿವೆ. ನಾವು ಮೊಬೈಲ್ ಕೈಯಲ್ಲಿ ಹಿಡಿದಿದ್ದೇವೆಯೋ ಅಥವಾ ಮೊಬೈಲ್ ನಮ್ಮ ಕೈ ಹಿಡಿದಿದೆಯೋ ತಿಳಿಯುತ್ತಿಲ್ಲ. ಜನಪದರು ಮಣ್ಣಿನ ಜೊತೆಗಿನ ನಂಟನ್ನು ಬಿಟ್ಟಿಲ್ಲ. ನೀರಿನ ಜೊತೆ, ಗುಡುಗು ಮಿಂಚಿನ ಜೊತೆ ಮಾತನಾಡುತ್ತಿದ್ದರು. ಮಣ್ಣಿನ ಗಮಲು ಮರೆಯಾಗಿದೆ. ಇಂದು ನಾವು ಊರು, ತೇರು, ಹಬ್ಬ, ಜಾತ್ರೆ, ಅಜ್ಜ-ಅಜ್ಜಿಯರ ಸಂಬಂಧಗಳನ್ನು ಮರೆಯುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಯುವಜನೋತ್ಸವ ಉದ್ಘಾಟನೆ ಮಾಡಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ, ಜಾನಪದ ಪರಿಷತ್ತಿಗೆ ವಿಶ್ವ ಮಾನ್ಯತೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಾನಪದಕ್ಕೆ ಅಳಿವಿಲ್ಲ. ಯಾವತ್ತೂ ಜನಪದರೇ ಮುಂದಿರುತ್ತಾರೆ. ಮೆರವಣಿಗೆಯಲ್ಲಿ ಜನಪದರನ್ನು ಹಿಂಬಾಲಿಸುತ್ತೇವೆ ಎಂದು ಹೇಳಿದರು.
ನಮ್ಮ ಮುಂದಿನ ತಲೆಮಾರಿಗೆ ಜನಪದ ವರ್ಗಾವಣೆ, ಬೆಳವಣಿಗೆ, ಅಭಿವೃದ್ಧಿಗಾಗಿ ನಾನು ಯುವಕರಿಗೆ ಕಲೆ ಕಲಿಸುವ ನಿಟ್ಟಿನಲ್ಲಿ ದತ್ತಿನಿಧಿ ನೀಡಿರುವೆ. ಸರಕಾರ ಬದ್ದತೆಯಿಂದ ಕಲೆ ಉಳಿವಿಗೆ ಅನುದಾನ ಕೊಡಬೇಕು. ಜಾನಪದ ಜಾತ್ರೆಯನ್ನು ಮತ್ತೆ ಸರಕಾರ ಆರಂಭಿಸಬೇಕು ಎಂದು ಅವರು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಿಳಾ ಜಾನಪದ ವಿದ್ವಾಂಸೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ಮಹಿಳೆಯರಲ್ಲಿ ಯಾವುದೇ ಪ್ರದರ್ಶಕ ಕಲೆಗಳು ಇಲ್ಲ. ನಾಟಿ ಪದಗಳು, ಜೋಗುಳದ ಹಾಡುಗಳು, ದೇವರ ಪದಗಳು, ಸೋಬಾನೆ ಪದಗಳು ಮಾತ್ರ ಚಾಲ್ತಿಯಲ್ಲಿವೆ. ಬುಡಕಟ್ಟು ಹೆಣ್ಣುಮಕ್ಕಳು ಈ ವಿಚಾರದಲ್ಲಿ ಮುಂದಿದ್ದಾರೆ. ಜನಪದ ರಾಮಾಯಣದಲ್ಲಿ ರಾವಣನ ಒಳ್ಳೆಯ ಗುಣಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಾಮನಗರದ ಅನ್ನದಾನೇಶ್ವರನಾಥ ಸ್ವಾಮಿ ವಹಿಸಿದ್ದರು. ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕ ಟ್ರಸ್ಟಿಗಳಾದ ಆದಿತ್ಯ ನಂಜರಾಜ್ ಸ್ವಾಗತಿಸಿದರು, ತಂಬೂರಿ ಶಿವಣ್ಣ ಮತ್ತು ತಂಡದವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಡಳಿತ ಮಂಡಳಿ ಸದಸ್ಯರಾದ ಬಸವಲಿಂಗಯ್ಯ, ಬಾಲಕೃಷ್ಣ ಹೆಗಡೆ, ವಿ.ಎಲ್.ಪಾಟೀಲ್, ಡಾ.ವೇಮಗಲ್ ನಾರಾಯಣಸ್ವಾಮಿ, ಎಚ್.ಆರ್.ಸುಜಾತಾ ಉಪಸ್ಥಿತರಿದ್ದರು. ಡಾ.ಶಿವರಾಜ್ ಬ್ಯಾಡರಹಳ್ಳಿ ನಿರೂಪಿಸಿದರು, ಡಾ.ರವಿ ಯು.ಎಂ ವಂದಿಸಿದರು, ಡಾ.ಸಂದೀಪ್ ಎಸ್ ನಿರ್ವಹಣೆ ಮಾಡಿದರು,