ಬಿಡದಿ ವಿದ್ಯುತ್ ಘಟಕದಲ್ಲಿ ಅವಘಡ ಕುರಿತು ತಾಂತ್ರಿಕ ತನಿಖೆ: ಸಚಿವ ಕೆ.ಜೆ.ಜಾರ್ಜ್
ರಾಮನಗರ : ಬಿಡದಿಯಲ್ಲಿನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬಿಸಿ ಬೂದಿ ಹಾರಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ತಾಂತ್ರಿಕ ತನಿಖೆ ನಡೆಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬಿಡದಿಯ ತ್ಯಾಜ್ಯದಿದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ತಾಂತ್ರಿಕ ವಿಚಾರವಾಗಿದ್ದು, ತನಿಖೆಯ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತ್ಯಾಜ್ಯ ಘಟಕದಿಂದ ಬೂದಿ ಹೊರಹೋಗುವ ಪೈಪ್ ನಲ್ಲಿ ಬ್ಲಾಕ್ ಆಗಿದ್ದು, ಕಾರ್ಮಿಕರು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಅದರ ಪೈಪ್ ದ್ವಾರ ತೆರೆದಿದ್ದರಿಂದ ಏಕಾಏಕಿ ಬಿಸಿ ಬೂದಿ ಹಾರಿ ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದೆ. ದುರಂತದಲ್ಲಿ ಐವರಿಗೆ ಗಾಯವಾಗಿದ್ದು, ಈ ಪೈಕಿ ಒಬ್ಬ ಕಾರ್ಮಿಕ ಮಂಗಳವಾರ ಮೃತಪಟ್ಟಿದ್ದಾರೆ. ಮೃತರು ಮತ್ತು ಗಾಯಾಳುಗಳಿಗೆ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹಿಟಾಚಿ ಸಂಸ್ಥೆ ತಂತ್ರಜ್ಞಾನ ಪಾಲುದಾರರಾಗಿದ್ದು, ಐಎಸ್‍ಜಿಇಸಿ ಸಂಸ್ಥೆ ಈ ಸ್ಥಾವರವನ್ನು ಸ್ಥಾಪಿಸಿ, ನಿರ್ವಹಿಸುತ್ತಿದೆ. ಇನ್ನೂ ಅದನ್ನು ಕೆಪಿಸಿಎಲ್ ಗೆ ವಹಿಸಿಕೊಟ್ಟಿಲ್ಲ. ಇದೀಗ ಘಟಕದ ಪರಿಶೀಲನೆ ಹಂತದಲ್ಲಿ ಘಟನೆಯೊಂದು ನಡೆದಿದೆ. ಎಲ್ಲವನ್ನೂ ಸರಿಪಡಿಸಿಕೊಂಡು ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕೇವಲ ವಿದ್ಯುತ್ ಉತ್ಪಾದನೆಯೊಂದೇ ಈ ಘಟಕ ಸ್ಥಾಪನೆಯ ಮೂಲ ಉದ್ದೇಶವಲ್ಲ. ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವುದು ಉದ್ದೇಶ. ಈ ಘಟಕದಲ್ಲಿ ಪ್ರತಿನಿತ್ಯ 600 ಮೆಟ್ರಿಕ್ ಟನ್ ತ್ಯಾಜ್ಯ ಬಳಸಿ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಜಾರ್ಜ್ ತಿಳಿಸಿದರು.