ಸಂಡೂರಿನಲ್ಲಿ ನಡೆಯದ ಜನಾರ್ದನ ರೆಡ್ಡಿ ಆಟ | ಸಂತೋಷ್ ಲಾಡ್, ನಾಗೇಂದ್ರ ರಣತಂತ್ರಕ್ಕೆ ತತ್ತರಿಸಿದ ಬಿಜೆಪಿ

Update: 2024-11-23 15:49 GMT

ಉಪಚುನಾವಣೆಯಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆದಿರುವ ಕಾಂಗ್ರೆಸ್, ತನ್ನ ಭದ್ರಕೋಟೆ ಸಂಡೂರಿನಲ್ಲೂ ಜಯಭೇರಿ ಬಾರಿಸಿದೆ.

ಸಂಡೂರಿನಲ್ಲಿ ಜನಾರ್ದನ ರೆಡ್ಡಿ ಆಟದ ಮುಂದೆ ಕಾಂಗ್ರೆಸ್ ಆಟ ನಡೆಯದು ಎಂದುಕೊಂಡವರಿಗೆಲ್ಲ ಗೆಲುವಿನ ಮೂಲಕವೇ ಕಾಂಗ್ರೆಸ್ ಉತ್ತರ ಕೊಟ್ಟಿದೆ. ಸಂಡೂರಿನಲ್ಲಿ ಬಂಗಾರು ಹನಮಂತುಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದೇ ರೆಡ್ಡಿ ಒತ್ತಾಯದ ಮೇಲೆ. ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ಬಿಜೆಪಿ ಪಕ್ಷವು ಕಡೆಗೆ ರೆಡ್ಡಿ ಶಿಫಾರಸ್ಸಿನಂತೆ ಟಿಕೆಟ್ ನೀಡಿತ್ತು . 2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ರೆಡ್ಡಿಯವರ ಕೆಆರ್​ಪಿಪಿ‌ ಕಾರಣವಾಗಿತ್ತು.

ಸಂಡೂರಿನಲ್ಲಿ ಬಿಜೆಪಿ ಪಡೆದ ಮತಗಳು ಮತ್ತು ಕೆಆರ್​ಪಿಪಿ‌ ಪಡೆದ ಮತಗಳೇ ಕ್ರೋಢೀಕರಣಗೊಂಡರೂ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಸುಲಭ ಎಂಬ ಲೆಕ್ಕಾಚಾರ ಇತ್ತು. ಬಹಳ ಸಮಯದಿಂದ ಬಳ್ಳಾರಿಯಿಂದ ದೂರವೇ ಇರಬೇಕಾಗಿ ಬಂದಿದ್ದ ರೆಡ್ಡಿಗೆ ಕಡೆಗೂ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಸಿಕ್ಕಿತ್ತು. ಬರುತ್ತಲೇ ಅವರಿಂದ ಜಿಲ್ಲೆಯಲ್ಲಿ ಮ್ಯಾಜಿಕ್ ಸೃಷ್ಟಿಯಾಗಲಿದೆ, ಮತ್ತದರ ಮೊದಲ ಸ್ಯಾಂಪಲ್‌ ಸಂಡೂರು ವಿಧಾನಸಭೆ ಉಪ ಚುನಾವಣೆಯಲ್ಲಿನ ಬಿಜೆಪಿಯ ಗೆಲುವೇ ಆಗಿರಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಮತ್ತು ಅಂಥ ಮ್ಯಾಜಿಕ್ ಸೃಷ್ಟಿಸುವ ಮೂಲಕ ಬಿಜೆಪಿಯಲ್ಲಿ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳುವ ಅನಿವಾರ್ಯತೆ ರೆಡ್ಡಿಗೂ ಇತ್ತು. ಈಗ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ.

ಕಾಂಗ್ರೆಸ್ ಸಂಡೂರು ಕ್ಷೇತ್ರವನ್ನು ತನ್ನ ಕೋಟೆಯಾಗಿಯೇ ಉಳಿಸಿಕೊಳ್ಳುವ ಮೂಲಕ ಬಿಜೆಪಿಯ ಕನಸ್ಸನ್ನೂ ರೆಡ್ಡಿ ಕನಸನ್ನೂ ನುಚ್ಚು ನೂರು ಮಾಡಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲಿಸುವ ಹೊಣೆಯನ್ನು ಸಿದ್ದರಾಮಯ್ಯ ವಹಿಸಿದ್ದು ಸಚಿವ ಸಂತೋಷ್ ಲಾಡ್ ಮತ್ತು ನಾಗೇಂದ್ರ ಅವರಿಗೆ. ಅಲ್ಲಿ ಮತ್ತೆ ರೆಡ್ಡಿ ಎಂಟ್ರಿ ಕೊಡಲು ಆಗದ ಹಾಗೆ ಮಾಡಲು ಕಾಂಗ್ರೆಸ್‌ಗೆ ಈ ಗೆಲುವು ಅನಿವಾರ್ಯವಾಗಿತ್ತು.

ಸಿದ್ದರಾಮಯ್ಯ ಅದೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆಂದರೆ, ಮೂರು ದಿನ ಸಂಡೂರಿನಲ್ಲಿಯೇ ಉಳಿದು ಪಕ್ಷದ ಪರ ಭರ್ಜರಿ ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ ಅವರ ವರ್ಚಸ್ಸು ಗೆದ್ದಿದೆ. ಬಂಗಾರು ಹನಮಂತುವನ್ನು ಸೋಲಿಸುವ ಮೂಲಕ ರೆಡ್ಡಿಯನ್ನು ಜನರು ಹೊರಗೇ ಇಟ್ಟಿದ್ದಾರೆ.

13 ವರ್ಷಗಳ ಕಾಲ ಬಳ್ಳಾರಿ ಪ್ರವೇಶಿಸಲು ಸಾಧ್ಯವಾಗದೇ ಇದ್ದುದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಸವಾಲು ಹಾಕಿದ್ದ ರೆಡ್ಡಿ ವಿರುದ್ಧ ಸಿದರಾಮಯ್ಯ ಕೂಡ ಜಿದ್ದಿಗೆ ಬಿದ್ದವರಂತೆ ನಿಂತಿದ್ದರು. ಮತ್ತು ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುವುದರೊಂದಿಗೆ ಸಿದ್ದರಾಮಯ್ಯ ಕೂಡ ಗೆದ್ದಂತಾಗಿದೆ.

ಬಳ್ಳಾರಿಯಲ್ಲಿ ಮತ್ತು ಬಿಜೆಪಿಯಲ್ಲಿ ಮತ್ತೆ ಬೇರೂರುವ ರೆಡ್ಡಿ ಕನಸು ಪೋಸ್ಟ್ಫೋನ್ ಆದಂತಾಗಿದೆ. ಆದರೆ ಕಾಂಗ್ರೆಸ್ ಗೆಲುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ತುಕಾರಾಂ 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆಗ ರೆಡ್ಡಿಯ ಕೆಆರ್​ಪಿಪಿ‌ ಪಕ್ಷದ ಅಭ್ಯರ್ಥಿ 31,375 ಮತ ಪಡೆದಿದ್ದರು.

ಈ ಬಾರಿ ತುಕಾರಾಂ ಪತ್ನಿ ಅನ್ನಪೂರ್ಣ ಅವರು 9649 ಮತಗಳಿಂದ ಗೆದ್ದಿದ್ದಾರೆ. ಸೋತು ಕೈಚೆಲ್ಲಿದ ಜನಾರ್ದನ ರೆಡ್ಡಿ ಅವರು ಈಗ ಕಾಂಗ್ರೆಸ್ ವಿರುದ್ದ ಹಣದ ಹೊಳೆ ಆರೋಪ ಮಾಡಿರುವುದು ಇನ್ನೂ ಹಾಸ್ಯಾಸ್ಪದವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News