ತಪ್ಪಾಯ್ತು ಕ್ಷಮಿಸಿಬಿಡಿ… ಕ್ಷಮೆಯಾಚಿಸಿದ ಮಡಿಲ ಮೀಡಿಯಾ ಮಾಲಕ!

Update: 2025-03-30 22:16 IST
ತಪ್ಪಾಯ್ತು ಕ್ಷಮಿಸಿಬಿಡಿ… ಕ್ಷಮೆಯಾಚಿಸಿದ ಮಡಿಲ ಮೀಡಿಯಾ ಮಾಲಕ!
  • whatsapp icon

ದೇಶದ ಮಡಿಲ ಮೀಡಿಯಾಗಳ ಪಿತಾಮಹ ಎಂದೇ ಹೇಳಬಹುದಾದ ಚಾನಲ್ ನ ಮಾಲಕರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನಮ್ಮ ಚಾನಲ್ ನಿಂದ ದೊಡ್ಡ ಪ್ರಮಾದವಾಗಿದೆ. ನಾವೇ ಶುರು ಮಾಡಿದ ಅಪಪ್ರಚಾರ ಅಭಿಯಾನವನ್ನು ಇತರ ಚಾನಲ್ ಗಳು ಅನುಸರಿಸಿದರು. ನಮ್ಮ ಸಂಪಾದಕರು ಹಾಗು ವರದಿಗಾರರಿಂದ ಆಗ ದೊಡ್ಡ ಪ್ರಮಾದವಾಗಿದೆ. ನಾನು ನೇರವಾಗಿ ಅದರಲ್ಲಿ ಭಾಗಿಯಾಗಿರಲಿಲ್ಲವಾದರೂ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಾಗೆ ಬಹಿರಂಗ ಕ್ಷಮೆ ಕೋರಿದವರು ಝೀ ನ್ಯೂಸ್ ನ ಮಾಲಕ, ಒಂದು ಕಾಲದ ಮೀಡಿಯಾ ಮೊಗಲ್ ಸುಭಾಷ್ ಚಂದ್ರ. ಅರೇ.. ನ್ಯೂಸ್ ಚಾನಲ್ ಮಾಲಕರೊಬ್ಬರು ದಿಢೀರನೇ ಇಷ್ಟೊಂದು ಪ್ರಾಮಾಣಿಕರಾಗಿದ್ದು ಹೇಗೆ? ಅವರು ತಮ್ಮ ಪ್ರಮಾದವನ್ನು ಸ್ವೀಕರಿಸಿ ಹೀಗೆ ಕ್ಷಮೆ ಯಾಚನೆ ಮಾಡಲು ಕಾರಣವೇನು ಅಂತ ನೀವು ಯೋಚಿಸುವುದು ಖಚಿತ.

ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡಾಗ ಅದು ಆತ್ಮಹತ್ಯೆ ಅಲ್ವೇ ಅಲ್ಲ. ಅದೊಂದು ಕೊಲೆ ಅಂತ ಈ ದೇಶದ ಮಡಿಲ ಮೀಡಿಯಾಗಳು ಏನಿಲ್ಲವೆಂದರೂ ಮೂರ್ನಾಲ್ಕು ತಿಂಗಳು ಸತತ ಅಭಿಯಾನ ನಡೆಸಿದವು. ತಮ್ಮ ವಾದಕ್ಕೆ ಪೂರಕವಾಗಿ ಅವರು ಇಡೀ ಬಾಲಿವುಡ್ ಅನ್ನೇ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟರು. ಅಲ್ಲಿರುವ ಎಲ್ಲರೂ ಮಹಾ ಖದೀಮರು, ಅವರೆಲ್ಲರೂ ಸೇರಿಕೊಂಡು ಸುಶಾಂತ್ ಎಂಬ ಪ್ರತಿಭಾವಂತನನ್ನು ಮುಗಿಸಿಬಿಟ್ಟರು ಎಂದು ಈ ಮಡಿಲ ಮೀಡಿಯಾಗಳು ಹೇಳಿದ್ದೇ ಹೇಳಿದ್ದು.

ಆಗ ಈ ಮೀಡಿಯಾಗಳು ಅತ್ಯಂತ ಹೆಚ್ಚು ಟಾರ್ಗೆಟ್ ಮಾಡಿದ್ದು ಸುಶಾಂತ್ ಅವರ ಗೆಳತಿ ನಟಿ ರಿಯಾ ಚಕ್ರಬರ್ತಿಯನ್ನು. ಆಕೆ ಮಹಾ ಮಾರಿ, ಆಕೆ ಡ್ರಗ್ಸ್ ವ್ಯಸನಿ, ಆಕೆ ಡ್ರಗ್ಸ್ ಸರಬರಾಜು ಮಾಡುವವಳು, ಆಕೆ ಹಾಗೆ ಆಕೆ ಹೀಗೆ ಅಂತ ತಿಂಗಳುಗಟ್ಟಲೆ ಆಕೆಯನ್ನು, ಆಕೆಯ ಕುಟುಂಬವನ್ನು ಚಿಂದಿ ಚಿಂದಿ ಮಾಡಿಬಿಟ್ಟೆವು ಇಲ್ಲಿನ ಮಡಿಲ ಮೀಡಿಯಾಗಳು.

ಆ ಘೋರ ಅಪಪ್ರಚಾರ ಅಭಿಯಾನದಲ್ಲಿ ಆಗ ಮುಂಚೂಣಿಯಲ್ಲಿದ್ದವರು ಸುಧೀರ್ ಚೌಧರಿ ಸಂಪಾದಕತ್ವದ ಝೀ ನ್ಯೂಸ್, ಅರ್ನಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿ, ರಾಹುಲ್ ಶಿವಶಂಕರ್ ಹಾಗು ನಾವಿಕ ಕುಮಾರ್ ಸಂಪಾದಕತ್ವದ ಟೈಮ್ಸ್ ನೌ, ಅಂಜನಾ ಓಂ ಕಶ್ಯಪ್ ನೇತೃತ್ವದಲ್ಲಿ ಆಜ್ ತಕ್. ಇವರಲ್ಲದೆ ಇನ್ನೂ ಒಂದಿಷ್ಟು ಚಾನಲ್ ಗಳೂ ಇದೇ ಅಪಪ್ರಚಾರದಲ್ಲಿ ತೊಡಗಿದ್ದರೂ, ಅತ್ಯಂತ ಆಕ್ರಮಣಕಾರಿಯಾಗಿ, ನಿರಂತರ ಹಸಿ ಹಸಿ ಸುಳ್ಳು ಹೇಳಿ ರಿಯಾ ಚಕ್ರಬರ್ತಿಯನ್ನು ದೊಡ್ಡ ಮಾಫಿಯಾ ಎಂಬಂತೆ ಬಿಂಬಿಸಿದ್ದು ಈ ನಾಲ್ಕು ದೊಡ್ಡ ಚಾನಲ್ ಗಳು.

ಆದರೆ ಈಗ ಈ ಪೈಕಿ ಒಂದು ಚಾನಲ್ ನ ಮಾಲಕರು ಸ್ವತಃ ಮುಂದೆ ಬಂದು ಆ ಇಡೀ ಅಪಪ್ರಚಾರವನ್ನು ಮೊದಲು ಶುರು ಮಾಡಿದ್ದೇ ನಮ್ಮ ಚಾನಲ್ ಎಂದು ಘೋಷಿಸಿದ್ದಾರೆ. ಅದಕ್ಕಾಗಿ ಸ್ವತಃ ಅವರು ಕ್ಷಮೆ ಯಾಚಿಸಿದ್ದಾರೆ. ತಮ್ಮ ಚಾನಲ್ ನ ಸಿಬ್ಬಂದಿ ಕೂಡ ಕ್ಷಮೆ ಯಾಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದಕ್ಕೆಲ್ಲ ಕಾರಣವಾಗಿದ್ದು ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆ ಬಳಿಕ ಸಲ್ಲಿಸಿರುವ ಕ್ಲೋಶರ್ ರಿಪೋರ್ಟ್. ಅದರಲ್ಲಿ ರಿಯಾ ಚಕ್ರಬರ್ತಿ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯ ಇಲ್ಲ. ಆಕೆ ಇದರಲ್ಲಿ ಯಾವ ರೀತಿಯಲ್ಲೂ ಆರೋಪಿಯಲ್ಲ ಎಂದು ಹೇಳಿರುವುದು.

ಆದರೆ ಸುಭಾಷ್ ಚಂದ್ರ ಹೀಗೆ ಸಾರ್ವಜನಿಕವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು, ಕ್ಷಮೆ ಯಾಚಿಸಿದ್ದು ಅವರ ಹೃದಯ ವೈಶಾಲ್ಯದಿಂದಾಗಲಿ, ಪಶ್ಚಾತ್ತಾಪದಿಂದಾಗಲಿ ಅಲ್ಲ. ಅವರ ಕ್ಷಮೆಯಾಚನೆ ಹಿಂದೆ ಒಂದು ದೊಡ್ಡ ರಾಜಕೀಯವಿದೆ, ಸೇಡಿದೆ.

ರಿಯಾ ಚಕ್ರಬರ್ತಿ ವಿರುದ್ಧ ಅಪಪ್ರಚಾರ ಅಭಿಯಾನ ನಡೆಸಿದಾಗ ಝೀ ನ್ಯೂಸ್ ಪ್ರಧಾನ ಸಂಪಾದಕರಾಗಿದ್ದವರು ಭಟ್ಟಂಗಿ ಆಂಕರ್ ಗಳಲ್ಲಿ ಅಗ್ರಗಣ್ಯರಾಗಿದ್ದ ಸುಧೀರ್ ಚೌಧರಿ. ಆದರೆ ಸುಭಾಷ್ ಚಂದ್ರ ಹಾಗು ಸುಧೀರ್ ನಡುವೆ ಸಂಬಂಧ ತೀವ್ರ ಹದಗೆಟ್ಟು ಸುಧೀರ್ ಝೀ ನ್ಯೂಸ್ ನಿಂದ ಹೊರಬಂದು ಆಜ್ ತಕ್ ಸೇರಿದ್ದಾರೆ, ಮುಂದಿನ ತಿಂಗಳು ಅವರು ದೂರದರ್ಶನಕ್ಕೆ ಹೋಗುವ ವರದಿಯೂ ಬಂದಿದೆ.

ಬಿಜೆಪಿ ಜೊತೆ ಅತ್ಯಂತ ಆತ್ಮೀಯರಾಗಿದ್ದ ಸುಭಾಷ್ ಚಂದ್ರ ಅವರ ಸಂಬಂಧ ಅಲ್ಲಿ ಯಾವ್ಯಾವುದೋ ಕಾರಣಗಳಿಂದ ಕೆಟ್ಟಿತು, ಅವರ ರಾಜ್ಯಸಭಾ ಸ್ಥಾನವೂ ಬಿಜೆಪಿ ಸಹಕರಿಸದೇ ರಿನೀವಲ್ ಆಗಲಿಲ್ಲ, ಹಾಗಾಗಿ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು ಸುಭಾಷ್ ಚಂದ್ರ. ಆದರೆ ಮೋದಿ ಭಟ್ಟಂಗಿತನದಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ್ದ ಸುಧೀರ್ ಚೌಧರಿ ಮಾತ್ರ ಸುಭಾಷ್ ಹೇಳಿದ ಹಾಗೆ ಝೀ ನ್ಯೂಸ್ ನಲ್ಲಿ ಬಿಜೆಪಿ ವಿರುದ್ಧ ಮಾತಾಡಲು ನಿರಾಕರಿಸಿದರು.

ತನ್ನ ಮಾಲಕತ್ವದ ಚಾನಲ್ ನ ಸಂಪಾದಕ ತನಗೇ ತಿರುಗುಬಾಣ ಆದ ಎಂದು ಸುಭಾಷ್ ತೀವ್ರ ಸಿಟ್ಟಾದರು. ಕೊನೆಗೆ ಸುಧೀರ್ ಚಾನಲ್ ನಿಂದ ಹೊರಬಂದರು. ಈಗ ರಿಯಾ ಚಕ್ರಬರ್ತಿ ಅಮಾಯಕಿ ಎಂದು ಸಿಬಿಐ ಹೇಳಿದ ಕೂಡಲೇ ಸುಭಾಷ್ ಚಂದ್ರಗೆ ಮತ್ತೆ ಸುಧೀರ್ ನೆನಪಾಗಿದ್ದಾರೆ. ತನ್ನ ಮಾಜಿ ಸಂಪಾದಕನನ್ನು ಕುಟುಕಲು ಇದಕ್ಕಿಂತ ಒಳ್ಳೆಯ ಸಂದರ್ಭ ಇನ್ನೊಂದಿಲ್ಲ ಎಂದು ನಿರ್ಧರಿಸಿ ಸುಭಾಷ ಚಂದ್ರ ಸುಧೀರ್ ಹೆಸರು ಹೇಳದೆಯೇ ಸುಧೀರ್ ವಿರುದ್ಧ ಕಿಡಿ ಕಾರಿದ್ದಾರೆ. ಅಂದಿನ ಸಂಪಾದಕ ಹಾಗು ಸಿಬ್ಬಂದಿ ಆ ಅಪಪ್ರಚಾರ ನಡೆಸಿದ್ದಾರೆ ಎಂದು ಘೋಷಿಸಿ ಬಿಟ್ಟಿದ್ದಾರೆ.

ಇಲ್ಲಿ ಮುಖ್ಯ ವಿಷಯ ಏನಂದರೆ, ಮಾಲಕ ಹಾಗು ಸಂಪಾದಕನ ನಡುವೆ ಬಿರುಕು ಬಂದಾಗ, ಸ್ವತಃ ಮಾಲಕನೇ ತನ್ನ ಚಾನಲ್ ನ ಬಂಡವಾಳ ಬಯಲು ಮಾಡಿದ್ದಾರೆ. ಅಂದಿನ ಸಂಪಾದಕನೇ ಇದನ್ನೆಲ್ಲಾ ಮಾಡಿದ್ದಾನೆ ಎಂದು ಘಂಟಾಘೋಶವಾಗಿ ಸಾರಿದ್ದಾರೆ. ಆದರೆ ಇದೇ ಝೀ ನ್ಯೂಸ್ ಹಾಗು ಇತರ ಭಟ್ಟಂಗಿ ಚಾನಲ್ ಗಳು ಕಳೆದೊಂದು ದಶಕದಲ್ಲಿ ಇಂತಹ ಅದೆಷ್ಟು ಅಪಪ್ರಚಾರ ಅಭಿಯಾನ ನಡೆಸಿಲ್ಲ? ಅದೆಷ್ಟು ಹಸಿ ಹಸಿ ಸುಳ್ಳನ್ನೇ ಸುದ್ದಿ ಎಂದು ಪ್ರಸಾರ ಮಾಡಿಲ್ಲ? ಅದೆಷ್ಟು ದ್ವೇಷ ಹರಡುವ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿಲ್ಲ?

ಅದನ್ನೇ ಆಲ್ಟ್ ನ್ಯೂಸ್ ಝುಬೇರ್ ಅವರು ಸುಭಾಷ್ ಚಂದ್ರಗೆ ಈಗ ನೆನಪಿಸಿ ಕೇಳಿದ್ದಾರೆ. ರಿಯಾ ಪ್ರಕರಣದಲ್ಲಿ ಕ್ಷಮೆ ಕೇಳಿದ ಹಾಗೇ ಮುಸ್ಲಿಮರ ವಿರುದ್ಧ ಮಾಡಿರುವ ಅದೆಷ್ಟು ಸುಳ್ಳು ಹಾಗು ದ್ವೇಷ ತುಂಬಿದ ಕಾರ್ಯಕ್ರಮಗಳಿಗೂ ನೀವು ಕ್ಷಮೆ ಕೇಳ್ತೀರಾ ಎಂದು ಕುಟುಕಿದ್ದಾರೆ. ಕೊರೊನ ಸಂದರ್ಭದಲ್ಲಿ ತಬ್ಲೀಗಿ ಜಮಾತ್ ವಿರುದ್ಧ ಝೀ ನ್ಯೂಸ್ ಮಾಡಿದ್ದ ಸುಳ್ಳು ಸುದ್ದಿಗಳ ಪಟ್ಟಿಯನ್ನೇ ಝುಬೇರ್ ಅವರು ಸುಭಾಷ್ ಎದುರು ಇಟ್ಟಿದ್ದಾರೆ.

ಆದರೆ ಅದಕ್ಕೆಲ್ಲ ಕ್ಷಮೆ ಕೇಳುವಷ್ಟು ವಿಶಾಲ ಹೃದಯಿ ಇನ್ನೂ ಆಗಿಲ್ಲ ಸುಭಾಷ ಚಂದ್ರ ರಿಯಾ ಚಕ್ರಬರ್ತಿ ಎಂಬ ಹೆಣ್ಣು ಮಗಳನ್ನು ಒಬ್ಬ ಮಾಫಿಯಾ ಡಾನ್ ತರ ಚಿತ್ರಿಸುವಲ್ಲಿ ಮಹಿಳಾ ಸಂಪಾದಕರೇ ಅದೆಷ್ಟು ದೊಡ್ಡ ಪಾತ್ರ ವಹಿಸಿದ್ದರು ಅಂತ ಒಮ್ಮೆ ನೆನಪಿಸಿಕೊಳ್ಳಿ. ಅಂಜನಾ ಓಂ ಕಶ್ಯಪ್, ನಾವಿಕ ಕುಮಾರ್ ರಂತವರು ರಿಯಾ ವಿರುದ್ಧ ಮಾಡಿದ ಸುಳ್ಳು ಸುದ್ದಿಗಳಿಗೆ ಲೆಕ್ಕವಿದೆಯೇ? ಈಗ ಸಿಬಿಐ ವರದಿ ಬಂದಿರುವಾಗ ನಾವಿಕ ಕುಮಾರ್, ಅಂಜನಾ ಓಂ ಕಶ್ಯಪ್ ಎಲ್ಲಿದ್ದಾರೆ? ಯಾಕೆ ಅವರು ಮುಂದೆ ಬಂದು ತಮ್ಮ ಪಾತ್ರ ಏನಿತ್ತು ಎಂಬ ಬಗ್ಗೆ ಮಾತಾಡಲ್ಲ? ಯಾಕೆ ಕ್ಷಮೆ ಯಾಚಿಸುವುದಿಲ್ಲ? ಈ ದೇಶದಲ್ಲಿ ಮಾಧ್ಯಮವನ್ನು, ಸಮಾಜವನ್ನು ಹಾಳು ಮಾಡುವಲ್ಲಿ ಇಲ್ಲಿನ ಟಿವಿ ನ್ಯೂಸ್ ಚಾನಲ್ ಗಳು ಹಾಗು ಅದರ ಆಂಕರ್ ಗಳ ಪಾತ್ರ ಅತ್ಯಂತ ನಿರ್ಣಾಯಕವಾದದ್ದು ತಾವು ಮಾಡಿದ್ದಕ್ಕೆಲ್ಲ ಈ ಭಟ್ಟಂಗಿ ಹಾಗು ದ್ವೇಶಕೋರ ಆಂಕರ್ ಗಳು ಕ್ಷಮೆಯಾಚಿಸಲು ಪ್ರಾರಂಭಿಸಿದರೆ ಆ ಕ್ಷಮೆ ಯಾಚನೆಯ ಪಟ್ಟಿ ಮುಗಿಯುವುದೇ ಕಷ್ಟ!

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News