ಉಡುಪಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಐಟಿ ಉದ್ಯೋಗಿಗಳು!

Update: 2025-03-17 11:05 IST
Editor : Ashik | Byline : ನಝೀರ್ ಪೊಲ್ಯ
ಉಡುಪಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಐಟಿ ಉದ್ಯೋಗಿಗಳು!
  • whatsapp icon

ಉಡುಪಿ : ಶೀತಲ ವಾತಾವರಣದಲ್ಲಿ ಬೆಳೆಯುವ ಕಾಶ್ಮೀರಿ ಕೇಸರಿಯನ್ನು ಕರಾವಳಿಯ ಬಿಸಿ ವಾತಾವರಣದಲ್ಲೂ ಬೆಳೆಸಬಹುದು ಎಂಬುದನ್ನು ಐಟಿ ಉದ್ಯೋಗಿ ಯುವಕರು ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ಅವರು ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಕೇಸರಿ ಕೃಷಿ ಮೇಲಿನ ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡಿದ್ದಾರೆ.

ಸಾಫ್ಟ್‌ವೇರ್ ಡೆವಲಪಿಂಗ್ ಉದ್ಯಮಿಗಳಾದ ಅನಂತ್‌ಜಿತ್ ಉಡುಪಿ ಹಾಗೂ ಅಕ್ಷತ್ ಬಿ.ಕೆ. ಮಣಿಪಾಲ ಈ ಸಾಹಸಕ್ಕೆ ಕೈ ಹಾಕಿದವರು. ಕಾಲೇಜು ಹಂತದಿಂದ ಸ್ನೇಹಿತರಾಗಿದ್ದ ಇವರು ಒಟ್ಟಿಗೆ ಐಟಿ ಉದ್ಯೋಗಿಗಳಾಗಿದ್ದಾರೆ. ಈಗ ಅದರೊಂದಿಗೆ ಇವರು, ಕೆ.ಜಿ.ಗೆ 4ರಿಂದ 7 ಲಕ್ಷ ರೂ. ಮೌಲ್ಯ ಹೊಂದಿರುವ ಕಾಶ್ಮೀರಿ ಕೇಸರಿಯನ್ನು ಉಡುಪಿಯಲ್ಲೇ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

6-7 ಡಿಗ್ರಿ ಉಷ್ಣಾಂಶ :

ಉಡುಪಿ ಸಮೀಪದ ಬೈಲೂರಿನ ಅನಂತ್‌ಜಿತ್ ವಾಸದ ಮನೆಯ ಮೇಲಿನ ಮಹಡಿಯಲ್ಲಿ ಈ ಕೇಸರಿ ಕೃಷಿಯನ್ನು ನಡೆಸಲಾಗುತ್ತಿದೆ. 180 ಚದರ ಅಡಿ ಕೋಣೆಯನ್ನು ಇದಕ್ಕಾಗಿ ಅವರು ಬಳಸಿ ಕೊಂಡಿದ್ದಾರೆ. ಕೇಸರಿ ಬೆಳೆಗೆ ಮುಖ್ಯವಾಗಿ ತಂಪಿನ ವಾತಾವರಣ ಅತೀ ಅಗತ್ಯ. ಸುಮಾರು 6 ಡಿಗ್ರಿ ಉಷ್ಣಾಂಶವನ್ನು ನಿರಂತರವಾಗಿ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಇವರು ಕೋಣೆಯಲ್ಲಿ ಎಸಿ ಚಿಲ್ಲರ್ ಹಾಗೂ ಹ್ಯುಮಿಡಿಫೈರ್ ಯಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಈ ವಾತಾವರಣದಲ್ಲಿ ಇವರು ಕೇಸರಿ ಕೃಷಿ ಮಾಡುತ್ತಿದ್ದಾರೆ. ಕ್ಕೊಕಸ್ ಸ್ಯಾಟಿವಸ್‌ನ ಹೂವಿನಿಂದ ಪಡೆಯುವ ಮಸಾಲೆ ಕೇಸರಿ ಕ್ರೋಕಸ್ ಇದರ ಉತ್ತಮ ಗುಣಮಟ್ಟದ ಗಡ್ಡೆಯನ್ನು ಕಾಶ್ಮೀರದ ಬೆಳೆಗಾರರ ಮೂಲಕವೇ ತರಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದಕ್ಕೆ ಅವರು ಆರಂಭದಲ್ಲಿ 10 ಲಕ್ಷ ರೂ. ಬಂಡವಾಳ ಹೂಡಿದ್ದಾರೆ.

ಒಂದು ಹೂವು, 3 ತುಣುಕು :

ಒಂದು ಗೆಡ್ಡೆ ಬೆಳೆದ ನಂತರ ಹೂವು ಬಿಡುತ್ತದೆ. ಆ ಹೂವಿನಲ್ಲಿ ಮೂರು ಶಲಾಕಾಗ್ರ(ಸ್ಟಿಗ್ಮಾ)ಗಳು ಹೊರ ಬರುತ್ತವೆ. ಆ ಸಣ್ಣ ಸಣ್ಣ ಕುಸುಮಗಳೇ ಕೇಸರಿ. ಒಂದು ಹೂವಿನಲ್ಲಿ ಮೂರು ಕೇಸರಿ ತುಣುಕುಗಳು ಮಾತ್ರ ಸಿಗುತ್ತವೆ. 50 ಕೆಜಿ ಕೇಸರಿ ಗೆಡ್ಡೆ ಬೆಳೆಸಿದರೆ ಸುಮಾರು 30 ಗ್ರಾಂ ಕೇಸರಿ ಪಡೆಯಲು ಸಾಧ್ಯವಾಗುತ್ತದೆ. ಇವರು ಇಲ್ಲಿ ಕುಂಕುಮ ಮತ್ತು ಹಳದಿ ಬಣ್ಣದ ಎರಡು ಕೇಸರಿಗಳನ್ನು ಬೆಳೆಯುತ್ತಿದ್ದಾರೆ.

‘‘ಆಗಸ್ಟ್‌ನಲ್ಲಿ ಕೇಸರಿ ಕೃಷಿಯನ್ನು ಆರಂಭಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಇದು ಹೂವು ಬಿಡುತ್ತದೆ. ಎರಡು ತಿಂಗಳು ನಿರಂತರ ಹೂವು ಬಿಡುತ್ತದೆ. ಡಿಸೆಂಬರ್‌ಗೆ ಹೂವು ಬಿಡುವುದು ಕೊನೆಗೊಳ್ಳುತ್ತದೆ. ಡಿಸೆಂಬರ್‌ನಿಂದ ಜನವರಿಯ ವರೆಗೆ ಕೇಸರಿ ಗೆಡ್ಡೆಯ ಬೆಳವಣಿಗೆಯ ಅವಧಿಯಾಗಿದೆ. ಜನವರಿಗೆ ಅದು ಕೂಡ ಕೊನೆಯಾಗುತ್ತದೆ. ಮತ್ತೆ ಒಣಗಿದ ಗೆಡ್ಡೆಯನ್ನು ತೆಗೆದಿಡಬೇಕು. ಮತ್ತೆ ಆಗಸ್ಟ್‌ಗೆ ಕೋಲ್ಡ್ ವಾತಾವರಣ ಸೃಷ್ಟಿಸಿ ಬೆಳೆಸಲಾಗುತ್ತದೆ’’ ಎನ್ನುತ್ತಾರೆ ಅನಂತ್‌ಜಿತ್.

ಗೆಡ್ಡೆ ಕಾಶ್ಮೀರದಿಂದಲೇ ಖರೀದಿ :

ಗೆಡ್ಡೆಯನ್ನು ನಾವು ಕಾಶ್ಮೀರದಿಂದಲೇ ತರಿಸಿಕೊಳ್ಳಬೇಕು. ಇಲ್ಲಿ ಎಲ್ಲೂ ಸಿಗುವುದಿಲ್ಲ. ಕಾಶ್ಮೀರಕ್ಕೆ ಹೋಗಿ ಅಲ್ಲಿ ಕೇಸರಿ ಬೆಳೆಯುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಿ ಖರೀದಿಸಿ ತರಬೇಕು.

‘‘ವಿವಿಧ ಗಾತ್ರದಲ್ಲಿ ಗೆಡ್ಡೆಗಳು ಬರುತ್ತವೆ. ಒಂದು 20 ಗ್ರಾಂಗಿಂತ ಜಾಸ್ತಿ ತೂಗುವ ಮತ್ತು ಇನ್ನೊಂದು 10 ಗ್ರಾಂಗಿಂತ ಕಡಿಮೆ ತೂಗುವ ಗೆಡ್ಡೆಗಳು. ದೊಡ್ಡ ಗಾತ್ರದ ಗೆಡ್ಡೆ ಹೂವು ಬಿಡುತ್ತದೆ. ಆದರೆ ಸಣ್ಣ ಗಾತ್ರದ ಗೆಡ್ಡೆ ಹೂವು ಬಿಡುತ್ತದೆ ಎಂಬುದು ಖಾತ್ರಿಯಾಗಿ ಹೇಳಲು ಆಗದು. ಕೆಲವೊಮ್ಮೆ ಹೂವು ಬಿಡುವುದು ಇದೆ. ಹಾಗಾಗಿ ನಾವು ಅಲ್ಲಿ ಹೋಗಿಯೇ ಅದನ್ನು ಆರಿಸಿ ತೆಗೆದುಕೊಂಡು ಬರಬೇಕಾಗುತ್ತದೆ’’ ಎಂದು ಅವರು ಮಾಹಿತಿ ನೀಡಿದರು.

‘‘ಜುಲೈ ವೇಳೆ ನಾವು ಕಾಶ್ಮೀರಕ್ಕೆ ತೆರಳಿ ಈ ಗೆಡ್ಡೆಯನ್ನು ಖರೀದಿಸಿ ತರುತ್ತೇವೆ. ಆಗಸ್ಟ್‌ನಲ್ಲಿ ಒಂದು ತಿಂಗಳ ಕಾಲ ಯಾವುದೇ ಬೆಳಕು ಇಲ್ಲದ ಡಾರ್ಕ್ ರೂಮ್‌ನಲ್ಲಿ ಅವುಗಳನ್ನು ಇಡುತ್ತೇವೆ. ಈ ಅವಧಿಯಲ್ಲಿ ಗೆಡ್ಡೆಯಲ್ಲಿ ಮೊಳಕೆ ಬರುತ್ತದೆ. ಅಕ್ಟೋಬರ್ ಮೊದಲ ವಾರದಲ್ಲಿ ಹೂವು ಬಿಡುತ್ತದೆ. ಹೀಗೆ ಡಿಸೆಂಬರ್‌ವರೆಗೆ ಮೂರು ತಿಂಗಳ ಕಾಲ ಹೂವು ಬಿಡುತ್ತದೆ’’ ಎಂದು ಅನಂತ್‌ಜಿತ್ ಮಾಹಿತಿ ನೀಡಿದ್ದಾರೆ.

ನಾಲ್ಕು ವರ್ಷಗಳ ನಂತರ ಲಾಭ : 

ಕೇಸರಿಯಿಂದ ಬರುವ ಲಾಭಾಂಶ ಲೆಕ್ಕಾಚಾರ ಹಾಕಲು ನಾಲ್ಕು ವರ್ಷ ಕಾಯಬೇಕಾಗಿದೆ. ನಮ್ಮದು ಈಗ ಎರಡನೇ ವರ್ಷ ಆಗಿದೆ. ಇನ್ನು ಎರಡು ವರ್ಷ ಕಾಯಬೇಕಾಗಿದೆ. ನಂತರ ಲಾಭ ಬರುತ್ತದೆ ಎನ್ನುತ್ತಾರೆ ಕೇಸರಿ ಕೃಷಿಕ ಅನಂತ್‌ಜಿತ್.

‘‘ಮೊದಲ ವರ್ಷದಲ್ಲಿ 50 ಕೆ.ಜಿ. ಕೇಸರಿ ಬಂದರೆ, ಎರಡನೇ ವರ್ಷದಲ್ಲಿ 110 ಕೆ.ಜಿ.ಯಾಗಿತ್ತು. ಈ ವರ್ಷ ಇನ್ನಷ್ಟೇ ನೋಡಬೇಕಾಗಿದೆ. ಸುಮಾರು 250 ಕೆ.ಜಿ. ಕೇಸರಿ ಬರುವ ನಿರೀಕ್ಷೆ ಇದೆ. ಮುಂದಿನ ವರ್ಷ 400-500 ಕೆ.ಜಿ. ಕೇಸರಿ ಬೆಳೆಸುವ ಗುರಿಯನ್ನು ಹೊಂದಿದ್ದೇವೆ. ಇದರ ಮಾರಾಟ ವನ್ನು ಸದ್ಯ ನಾವು ಸ್ಥಳೀಯವಾಗಿ ಮಾಡಿದ್ದೇವೆ. ಗ್ರಾಂಗೆ 400 ರೂ.ನಂತೆ ಮಾರಾಟ ಮಾಡಿದ್ದೇವೆ. ಸ್ಥಳೀಯವಾಗಿ ಇದಕ್ಕೆ ಉತ್ತಮ ಬೇಡಿಕೆ ಇದೆ’’ ಎಂದು ಅನಂತ್‌ಜಿತ್ ಮಾಹಿತಿ ನೀಡಿದರು.

ಉಡುಪಿ ಹಾಗೂ ಮಂಗಳೂರಿನ ಬಿಸಿ ವಾತಾವರಣದಲ್ಲೂ ಕೇಸರಿ ಬೆಳೆಸಲು ಸಾಧ್ಯ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಇದಕ್ಕೆ ಬೇಕಾಗಿರುವುದು ಕೇಸರಿ ಗೆಡ್ಡೆ. ತಂಪಿನ ವಾತಾವರಣ ಹಾಗೂ ತೇವಾಂಶ ನಿಯಂತ್ರಣ ಮಾಡಿ ಹೂವು ಬಿಡುವಂತೆ ಮಾಡಬಹುದು. ನಾವು ಐಟಿ ಉದ್ಯಮದ ಜೊತೆಗೆ ಈ ಕೇಸರಿ ಕೃಷಿ ಮಾಡುತ್ತಿದ್ದೇವೆ.

-ಅನಂತ್‌ಜಿತ್ ಉಡುಪಿ, ಕೇಸರಿ ಬೆಳೆಗಾರರು




Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ನಝೀರ್ ಪೊಲ್ಯ

contributor

Similar News