ವಿಂಡ್ಸರ್ ಮ್ಯಾನರ್ : 1,403 ಕೋಟಿ ರೂ. ಮೌಲ್ಯದ ಆಸ್ತಿ ವಕ್ಫ್‌ ಮಂಡಳಿಯ ಕೈ ತಪ್ಪಿತೇ ?

Update: 2025-04-21 14:27 IST
ವಿಂಡ್ಸರ್ ಮ್ಯಾನರ್ : 1,403 ಕೋಟಿ ರೂ. ಮೌಲ್ಯದ ಆಸ್ತಿ ವಕ್ಫ್‌ ಮಂಡಳಿಯ ಕೈ ತಪ್ಪಿತೇ ?
  • whatsapp icon

ಬೆಂಗಳೂರು; ಮುಖ್ಯಮಂತ್ರಿಯವರ ಅಧಿಕೃತ ನಿವಾಸದಿಂದ ಕಣ್ಣಳತೆಯಲ್ಲಿರುವ ಅತ್ಯಂತ ಭಾರೀ ಪ್ರಮಾಣದ ಮತ್ತು ಅಮೂಲ್ಯ ಭಾಗವಾಗಿರುವ ವಿಂಡ್ಸರ್ ಮ್ಯಾನರ್ ಹೋಟೆಲ್‌ ಅನ್ನು ವಕ್ಫ್‌ ಆಸ್ತಿಯನ್ನಾಗಿ ಪುನರ್ ಸ್ಥಾಪಿಸಲು ವಕ್ಫ್‌ ಮಂಡಳಿಯು ಮೊಕದ್ದಮೆ ಹೂಡಬೇಕು ಎಂದು ಉಪ ಲೋಕಾಯುಕ್ತರಾಗಿದ್ದ ಎನ್‌ ಆನಂದ್‌ ಅವರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿಯೇ ಉಪ ಲೋಕಾಯುಕ್ತರಾಗಿದ್ದ ಎನ್‌ ಆನಂದ್‌ ಅವರು ಸಲ್ಲಿಸಿದ್ದ 27,000ಕ್ಕೂ ಹೆಚ್ಚು ಪುಟಗಳುಳ್ಳ ವರದಿಯಲ್ಲಿ ಈ ಶಿಫಾರಸ್ಸನ್ನು ಮಾಡಲಾಗಿದೆ. ಆದರೆ ಸಿದ್ದರಾಮಯ್ಯ ಅವರು ವಕ್ಫ್‌ ಆಸ್ತಿ ಕಬಳಿಕೆ ಕುರಿತು ತನಿಖೆ ನಡೆಸಲು ಅಂದಿನ ಬಿಜೆಪಿ ಸರ್ಕಾರವು ಹೊರಡಿಸಿದ್ದ ಅಧಿಸೂಚನೆಯನ್ನೇ ರದ್ದುಗೊಳಿಸಿದ್ದರು.

ಆನಂದ್‌ ಅವರು ಸಲ್ಲಿಸಿದ್ದ ವರದಿಗೂ ಮಾನ್ಯತೆ ಸಿಗಲಿಲ್ಲ. ವಕ್ಫ್‌ ಸ್ವತ್ತುಗಳ ಪೈಕಿ ಅತ್ಯಮೂಲ್ಯ ಮತ್ತು ಅತೀ ಹೆಚ್ಚು ಆದಾಯ ತಂದುಕೊಡಬಹುದಾಗಿದ್ದ ವಿಂಡ್ಸರ್ ಮ್ಯಾನರ್ ಹೋಟೆಲ್‌ ಆಸ್ತಿಯೂ ಸಹ ವಕ್ಫ್‌ ಆಸ್ತಿಯನ್ನಾಗಿ ಇದುವರೆಗೂ ಪುನರ್ ಸ್ಥಾಪಿಸಲಾಗಿಲ್ಲ. ಅಂದಾಜು 1,403 ಕೋಟಿ ರೂ. ಬೆಲೆಬಾಳಲಿರುವ ಆಸ್ತಿಯು ವಕ್ಫ್‌ ಮಂಡಳಿಯಿಂದ ಕೈ ತಪ್ಪಿದಂತಾಗಿದೆ. ಇದಕ್ಕೆ ಸರ್ಕಾರದ ನಿರ್ಧಾರವೇ ಮೂಲ ಕಾರಣ ಎನ್ನಲಾಗಿದೆ.

ಶಾಸಕ ಶ್ರೀ ಶೈಲಪ್ಪ ಬಿದರೂರು ಅವರು ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು (1998-99) ಇದೇ ವಿಂಡ್ಸರ್ ಮ್ಯಾನರ್ ಹೋಟೆಲ್‌ನ ಕುರಿತು 13 ಪುಟಗಳ ವರದಿಯನ್ನೂ ನೀಡಿತ್ತು. ಈ ಸಮಿತಿ ವರದಿ ನೀಡಿದ ನಂತರ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಸರ್ಕಾರವನ್ನು ರಚಿಸಿದ್ದವು. ಆದರೆ ಈ ಯಾವ ಸರ್ಕಾರಗಳ ಅವಧಿಯಲ್ಲಿಯೂ ವಿಂಡ್ಸರ್ ಮ್ಯಾನರ್ ಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸ್ಸನ್ನು ಜಾರಿಗೊಳಿಸಲಿಲ್ಲ ಮತ್ತು ವರದಿಯತ್ತ ಕಣ್ಣಾಡಿಸಲೂ ಇಲ್ಲ!

ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್‌ ಅವರು ನೀಡಿದ್ದ ತನಿಖಾ ವರದಿ ಮತ್ತು ಶ್ರೀಶೈಲಪ್ಪ ಬಿದರೂರು ಅವರು ನೀಡಿದ್ದ ವರದಿ ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳನ್ನು 'ದಿ ಫೈಲ್‌' ಅರ್ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ವಕ್ಫ್‌ ಆಸ್ತಿಯಲ್ಲಿರುವ ವಿಂಡ್ಸರ್ ಮ್ಯಾನರ್ ಹೋಟೆಲ್‌ ಅನ್ನು 90 ವರ್ಷಗಳವರೆಗೆ ವಕ್ಫ್‌ ಮಂಡಳಿಯು ನೀಡಿರುವ ಗುತ್ತಿಗೆ, ನಿಗದಿಪಡಿಸಿರುವ ಬಾಡಿಗೆ ದರ ಮತ್ತು ಈ ಸಂಬಂಧದ ಎಲ್ಲಾ ಒಪ್ಪಂದ ಪತ್ರಗಳು, ನ್ಯಾಯಾಲಯದಲ್ಲಿ ಹೂಡಿರುವ ವ್ಯಾಜ್ಯ ಪ್ರಕರಣಗಳಲ್ಲಿನ ಆದೇಶಗಳು, ಶ್ರೀಶೈಲಪ್ಪ ಬಿದರೂರು ಅವರು ನೀಡಿದ್ದ ವರದಿಯನ್ನು ಉಪ ಲೋಕಾಯುಕ್ತರಾಗಿದ್ದ ಆನಂದ್‌ ಅವರು ತನಿಖಾ ವರದಿಯಲ್ಲಿ ಅವಲೋಕಿಸಿರುವುದು ಗೊತ್ತಾಗಿದೆ.

1,403 ಕೋಟಿ ರೂ. ಬೆಲೆಬಾಳುವ ಆಸ್ತಿ:

ವಕ್ಫ್‌ ಆಸ್ತಿಯಲ್ಲಿರುವ ವಿಂಡ್ಸರ್ ಮ್ಯಾನರ್ ಹೋಟೆಲ್‌ ಮತ್ತು ಇದಕ್ಕೆ ಹೊಂದಿಕೊಂಡಿರುವ ಕಟ್ಟಡಗಳು 1,65,762 ಚದರ ಅಡಿ ಹೊಂದಿವೆ. ಇದು ಸ್ಯಾಂಕಿ ರಸ್ತೆಯಲ್ಲಿರುವ ಬಿಡಿಎ ಜಂಕ್ಷನ್‌ ಬಳಿ ಇದೆ. ಸರ್ಕಾರಿ ಮಾರ್ಗಸೂಚಿಯ ಪ್ರಸಕ್ತ ಬೆಲೆ ಪ್ರಕಾರ ಒಂದು ಚದರ ಮೀಟರ್ ಗೆ 2,83,500 ರೂ. ಇದೆ. ಇದರ ಪ್ರಕಾರ 469.99 ಕೋಟಿ ರೂ. ಬೆಲೆಬಾಳಲಿದೆ. ಮಾರುಕಟ್ಟೆಯ ದರ ಪ್ರಕಾರ (ಸರ್ಕಾರಿ ಮಾರ್ಗಸೂಚಿಗಿಂತ ಮೂರು ಪಟ್ಟು ಹೆಚ್ಚಳ) ಅಂದಾಜು 1,403.97 ಕೋಟಿ ರೂ. ಮೌಲ್ಯದ್ದಾಗಿದೆ.

ಉಪ ಲೋಕಾಯುಕ್ತ ಆನಂದ್‌ ಅವರು ನೀಡಿದ್ದ ವರದಿಯನ್ನು ಸ್ವೀಕರಿಸಿ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸಿದ್ದರೇ 1,403.97 ಕೋಟಿ ರೂ. ಬೆಲೆಬಾಳುವ ಆಸ್ತಿಯು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯದ್ದಾಗುತ್ತಿತ್ತು.

ತನಿಖಾ ವರದಿಯ ತೀರ್ಮಾನದಲ್ಲೇನಿದೆ?

ರಾಜ್ಯ ಸರ್ಕಾರವು ನೇಮಿಸಿದ್ದ ಆಡಳಿತಾಧಿಕಾರಿಯ ನಿಯಂತ್ರಣದಲ್ಲಿದ್ದಾಗಲೇ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ವಿಂಡ್ಸರ್ ಮ್ಯಾನರ್ ಗೆ ಸಂಬಂಧಿಸಿದ ಗುತ್ತಿಗೆ ಮತ್ತು ಗುತ್ತಿಗೆಯನ್ನು ವಿಸ್ತರಿಸಲಾಗಿತ್ತು. ಈ ಅಕ್ರಮ ವಹಿವಾಟುಗಳಿಗೆ ಅಗಾ ಅಲಿ ಆಸ್ಕರ್ ವಕ್ಫ್ ಮತ್ತು ಆರ್. ರೆಹಮಾನ್ ಖಾನ್ ಹಾಗೂ ಮುತವಲ್ಲಿಗಳು ಕಾರಣ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ತನ್ನ ವರದಿಯಲ್ಲಿ ಹೇಳಿದೆ. ಈಗಾಗಲೇ ಹೇಳಿದಂತೆ, ಗುತ್ತಿಗೆ ಪತ್ರ ಮತ್ತು ವಿಸ್ತೃತ ಗುತ್ತಿಗೆ ಪತ್ರದ ಅಡಿಯಲ್ಲಿ ವಕ್ಫ್‌ನ ಆಸ್ತಿಯ ಸ್ವಾಧೀನವನ್ನು ಹಂಚಿಕೊಳ್ಳಲು ವ್ಯವಸ್ಥಾಪಕ ಸಮಿತಿಯ ಸದಸ್ಯರು ಮತ್ತು ಸದರಿ ವಕ್ಫ್‌ನ ಸದಸ್ಯರು ಜವಾಬ್ದಾರರಾಗಿರುತ್ತಾರೆ ಎಂದು ದಾಖಲಿಸಿರುವುದು ತಿಳಿದು ಬಂದಿದೆ.

ಗುತ್ತಿಗೆ ಮತ್ತು ಗುತ್ತಿಗೆ ವಿಸ್ತರಣೆಯು ವಕ್ಫ್ ಅಥವಾ ವಕ್ಫ್ ಫಲಾನುಭವಿಗಳ ಹಿತಾಸಕ್ತಿಯಿಂದ ಕೂಡಿರಲಿಲ್ಲ. ರಾಜ್ಯಸಭಾ ಸದಸ್ಯ ಆರ್. ರೆಹಮಾನ್‌ ಖಾನ್‌ ಅವರು ಈ ಪ್ರಕ್ರಿಯೆಯಲ್ಲಿ ಒಳಗೊಂಡಿದ್ದಾರೆ ಎಂಬುದು ʼಹಿಂದೂʼ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಆಧರಿಸಿದೆ. ಮತ್ತು ವಿಂಡ್ಸರ್ ಮ್ಯಾನರ್ ಗೆ ವಕ್ಫ್‌ ಭೂಮಿ ಗುತ್ತಿಗೆ ಒಪ್ಪಂದವನ್ನು ಸಿದ್ಧಪಡಿಸಲಾಗಿದೆ ಎಂದು ರೆಹಮಾನ್‌ ಖಾನ್‌ ಅವರು ಹೇಳಿದ್ದಾರೆ. ಈ ಸುದ್ದಿಯ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ ಎಂದು ಉಪ ಲೋಕಾಯುಕ್ತ ಎನ್‌ ಆನಂದ್ ಅವರ ತನಿಖಾ ವರದಿಯಲ್ಲಿ ಹೇಳಲಾಗಿದೆ.

'ಅದೇ ರೀತಿ ಈ ವಿಷಯವು ವ್ಯಾಜ್ಯದಲ್ಲಿರುವುದರಿಂದ ವಕ್ಫ್ ಉದ್ದೇಶವನ್ನು ಪೂರೈಸಲು ಮತ್ತು ಫಲಾನುಭವಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ವಕ್ಫ್ ಆಸ್ತಿಯನ್ನು ಪುನಃಸ್ಥಾಪಿಸಲು ಮೊಕದ್ದಮೆ ಹೂಡುವುದು ಮಂಡಳಿಯ ಜವಾಬ್ದಾರಿಯಾಗಿದೆ,' ಎಂದು ಉಪ ಲೋಕಾಯುಕ್ತ ಆನಂದ್ ಅವರು ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಶ್ರೀಶೈಲಪ್ಪ ಬಿದರೂರು ಅವರ ವರದಿಯಲ್ಲೇನಿದೆ?:

ವಕ್ಫ್‌ ಅಧಿನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಏಕೈಕ ಕಂಪನಿಯೊಂದಕ್ಕೆ 90 ವರ್ಷಗಳವರೆಗೆ ಆಗಾ ಆಲಿ ಆಸ್ಕರ್ ವಕ್ಫ್‌ ಅನ್ನು ವಕ್ಫ್‌ ಮಂಡಳಿಯು ಗುತ್ತಿಗೆ ನೀಡಿದೆ. ಗುತ್ತಿಗೆ ಅವಧಿಯು ಮೊಟ್ಟಮೊದಲ ಬಾರಿಗೆ 30 ವರ್ಷಗಳಾಗಿದ್ದವು. ಮತ್ತು ಮೂವತ್ತು ವರ್ಷಗಳು ಮುಕ್ತಾಯಗೊಳ್ಳುವ ಮುನ್ನವೇ 50 ವರ್ಷಗಳಿಗೆ ಈ ಅವಧಿಯನ್ನು ವಿಸ್ತರಿಸಿದೆ. 'ಗುತ್ತಿಗೆ ಅವಧಿಯನ್ನು 30 ವರ್ಷಗಳ ಮೊದಲ ಅವಧಿಯು ಮುಕ್ತಾಯವಾದ ಬಳಿಕ ಪರಸ್ಪರ ಸಹಮತಿ ಮೇರೆಗೆ 20 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ ಎಂಬ ಮಂಡಳಿಯು ಗುತ್ತಿಗೆ ನೀಡುವಾಗ ಅನುಮೋದಿಸಿದ್ದ ಯೋಜನೆಯ (ಬಿ)ಯನ್ನು ಉಲ್ಳಂಘಿಸಿದೆ,' ಎಂದು ಸಮಿತಿಯು ವರದಿಯಲ್ಲಿ ದಾಖಲಿಸಿದೆ.

90 ವರ್ಷಗಳಿಗೆ ಗುತ್ತಿಗೆ ವಿಸ್ತರಣೆ, ನಿಯಮ ಉಲ್ಲಂಘನೆ:

ಗುತ್ತಿಗೆ ಅವಧಿಯು ಮುಕ್ತಾಯವಾಗುವ ಮೊದಲೇ, ಗುತ್ತಿಗೆ ಅವಧಿಯನ್ನು 30 ವರ್ಷಗಳಿಂದ 50 ವರ್ಷಗಳಿಗೂ ಆನಂತರ 90 ವರ್ಷಗಳಿಗೂ ವಿಸ್ತರಿಸಲಾಗಿದೆ. ಮುತವಲ್ಲಿಯಾಗಲೀ, ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯಾಗಲೀ ಗುತ್ತಿಗೆ ಅವಧಿಯನ್ನು ಹಂತ ಹಂತವಾಗಿ ವಿಸ್ತರಿಸಿರುವುದಕ್ಕೆ ಕಾರಣಗಳನ್ನು ತಿಳಿಸಿಲ್ಲ. ಗುತ್ತಿಗೆ ಅವಧಿಯನ್ನು ವಿಸ್ತರಿಸಿದವರ ವಿರುದ್ಧ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ಕ್ರಮ ಕೈಗೊಳ್ಳಬೇಕಿತ್ತು. ಹಾಗೆಯೇ ಹಿಂದಿನ ಗುತ್ತಿಗೆ ಅವಧಿಯನ್ನು ನಿಯಮಗಳಿಗೆ ಅನುಸಾರವಾಗಿ ವಿಸ್ತರಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕಿತ್ತು. ನಿಯಮಗಳಿಗೆ ಅನುಸಾರವಾಗದಿದ್ದಲ್ಲಿ 50 ವರ್ಷಗಳಿಂದ 90 ವರ್ಷಗಳಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದಿತ್ತು ಎಂದು ವರದಿಯಲ್ಲಿ ಹೇಳಿರುವುದು ತಿಳಿದು ಬಂದಿದೆ.

ಕರ್ನಾಟಕ ವಕ್ಫ್‌ ಮಂಡಳಿಯ ಆಡಳಿತಗಾರರು, ಗುತ್ತಿಗೆ ಅವಧಿಯನ್ನು 50 ವರ್ಷಗಳಿಂದ 90 ವರ್ಷಗಳಿಗೆ ವಿಸ್ತರಿಸುವ ಮುನ್ನವೇ ಮಂಡಳಿಯು ಕಾನೂನುಬಾಹಿರ ಗುತ್ತಿಗೆ ನಡೆಸಬೇಕಿತ್ತು. ಆ ಅವಧಿಯಲ್ಲಿದ್ದ ಕರ್ನಾಟಕ ವಕ್ಫ್‌ ಮಂಡಳಿಯ ಆಡಳಿತಗಾರರು 1964ರ ಕರ್ನಾಟಕ ವಕ್ಫ್‌ ಮಂಡಳಿಯ ನಿಯಮ 5(2)ನೇ ನಿಯಮದಲ್ಲಿನ ನಿರ್ದಿಷ್ಟಪಡಿಸಿರುವ ಕಾರ್ಯವಿಧಾನಗಳನ್ನು ಪಾಲಿಸಿಲ್ಲ. ಆದರೆ ಗುತ್ತಿಗೆ ಅವಧಿಯನ್ನು 50 ವರ್ಷಗಳಿಂದ 90 ವರ್ಷಗಳಿಗೆ ವಿಸ್ತರಿಸಲು ಅನುಮೋದನೆ ನೀಡಿದ್ದರು ಎಂದು ಸಮಿತಿಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮುಂದಿನ 40 ವರ್ಷಗಳಲ್ಲಿ ತಿಂಗಳಿಗೆ ರೂ. 17,200 ಬಾಡಿಗೆ:

1973ರಿಂದ 1978ರವರೆಗೆ ತಿಂಗಳ ಬಾಡಿಗೆ ಕೇವಲ 3,100 ರೂ. ಇತ್ತು. 2018ರಿಂದ 2023ರವರೆಗೆ ಬಾಡಿಗೆಯು 7,600 ಕ್ಕೇರಿತ್ತು.

ಗುತ್ತಿಗೆ ಅವಧಿಯ ವಿಸ್ತರಣೆಯಿಂದಾಗಿ ಸಿದ್ದರಾಮಯ್ಯ ಅವರು ಎರಡನೇ ಅವಧಿಯು ಪೂರ್ಣಗೊಳ್ಳುವ ಅಂದರೆ 2028ರ ಅಕ್ಟೋಬರ್ ವರೆಗೆ ಕೇವಲ 10,200 ರೂ. ವರೆಗೆ ಬಾಡಿಗೆ ದೊರೆಯಲಿದೆ. ಒಟ್ಟಾರೆ 2023ರ ಅಕ್ಟೋಬರ್ 15ರಿಂದ 2063ರ ಅಕ್ಟೋಬರ್ 15ರವರೆಗೆ 10,200 ರೂ. ಗಳಿಂದ 17,200 ರೂ.ಗಳಿಗೆ ಏರಿಕೆಯಾಗಲಿದೆ.

'ಇದು ಚಾಲ್ತಿಯಲ್ಲಿರುವ ಕಾನೂನಿಗೆ ವಿರುದ್ಧವಾಗಿದೆ. 30 ವರ್ಷಗಳವರೆಗೆ ಗುತ್ತಿಗೆ ನೀಡಿರುವುದು ವಕ್ಫ್‌ ಅಧಿನಿಯಮದ ಉಲ್ಲಂಘನೆಯಾಗಿದೆ. ಅಲ್ಲದೇ ವ್ಯವಹಾರವನ್ನು ವಕ್ಫ್‌ ಮಂಡಳಿಯ ಅನುಮತಿ ಮುದ್ರೆಯ ಜೊತೆಗೆ ವಕ್ಫ್‌ಗೆ ಅವಶ್ಯಕವಾಗಿರಬೇಕು ಅಥವಾ ಪ್ರಯೋಜನಕಾರಿಯಾಗಿರಬೇಕುಕ ಎಂಬ 1964ರ ವಕ್ಫ್‌ ನಿಯಮಾವಳಿಗಯ 5(1)ನೇ ನಿಯಮಕ್ಕೆ ವಿರುದ್ಧವಾಗಿದೆ,' ಎಂದು ಸಮಿತಿಯು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ನೋಟೀಸ್‌ ನೀಡಿ ಕೈತೊಳೆದುಕೊಂಡ ಮಂಡಳಿ:

ಅದೇ ರೀತಿ ಕರ್ನಾಟಕ ವಕ್ಫ್‌ ಮಂಡಳಿಯು ಗುತ್ತಿಗೆ ನೀಡಿದ್ದ ಜಾಗದಲ್ಲಿ ವಿಂಡ್ಸರ್ ಮ್ಯಾನರ್ ಹೋಟೆಲ್‌ ಹೆಚ್ಚುವರಿಯಾಗಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತ್ತು. ಆದರೂ ವಕ್ಫ್‌ ಮಂಡಳಿಯು ಈ ನಿರ್ಮಾಣ ಕಾರ್ಯದ ವಿರುದ್ಧವಾಗಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಹೋಟೆಲ್‌ ಆಡಳಿತ ಮಂಡಳಿಗೆ ಕೇವಲ ನೋಟೀಸ್‌ ಕೊಟ್ಟು ಕೈತೊಳೆದುಕೊಂಡಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೂಲ ದಾವೆಯು 1998-99ರವರೆಗೆ ಅಂದರೆ ಈ ವರದಿಯನ್ನು ಸದನಕ್ಕೆ ಮಂಡಿಸುವವರೆಗೆ ಇತ್ಯರ್ಥವಾಗಿರಲಿಲ್ಲ.

ದಾವೆ ಇತ್ಯರ್ಥದಲ್ಲಿರುವ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಅನಧಿಕೃತ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಮತ್ತು ಕಾನೂನುಬಾಹಿರ ಹೆಚ್ಚುವರಿ ನಿರ್ಮಾಣ ಕಾರ್ಯವನ್ನು ನಿಲ್ಲಿಸಬೇಕು ಎಂದು ತಡೆಯಾಜ್ಞೆ ಪಡೆಯಬೇಕಿತ್ತು. ಆದರೆ ವಕ್ಫ್‌ ಮಂಡಳಿಯು ಈ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಇದು ಹೋಟೆಲ್‌ ಆಡಳಿತ ವರ್ಗವು ನಿರ್ಮಿಸಿದ ಅನಧಿಕೃತ ನಿರ್ಮಾಣವನ್ನು ನಿಲ್ಲಿಸಲು ಸೂಕ್ತ ನ್ಯಾಯಾಲಯಕ್ಕೆ ಮೊರೆ ಹೋಗದೇ ನಿಷ್ಕ್ರಿಯವಾಗಿತ್ತು. ಇದು 1954ರ ವಕ್ಫ್‌ ಅಧಿನಿಯಮದ 15ನೇ ಪ್ರಕರಣದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ವಿವರಿಸಿದೆ.

ವಿಂಡ್ಸರ್ ಮ್ಯಾನರ್ ಹೋಟೆಲ್ ಮಾಲಕರಾದ ಐಟಿಸಿ ಗ್ರೂಪ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಫೆಬ್ರವರಿ 10, 2011ರಂದು ವಜಾಗೊಳಿಸಿತ್ತು. ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ಹೊರಹಾಕುವಿಕೆ) ಕಾಯ್ದೆಯಡಿಯಲ್ಲಿ ಮೂರು ತಿಂಗಳೊಳಗೆ ತೆರವು ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಾಗಮೋಹನ್ ದಾಸ್‌ ಪೀಠವು ನಿರ್ದೇಶನ ನೀಡಿತ್ತು.

ವಕ್ಫ್ ಮಂಡಳಿಯೊಂದಿಗೆ ಮಾಡಿಕೊಂಡ ಒಪ್ಪಂದವು ವಕ್ಫ್ ಮಂಡಳಿ ಕಾಯ್ದೆ 1951 ಮತ್ತು ತಿದ್ದುಪಡಿ ಮಾಡಿದ 1995 ರ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿರುವುದರಿಂದ, ತೆರವು ಪ್ರಕ್ರಿಯೆಯನ್ನು ಪ್ರಾರಂಭಿಸದಂತೆ ಕಾಯ್ದೆಯಡಿಯಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್, ವಜಾಗೊಳಿಸಿದ್ದರು. ಅಲ್ಲದೇ ಕಾಯ್ದೆಗಳು ಮತ್ತು ಮೊಕದ್ದಮೆ ಎರಡರಲ್ಲೂ ಅನುಗುಣವಾದ ನಿಬಂಧನೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗಮನಿಸಿದ್ದರು.

ಕರ್ನಾಟಕ ಸಾರ್ವಜನಿಕ ಆವರಣ ಕಾಯ್ದೆಯ ಸೆಕ್ಷನ್ 2(ಇ)(ವಿ) ಸಾಂವಿಧಾನಿಕವಾಗಿ ಮಾನ್ಯವಾಗಿದೆ ಮತ್ತು ಹೊಸ ವಕ್ಫ್ ಕಾಯ್ದೆ 1995 ಹಳೆಯ ಕಾಯ್ದೆ 1954 ರಲ್ಲಿರುವಂತೆಯೇ ನಿಬಂಧನೆಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದರು. ಹೈಕೋರ್ಟ್ ಫೆಬ್ರವರಿ 10, 2005 ರಲ್ಲಿ ನೀಡಿದ್ದ ಮಧ್ಯಂತರ ಆದೇಶದ ಪ್ರಕಾರ, ತೆರವು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹೋಟೆಲ್‌ಗೆ ತಿಂಗಳಿಗೆ ₹6 ಲಕ್ಷ ಪಾವತಿಸಲು ನ್ಯಾಯಮೂರ್ತಿ ನಾಗ್ ಮೋಹನ್ ದಾಸ್ ಅವರ ವಿಭಾಗೀಯ ಪೀಠ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ಜಿ.ಮಹಾಂತೇಶ್,

contributor

Similar News